Tuesday, August 21, 2007

ಇದು ನಮ್ಮ...

ಅದೊಂದು ೧೫ರಿಂದ ೨೦ ಅಡಿ ಎತ್ತರದ ಕಟ್ಟಡ. ಸುಮಾರು ೪೦ ಅಡಿ ಉದ್ದ ಮತ್ತೆ ೩೦ ಅಡಿ ಅಗಲದ ಕೋಣೆಯನ್ನ ಆ ಕಟ್ಟಡದಲ್ಲಿ ಮಾಡಿದ್ದಾರೆ. ಕೋಣೆಯ ಒಳಗೆ ಹೋಗಲು ಎರಡು ಮೆಟ್ಟಿಲುಗಳಿವೆ – ಕಟ್ಟಡದ ಎಡಭಾಗಕ್ಕೆ. ಮೆಟ್ಟಿಲು ಹತ್ತಿದ ತಕ್ಷಣ ಕಟ್ಟಡದ ಉದ್ದಕ್ಕೂ ಇರೋ ಜಗಲಿ ಬರುತ್ತೆ. ಅದನ್ನ ಧಾಟಿದರೆ ಕೋಣೆಗೆ ಪ್ರವೇಶ. ಆ ಕೋಣೆಯ ಪ್ರವೇಶವಾದ ಕೂಡಲೆ ಎದುರಿಗೋದು ಮೇಜು ಮತ್ತೆ ಕುರ್ಚಿ ಇದೆ. ಹಾಗೇ ಅಲ್ಲೇ ನಿಂತು ಬಲಕ್ಕೆ ತಿರುಗಿದರೆ ಸಾಲಾಗಿ ನಾಲ್ಕೈದು ಮಣೆಗಳಿವೆ. ಪ್ರತಿಯೊಂದು ಸಾಲಿನಲ್ಲೊ ಮಧ್ಯ ಸ್ವಲ್ಪ ಜಾಗ ಬಿಟ್ಟಿದ್ದಾರೆ – ಮಣೆಗಳ ಮಧ್ಯ – ಮುಂದಿನಿಂದ ಹಿಂದಿನವರೆಗೆ ಓಡಾಡೋಕೆ. ಬಲಭಾಗದ ಗೋಡೆಗೆ ಅವುಚಿಕೊಂಡಂತೆ ಎರಡು ಬೆಂಚು ಹಾಕಿದೆ. ಗಿಜಿ-ಗಿಜಿ ಅಂತ ಮಾತಾಡೋ ಶಬ್ಧ ಯಾವಾಗಲೂ. ಮಧ್ಯೆ ಮಧ್ಯೆ “ಏಯ್! ಏಯ್!!” ಅನ್ನೋ ಮಾತುಗಳು ಒಂದ್ ಕಡ್ಡಿಯನ್ನು ಆ ಮೇಜಿನಮೇಲೆ ಹೊಡೆದಾಗ ಬರೋ ’ಠಪ್’ ಅನ್ನೋದರಜೊತೆಗೆ ಕೇಳುತ್ತೆ. ಆಗ ಗಿಜಿ-ಗಿಜಿ ಸ್ವಲ್ಪ ಕಡಿಮೆ ಯಾಗುತ್ತೆ. ಒಂದೆರಡು ನಿಮಿಷಗಳಷ್ಟೆ! ಮತ್ತೆ ಗಿಜಿ-ಗಿಜಿ ಶುರು!

ಸರಿ, ಮೇಜಿನ ಹಿಂದಿದ್ದ ಕುರ್ಚಿಯಮೇಲೆ ಕುಳಿತಿದ್ದ ಮಧ್ಯವಯಸ್ಕ ಈಗ ಎದ್ದ. ಮೇಜಿನ ಹಿಂದಿದ್ದ ಸಣ್ಣ ಸಣ್ಣ ಮಕ್ಕಳನ್ನು ನೋಡಿ, “ಏಯ್! ಎಲ್ಲಾರೂ ಅ, ಆ, ಇ, ಈ ಬರೀರಿ. ಬಂದು ನೋಡ್ತಿನಿ ಈಗ” ಅಂದ್ರು. ಆ ಪಿಳ್ಳೆಗಳು ಮಣೆಯ ಕೆಳಗೆ ಇಟ್ಟ ಹಳೆಯ ಮಾಸಿದ ಕೆಂಪು-ನೀಲಿ, ಹಸಿರು-ಬಿಳಿ, ಹೀಗೆ ಹಲವಾರು ಬಣ್ಣ-ಬಣ್ಣದ ಕೈ ಚೀಲಗಳನ್ನ ಎಳೆದು ಅದರೊಳಗಿದ್ದ ಒಂದು ಕಪ್ಪಗಿನ ಸ್ಲೇಟು ತಗೋಳತ್ವೆ. ಕೆಲವು ತಗಡಿನಿಂದ ಮಾಡಿ ಮರದ ಕಟ್ಟು ಹಾಕಿದಾವಾದ್ರೆ, ಇನ್ನು ಕೆಲವು ಬಳಪದ ಕಲ್ಲಿನಿಂದ ಮಾಡಿದವು. ಕೆಲವಕ್ಕೆ ಕಟ್ಟೇ ಇಲ್ಲ. ಹೊಡೆತ ತಪ್ಪಿಸಿಕೊಳ್ಳಕ್ಕೆ ಬರೀಲೇ ಬೇಕು.

ಈ ಪಿಳ್ಳೆಗಳು ಇಷ್ಟೆಲ್ಲಾ ಮಾಡೊಹೊತ್ಗೆ, ಆ ಮಧ್ಯ ವಯಸ್ಕ ಎರಡನೇ ಮಣೆಯಲ್ಲಿದ್ದವರ ಬಳಿ ಹೋಗಾಗಿತ್ತು. ಅವರಿಗೆ “ಪುಸ್ತಕ ತಂದಿದೇರೇನ್ರೋ ಎಲ್ಲಾ?” ಅಂತ ಗದರಿಸಿದ್ರು. ಎಲ್ಲಾರೂ ಮತ್ತೆ ಅದೇ ಮಾಸಿದ ಕೈ ಚೀಲಗಳಿಂದ ಇದ್ದ ಎರಡೇ ಪುಸ್ತಕಗಳಿಂದ ಒಂದನ್ನು ತೆಗೆದರು. ಹೆಚ್ಚೂಕಡಿಮೆ ಎಲ್ಲರ ಪುಸ್ತಕಗಳೂ ಹರಿದಿವೆ. ಮೊದಲೆರಡು ಮತ್ತೂ ಕೊನೆಯ ಹಲವಾರು ಪುಟಗಳೇ ಕಾಣೆಯಾಗಿವೆಯಾದರೂ ಪುಸ್ತಕವಂತೂ ಇದೆ! ಸರಿ, ’ಈತ ಗಣಪ. ಈಶನ ಮಗ ಗಣಪ’ ಓದಿಸಿಯಾಯ್ತು. ಇದು ಒಂದನೇ ತರಗತಿಯ ಮೊದಲನೇ ಪಾಠ!

ಮುಂದಿನವು ಅಕ್ಷರಮಾಲೆ ಬೆರೆಯುವಾಗ, ಅವರ ಹಿಂದಿನವು ಗಣಪ-ಈಶನ ಪಾಠ ಒಪ್ಪಿಸುವಾಗ ಅವರ ಹಿಂದೆ ಕೂತಿದ್ದ ಮಕ್ಕಳು ಎರಡನೇ ತರಗತಿಯ ಕನ್ನಡ ಮತ್ತು ಜೊತೆಗಿನದ್ದು ಓದುತ್ತಿದ್ದವು. ಓದುತ್ತಿದ್ದರೋ ಅಥವಾ ಹಾಗೆ ನಟಿಸುತ್ತಿದ್ದರೋ ಗೊತ್ತಿಲ್ಲ ಯಾಕೇಂದ್ರೆ ಸ್ವಲ್ಪ ಮಟ್ಟಿಗೆ ಗಿಜಿ-ಗಿಜಿ ಇತ್ತು! ಕೆಲವು ಮಗ್ಗಿ ಬಾಯಿ ಪಾಠ ಮಾಡುತ್ತಿದ್ದವು.

ಇನ್ನೊಂದು ಮೂಲೆಯಲ್ಲಿ ಒಂದು ಕಬ್ಬಿಣದ ಪೆಟ್ಟಿಗೆಯಿದೆ. ಆದರ ಪಕ್ಕದಲ್ಲಿ ಒಂದು ನೈಲಾನ್ ಚೀಲ. ಇವೆರಡೂ ನಾಲ್ಕೈದು ಇಟ್ಟಿಗೆಗಳ ಮೇಲೆ ಇಟ್ಟಿದ್ದಾರೆ. ಇಟ್ಟಿಗೆಗಳನ್ನ ಎರಡು ಅಂಗುಲದಷ್ಟು ಎತ್ತರದ ಮರಳಿನ ಕಟ್ಟೆ ಕಟ್ಟಿ ನೀರು ಹಾಕಿದ್ದಾರೆ – ಇರುವೆಗಳು ಚೀಲದಲ್ಲಿರುವ ತಿಂಡಿಗೆ ಹತ್ತಬಾರದು ಅಂತ.

ನಿಮಗೆ ಇಷ್ಟು ಹೊತ್ತಿಗೆ ಗೊತ್ತಾಗಿರಬೇಕು ನಾನು ಏನು ಹೇಳುತ್ತಿದ್ದೇನೆ ಅಂತ. ಇದು ನಮ್ಮ ಹಳ್ಳಿಗಳ ಏಕೋಪಾಧ್ಯಾಯ “ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗಳ” ಪರಿಸ್ಥಿತಿ. ಒಂದರಿಂದ ನಾಲ್ಕನೇ ತರಗತಿಯ ಮಕ್ಕಳು ಒಂದೇ ಕೋಣೆಯಲ್ಲಿ ಓದಬೇಕು. ಉಪಾಧ್ಯಾರಯೂ ಒಬ್ಬರೆ. ಅವರು ಒಂದು ತರಗತಿಯ ಒಂದು ಪಾಠ ಮುಗಿಸಿ ಮತ್ತೊಂದಕ್ಕೆ ಹೋಗಬೇಕು. ಇಂಥಾ ಶಾಲೆಗಳು ನೂರಾರು-ಸಾವಿರಾರು. ನಾನು ಓದುವಾಗ ನನ್ನ ಊರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿದ್ದ ಶಾಲೆಗಳೆಲ್ಲಾ ಇವೇ. ಕೆಲವರು ಸ್ವಲ್ಪ ಭಾಗ್ಯಶಾಲಿಗಳು. ಯಾಕೆಂತಿರ? ಅವರೇನಾದರೂ ’ಗ್ರಾಮ’ ಅಂತ ಕರೆಸಿಕೊಳ್ಳೊ ಊರಿನಲ್ಲಿದ್ದರೆ ಅವರಿಗೆ ’ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ’ ನಲ್ಲಿ ಓದೋ ಅವಕಾಶ ಇರುತ್ತೆ. ಏಳನೇ ತರಗತಿಯವರೆಗೆ ಇರತ್ತೆ ಆ ಶಾಲೆಯಲ್ಲಿ. ಅಲ್ಲಿಯ ಪರಿಸ್ಥಿತಿ ಸ್ವಮ್ಪ ಉತ್ತಮ. ನಾನು ನೋಡಿದ ಇಂಥಹ ಒಂದು ಶಾಲೆಯಲ್ಲಿ ಐದು ಕೋಣೆಗಳು. ಒಂದು “office room” ಅಂತ ಆಗಿತ್ತು. ಇನ್ನುಳಿದ ನಾಲ್ಕು ಕೋಣೆಗಳು: ಒಂದರಲ್ಲಿ ಒಂದು ಮತ್ತು ಎರಡನೇ ತರಗತಿ, ಇದೇ ಕೋಣೆಯ ಜಗುಲಿಯಲ್ಲಿ ಶಿಶುವಿಹಾರದ ಚಿಳ್ಳೆಗಳು; ಮತ್ತೊಂದರಲ್ಲಿ ಮೂರನೆ ಮತ್ತು ನಾಲ್ಕನೇ ತರಗತಿ, ಮತ್ತೊಂದರಲ್ಲಿ ಐದನೇ ತರಗತಿ – ಇದು ಸ್ವಲ್ಪ ದೊಡ್ಡದು ಯಾಕೇಂದ್ರೆ ನಮ್ಮಾರಿನ ಸುತ್ತಲಿನಿಂದೆಲ್ಲಾ ಉತ್ತೀರ್ಣರಾದ ಹುಡುಗರು ಇಲ್ಲಿಗೇ ಐದನೆ ತರಗತಿಗೆ ಬರೋದು; ಆರನೇ ಮತ್ತು ಏಳನೇ ತರಗತಿಗಳು ಅವರದೇ ಕೊಠಡಿಗಳು. ಏಳನೇ ತರಗತಿ ಹಿಡುಗರಿಗೆ ಮಾತ್ರ ಸಂಪೂರ್ಣವಾಗ್ ಬೆಂಚುಗಳು! ಉಳಿದೆಲ್ಲಾ ಹುಡುಗರು ಮಣೆಯ ಮೇಲೆಯೇ ಕೂರಬೇಕು. ಒಟ್ಟು ಸುಮಾರು ೫೦೦-೬೦೦ ಮಕ್ಕಳು ಇಲ್ಲಿ ಓದುತ್ತಾರೆ. ಉಪಾಧ್ಯಾರರು ಮಾತ್ರ ೫ ಅಥವಾ ೬ ಮಂದಿ. ಏನಿದು ಯಾವುದೋ News channel ನಲ್ಲಿ ಬರ್ಬೇಕಿರೋ ವರದಿ ಇಲ್ಲಿ ಅಪ್ಪಿತಪ್ಪಿ ಬಂತೇ ಅನ್ಕೋತಿದೀರ? ಇಲ್ಲ. ಇದು ನಿಜ. ಎಲ್ಲಿ ಬಂದರೇನು ಸ್ವಾಮಿ?

ಇದು ಯಾವುದೋ ಓಬೀರಾಯನ ಕಾಲದ ಕಥೆ ಅಂತಿದ್ದೀರ? ಅಲ್ಲ. ಈಗಕೂಡ ನಮ್ಮ ಹಳ್ಳಿಗಳ ಶಾಲೆಗಳ ಪರಿಸ್ಥಿತಿ ಇದೇ. ಸ್ವಲ್ಪ ಚೆನ್ನಾಗಿದೆ ಅಂತ ಕೇಳುತ್ತಿದ್ದೀನಿ – ಹಲವಾರು ಏಕೋಪಾಧ್ಯಾಯ ಪ್ರಾಥಮಿಕ ಶಾಲೆಗಳನ್ನ ಹಿರಿಯ ಪ್ರಾಥಮಿಕ (ಅಂದರೆ middle school) ಶಾಲೆಗಳನ್ನಾಗಿ ಮಾಡಿದ್ದಾರಂತೆ.

ಇಂಥಾ ಶಾಲೆಗಳಲ್ಲಿ ಓದುತ್ತಿರುವ ಹುಡುಗರಿಗೆ ಇಷ್ಟು ಕಷ್ಟ ಇದೆ ಅಂತ ಬೆಂಗಳೂರಿನಲ್ಲಿರುವ ಮಂದಿಗೆ ಹೇಗೆ ಗೊತ್ತಾಗಬೇಕು? ಐದನೇ ತರಗತಿಯಲ್ಲಿ ಮೊದಲಬಾರಿಗೆ ಆಂಗ್ಲ ಭಾಷೆ ಪ್ರಾರಂಭ. ಅಲ್ಲಿನ ಹುಡುಗರಿಗೆ ಐದನೇ ತರಗತಿಯಲ್ಲೇ A, B,C, D ಕಲಿತು ಅದೇ ವರ್ಷ ತಥೆಗಳನ್ನೆಲ್ಲಾ ಓದಬೇಕು. ಇದೊಂಥರಾ ಮುದ್ದಣ ಹೇಳಿದಂತೆ ನೀರಿಳಿಯದ ಗಂಟಲಲ್ಲಿ ಕಡುಬುತುರುಕಿದಂತಾಯ್ತು. ಅಲ್ಲಿನ ಉಪಾಧ್ಯಾಯರು ಆಂಗ್ಲ ಭಾಷೆಯನ್ನ ಕೇವಲ ಒಂದುಬಾರಿ ಓದಿ ಅದನ್ನ ಕನ್ನಡಕ್ಕೆ ತರ್ಜಿಮೆ ಮಾಡುತ್ತಾರೆ. ಮಾತು-ಕಥೆಗಳೆಲ್ಲಾ ಕನ್ನಡವೇ. ಆದು ನಮ್ಮ ಆಡು ಭಾಷೆ. ಸಹಜವಾಗಿ ಕನ್ನಡವೇ ಮುಂದು. ಇದೆಲ್ಲಾ ಮುಗಿಸಿ ಯಾರಾದರೂ ಹುಡುಗರು ಮುಂದೆ ಪ್ರೌಢಶಾಲೆಗೋ ಅಥವಾ pre-universityಗೋ ಆಂಗ್ಲ ಮಾಧ್ಯಮಕ್ಕೆ ಸೇರಿದರೆಂದರೆ ಮುಗಿಯಿತು. ಮೊದಲು ಅವರ ಕಣ್ಣುಗಳಲ್ಲಿ ಧಾರಾಕಾರವಾಗಿ ಗಂಗೆ ಹರಿಯುತ್ತಿರುತ್ತಾಳೆ – “ನಾನೇಕೆ ಇಂಥಾ ತಪ್ಪು ಮಾಡಿದೆ” ಅಂತ. ಅದು ಎರಡೂ ಆಗಬಹುದು, ಮೊದಲಿಂದ ಯಾಕೆ ಆಂಗ್ಲ ಭಾಷೆಯಲ್ಲಿ ಓದಲಿಲ್ಲ ಅಂತ, ಹಾಗೂ ಈಗೇಕೆ ಆಂಗ್ಲ ಮಾಧ್ಯಮಕ್ಕೆ ಸೇರಿದೆ ಅಂತ. ಅವರು ಆಂಗ್ಲ ಮಾಧ್ಯಮಕ್ಕೆ ಹೋಗದಿದ್ದರೆ ಅವರ ಆಂಗ್ಲ ಭಾಷೆಯ ಮೇಲಿನ ಹಿಡಿತ ಚೆನ್ನಾಗುವುದೇ ಇಲ್ಲ. ಅದಿಲ್ಲದಿದ್ದರೆ ಮುಂದೆ ಓದಬೇಕೆನ್ನುವ ಹಂಬಲ??! ಅದನ್ನು ಹೇಗೆ ಪರಿಹರಿಸಿಕೊಳ್ಳೋದು? ಅದಕ್ಕೆ ಈಗ ಪರಿಶ್ರಮ ಪಡಲೇ ಬೇಕು. ಕಾಲೇಜಿಗೆ ಪಟ್ಟಣಗಳಿಗೆ ಓದಲು ಬರೋ ಇದೇ ಹುಡುಗರು ಅಲ್ಲಿನ ಆಂಗ್ಲಭಾಷಾ ಪರಿಣತ ಹುಡುಗರ ಜೊತೆ ಪ್ರತಿಸ್ಪರ್ಧಿಯಾಗಿ ಇಳಿಯಲೇಬೇಕು. ಹಳ್ಳಿಗಳಿಂದ ಬಂದ ಹುಡುಗರು ಯಾಕೆ ಸ್ವಲ್ಪ ಹಿಂದೆ ಉನ್ನತ (ಆಂಗ್ಲವನ್ನೊಳಗೊಂಡ) ಶಿಕ್ಷಣದಲ್ಲಿ ಅಂದರೆ ಇದೇ ಕಾರಣಕ್ಕಾಗಿ. ಆದರೆ ಈ ಸ್ಪರ್ಧೆ ಸುಲಭವಾಗಿ ಎದುರಿಸಲು ಈ ಹಳ್ಳಿ ಮಕ್ಕಳಿಗೆ ಸಾಧ್ಯವೇ ಅಂತಿರಾ? ಇಲ್ಲ! ಸಾಧ್ಯವೇ ಇಲ್ಲ. ಒಂದು ಪಟ್ಟಣದ ಹುಡುಗರ ಆಡುಕೊಳ್ಳುವ ಹಾಗು ಅವಮಾನವನ್ನ ಮೊದಲು ಎದುರಿಸಬೇಕು. ಆಮೇಲೆ ಪಠ್ಯಕ್ರಮಕ್ಕೆ!

ಪ್ರಾಥಮಿಕ ಮಟ್ಟದಲ್ಲಿ ಮಕ್ಕಳಿಗೆ ಅಂಗ್ಲ ಭಾಷೆ ಬೇಕು ಅಂತ ಒಂದೆರಡು ವರ್ಷಗಳ ಹಿಂದೆ ವಾದ ವಿವಾದಗಳು ನಡೆದು ಅಂಗ್ಲ ಭಾಷೆ ಸೇರ್ಪಡೆ ಆಗುತ್ತದೆಂಬ ಆಶಯ ದಿನಪತ್ರಿಕೆಗಳಲ್ಲಿ ಬಂದಾಗ ನಾನು ಖುಷಿಪಟ್ಟೆ. ಈಗ ನಮ್ಮ ಹಳ್ಳಿಯ ಮಕ್ಕಳೂ ಕೂಡ ದಿಳ್ಳಿಯ ಮಕ್ಕಳೊಂದಿಗೆ ಸರಿಸಮವಾಗಿ ನಿಲ್ಲಲು ಅಷ್ಟೇನೂ ಕಷ್ಟವಾಗಲಿಕ್ಕಿಲ್ಲ ಅಂತ. ಆದರೆ ಅದಿನ್ನೂ ಆಗಿಲ್ಲ. ನಾನಿಲ್ಲಿ ಕನ್ನಡಾಭಿಮಾನಿಗಳ ವಿರೋಧವಾಗಿ ಮಾತಾಡುತ್ತಿಲ್ಲ. ಕನ್ನಡವೇ ಮಾಧ್ಯಮವಾಗಲಿ ಆದ್ರೆ ಅಂಗ್ಲ ಭಾಷೆ ಕೂಡ ಮಕ್ಕಳು ಓದಬೇಕು. ಅವರ ಭಾಷಾಕೋಶಗಳು ವಿಕಾಸವಾಗಬೇಕು. ಆಂಗ್ಲಭಾಷೆ ನಮಗೇಕೆ ಬೇಕು ಅಂತ ಅದನ್ನ ಚೆನ್ನಾಗಿ ಬಲ್ಲವ ಕೆಲವರು ಹೇಳಿದರೆ – ಕೆಲ ಹೊರದೇಶಗಳು ಅವುಗಳ ಭಾಷೆಯಷ್ಟೆಯೇ ಕಲಿಯುವುದಿಲ್ಲವೇ ಅಂತ ವಾದ ಮಾಡಬಹುದು. ಆವೆಲ್ಲ ನನ್ನ ಮಟ್ಟಿಗೆ ನಿಷ್ಪ್ರಯೋಜಕ ಮಾತುಗಳು. ಪ್ರತಿಯೊಬ್ಬ ಮಗುವಿಗೂ ಮುಂದೆ ಬರಬೇಕು ಅನ್ನೊ ಹಂಬಲವಿರುತ್ತೆ. ಅದಕ್ಕೆ ಅನುಗುಣವಾದ ವಿಧ್ಯಾಭ್ಯಾಸ ಸಿಗಬೇಕು.

ಒಂದುಕಡೆ ಓದಿದೆ, ಎಲ್ಲಾ ಉನ್ನತ ಶಿಕ್ಷಣ, IT ಮೊದಲುಗೊಂಡು ಅಲ್ಲವೂ ಕನ್ನಡದಲ್ಲೇ ಇರಬೇಕು ಅಂತ. ಅದು ತುಂಬಾ ಒಳ್ಳೆಯದೇ. ಆದರೆ ಈ IT ಅನ್ನೋದನ್ನ ಪ್ರಾರಭಿಸಿದವರು ಅಂಗ್ಲರು. ಆದು ಎಲ್ಲಾಇರೋದು ಅಂಗ್ಲಭಾಷೆಯಲ್ಲಿ. ಅದು ಕನ್ನಡದಲ್ಲಿ ಈಗ ಆಗಬೇಕೆಂದರೆ ಅದನ್ನ ಕನ್ನಡಕ್ಕೆ ತರ್ಜಿಮೆ ಮಾಡಬೇಕು. ಅದನ್ನ ಕನ್ನಡಕ್ಕೆ ತರ್ಜಿಮೆ ಮಾಡೋಕೆ ಕನ್ನಡ ಹಾಗೂ ಅಂಗ್ಲಭಾಷೆ ಎರಡನ್ನೂ ಚೆನ್ನಾಗಿಬಲ್ಲವರು ಬೇಕು. ಹೌದಲ್ಲವೆ?? ಇಲ್ಲಿ ಅಂಗ್ಲಭಾಷೆಯ ಕೊರತೆ ಕಾಣುತ್ತಿಲ್ಲವೇ? ನಮ್ಮದೇ ಭಾಷೆಯಲ್ಲಿ ಕಲಿತ ಮಕ್ಕಳು ಅದನ್ನ ತಮ್ಮ ಭಾಷೆಗಷ್ಟೇ ಅಳವಡಿಸಲು ಸಾಧ್ಯ. ಅಷ್ಟಕ್ಕೇ ಸೀಮಿತವಾಗಲಿಲ್ಲವೇ ಅವರು ಕಲಿತದ್ದು? ಅಲ್ಲಿ ಮತ್ತೆ ಅವರ ಅನುಭವ ಹಾಗೂ ಬುದ್ಧಿಯನ್ನ ಹೊರಗೆ ಹಾಕಲು ಮತ್ತೆ ಈ ಭಾಷೆ ಅಡ್ಡವಾಗಿನಿಂತಿತೇ? ಅದು ಬೇಡ. ನಮ್ಮವರು ಕನ್ನಡ ಕಲಿಯಲಿ, ಬೆಳೆಸಲಿ.. ಅದೇ ಸಮಯದಲ್ಲಿ ಪ್ರತಿಯೊಬ್ಬನಿಗೂ ಅವರದೇ ಕ್ಷೇತ್ರದಲ್ಲಿ ಬೆಳೆಯಲು ಬೇಕಾದ ಅಂಗ್ಲವೂ ಸಿಗಲಿ ಅನ್ನೋದೇ ನನ್ನ ಅಶಯ. ಸುಮ್ಮನೆ ಇಂಥಾ ದೊಡ್ಡ ದೊಡ್ಡ ಮಾತುಗಳನ್ನ ಆಡುವುದು ಸುಲಭ; ಅದನ್ನ ಬೇರೆ ದೃಷ್ಟಿಯಲ್ಲೊ ನೋಡ್ಬೇಕು. ನಮ್ಮ ಮಕ್ಕಳು ಬೆಳೆಯೋಕೆ ಬೇಕಾದ್ದರ ಬಗ್ಗೆ ಯೋಚಿಸಬೇಕು. ಕೇವಲ ಭಾಷಾವಾದಿಗಳ ಕೈಲಿ ಸಿಕ್ಕಿ ಮಕ್ಕಳ ಭವಿಷ್ಯ ಹಾಳಾಗಬರದು ಅಲ್ಲವೆ?

6 comments:

Pradeep said...

Hi Sree,

Nimma blogina koneya saalinalli vishyada gambiryathe mattu thathparya adagide.Samajika prajne inda koodiruva intha uttam blogugalannu bariyuttiri.

Andha hage e blogu ondu uttama Avalokana"!!

ಶ್ರೀ said...

ಧನ್ಯವಾದಗಳು ಪ್ರದೀಪ್, ನಿಮ್ಮ ಅಭಿಮಾನ ಹೀಗೇ ಇರಲಿ. ಜೊತೆಗೆ ವಿಚಾರ ವಿನಿಮಯವಾಗಲಿ. ಅದು ನಮ್ಮೆಲ್ಲರೊಳಗಿನ ಸುಪ್ತ ಯೋಚನೆಗಳ ಬಾಹ್ಯ ಅವಲೋಕನವಾಗುತ್ತದೆ. :)

-- ಶ್ರೀ

ವಿ.ರಾ.ಹೆ. said...
This comment has been removed by the author.
ವಿ.ರಾ.ಹೆ. said...

v.nice thought.

aadre nam janada kettabyasa andre english kalitha kalitha kannada kaliyodanne bittu adareDege ondu tiraskara beleskotare. yakandre englishu hotte tumbsatte, englishu andre pratishte, englishu andre levellu, superior anno bhavane. avara ella manaranjane, yochane, maatu ellavu englishina suttale suttalu aarambhisuttave. englishina jote jotege videshi manobhava, samskruti haridu baratte.

antha bhavane bittu kannada melina abhimana ulisikondu, bari jnyana, shikshana, vrutti ityadi kadeyallashte english balasuva agatyavannu kuda makkalige sannavariddagindale tilisuvudu atyagatya.

Sheela Nayak said...

ಈ ವಿಚಾರದಲ್ಲಿ ನನ್ನ ಅಭಿಪ್ರಾಯವೂ ಹಾಗೆ ಇದೆ! ಎಲ್ಲವನ್ನೂ ಕನ್ನಡಮಯ ಮಾಡಲ್ಲಿಕ್ಕೆ ಹೋಗಿ ಎಲ್ಲಾದರೂ ಎಡವುತ್ತಾರೋ ಎನಿಸುತ್ತದೆ... ಇದರ ಪರಿಣಾಮ ನಮ್ಮ ಮುಂದಿನ ಜನಾಂಗದ ಮೇಲೆ ಬೀರುತ್ತದೆ...ಕನ್ನಡದಲ್ಲಿ ಮಾಧ್ಯಮದಲ್ಲಿ ಕಲಿತ ಅನೇಕರು ಇಂದು ITಯಲ್ಲಿಲ್ಲವೇ? ಅವರು ಪ್ರಾರಂಭದಲ್ಲಿ ಇಂಗ್ಲಿಷ್ ಮಾತನಾಡಲು ಬರೆಯಲು ತುಂಬಾ ಕಷ್ಟ ಪಟ್ಟಿರಲ್ಲಿಲ್ಲವೇ? ನಾನೇನು ಇಲ್ಲಿ ಇಂಗ್ಲಿಷ್ ಮಾಧ್ಯಮವನ್ನು ವಹಿಸಿಕೊಂಡು ಮಾತನಾಡುತ್ತಿಲ್ಲ! ಆದರೆ ಕನ್ನಡದ ಮಾಧ್ಯಮದಲ್ಲಿ ಇಂಗ್ಲಿಷನ್ನು ಸೇರ್ಪಡಿಸುವುದರಿಂದ ಮಕ್ಕಳಲ್ಲಿ ಸ್ವಲ್ಪವಾದರೂ ಕೀಳುರಿಮೆಯನ್ನು ದೂರಮಾಡಬಹುದಲ್ಲವೇ? ಮತ್ತು ಇಂಗ್ಲಿಷನಲ್ಲಿ ಒಳ್ಳೆಯ ಕನ್ನಡವನ್ನು ಸೇರಿಸಿದರೆ ಎರಡು ಭಾಷೆಯಲ್ಲೂ ಮಕ್ಕಳಿಗೆ ಇಂದು ಹಿಡಿತ ಸಿಕ್ಕಬಹುದು.

ಶ್ರೀ said...

ವಿಕಾಸ್, ನೀವು ಹೇಳ್ತಿರೋ ’ಇಂಗ್ಲೀಷ್’ ಪ್ರೇಮಿಗಳ ಕನ್ನಡದ ಬಗೆಗಿನ ತಿರಸ್ಕಾರ ಅದಾಗೇ ಬಂದಿಲ್ಲ. ಆದಕ್ಕೆ ಕನ್ನಡಿಗರ ಸಹಾಯಕೂಡ ಬಹಳಷ್ಟಿದೆ! ಅದಕ್ಕೋಸ್ಕರವೇ ಇಂಗ್ಲೀಷ್ನ ಬೇಕಾದಲ್ಲಿ ಮಾತ್ರ ಉಪಯೋಗಿಸಬೇಕು. ಮತ್ತು ಕನ್ನಡಕ್ಕೆ ಕನ್ನಡದವರು ಪ್ರೀತಿಸಲು ಶುರುಮಾಡಿದ್ರೆ ಬೇರೆಯವರೂ ಅದನ್ನ ಕೀಳಾಗಿನೋಡೋದು ಬಿದುತ್ತಾರೆ. ಆಲ್ವೆ? ನೀವು ಹೇಳ್ತಿರೋಹಾಗೆ ಬೇರೆ ಭಾಷೆಯನ್ನ ಕೆಲವೊಂದಕ್ಕೆ ಮಾತ್ರ ಸೀಮಿತ ಮಾಡೋದು ನಮ್ಮ ಭಾಷೆಯನ್ನ ಮೇಲೆತರೋಕ್ಕೆ ಸಹಾಯ ಮಾಡೊಲ್ಲ ಅಂತ ನನ್ನ ಭಾವನೆ. English ಕಲಿಯೋದ್ರಿಂದ ಕನ್ನಡ ಹಾಳಾಗೋಲ್ಲ, ಆದ್ರೆ ಕನ್ನಡಕ್ಕೆ ಕನ್ನಡದವರೇ ಅದರ ಸ್ಥಾನ ಕೊಡದಿದ್ದಾಗ ಮಾತ್ರ! ಏನಂತಿರೆ?

ಶೀಲ ಅವರೆ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನೀವು ಹೇಳ್ತಿರೋದು ಸತ್ಯ. ನನಗೆ ಗೊತ್ತಿರೋ ಬೇಕಾದಷ್ಟುಜನ ಕನ್ನಡ ಮಾಧ್ಯಮದಲ್ಲೇ ಓದಿರೋದು. ಹಾಗೇ ಅವರುಗಳು ಕೂಡ ತುಂಬಾ ಮೇಲ್ಮಟ್ಟದ ಅಧಿಕಾರಿಗಳಾಗಿದ್ದಾರೆ. ಅಲ್ಲದೆ ಈಗಿನ ITಯಲ್ಲಿ ತುಂಬಾ ಪ್ರತಿಷ್ಠಿತರುಕೂಡ ಇದ್ದಾರೆ. ಅವರನು ನೋದಿದರೆ ತುಂಬಾ ಸಂತೋಷವಾಗುತ್ತೆ. ಆದರೆ, ಅವರಿಗೆ ಇಂಗ್ಲೀಷ್‍ಭಾಷೆಯಲ್ಲಿ ಪ್ರಬಲತೆ ಇಲ್ಲದಿದ್ದಾಗ ಅವರುಪಟ್ಟ ಕಷ್ಟಗಳನ್ನು ನಾನು ಗ್ರಹಿಸಬಲ್ಲೆ - ಯಾಕೇಂದ್ರೆ ನಾನೂ ಕೂಡ ಕನ್ನಡ ಮಾಧ್ಯಮದಲ್ಲೇ ಓದಿರೋದು. ನನಗೆ ಕನ್ನಡಮೇಲೆ ತುಂಬಾ ಪ್ರೀತಿಯಿದೆ. ಆದ್ರೆ ನನಗೆ ಇಂಗ್ಲೀಷ್‍ಕೂಡ ಬೇಕು.

ನಮ್ಮಲ್ಲಿ ಕನ್ನಡವೇಇರಲಿ, ಆದ್ರೆನಾವು ಕೇವಲ ಕೂಪ ಮಂಡೂಕಗಳಾಗದೆ ಪ್ರಪಂಚ ಸುತ್ತೋಕೆ ಇಂಗ್ಲೀಷ್‍ಬೇಕು. ನಮ್ಮ ಕನ್ನಡಿಗರ ಪ್ರತಿಭೆ ಅದಕ್ಕೆಲ್ಲಿಯವರೆಗೆ ತಲುಪಲು ಸಾಧ್ಯವೋ ಅಲ್ಲಿಯವರೆಗೆ ಹೋಗಬೇಕಾದರೆ ಕೇವಲ ಕನ್ನಡವೊಂದರಿಂದಲೇ ಸಾಧ್ಯವಿಲ್ಲ ಆಂಗ್ಲದ ಅವಶ್ಯಕತೆಯೂ ಇದೆ ಅಂತಷ್ಟೇ ನನ್ನ ಅನಿಸಿಕೆ.

ನಮ್ಮ ಮಾತು ಕೇವಲ ಇಂಥಾ ಬ್ಲಾಗುಲಳಿಗಷ್ಟೇ ಸೀಮಿತವಾಗದಿದ್ದರೆ ಸಾಕು! ನೀವು ಹೇಳಿದಂತೆ ಮುಂದಿನ ಪೀಳಿಗೆಗಳಿಗೆ ಬೇಕಾಗುವ ಎಲ್ಲಾ ಒಳ್ಳೆಯಕೆಲಸ ಮಾಡೋಣ. :)