Thursday, August 09, 2007

ನನಗೇಕೆ ಬರೆಯೋ ಹುಚ್ಚು?

ಹೌದು, ನಾನಗೆ ಯಾಕೆ ಬರೆಯಬೇಕು ಅನ್ನಿಸ್ತಿದೆ?

ನಾನೇನೂ ಸಾಹಿತ್ಯದ ಅಸಾಮಾನ್ಯ ವಿಧ್ಯಾರ್ಥಿಯಲ್ಲ. ನನ್ನಲ್ಲಿ ನನ್ನ ಮನಸ್ಸಿನಲ್ಲಿರುವ ಎಲ್ಲಾಭಾವನೆಗಳಿಗೂ ರಂಗು ಕೊಟ್ಟು ಬರೆಯಲು ಗೊತ್ತಿಲ್ಲ. ಕಥೆ ಸೃಸ್ಟಿ ಮಾಡಿ ಅಭ್ಯಾಸವಿಲ್ಲ. ನಾನು ಎಂದೋ ಓದಿದ್ದ ಸುಂದರ ಕನ್ನಡದ ಬಳಕೆ ನನ್ನಿಂದ ಬರವಣಿಗೆಯಲ್ಲಿ ಬಹಳಷ್ಟು ದಿನಗಳಿಂದ ಮೂಡಿಯೇಯಿಲ್ಲ. ನನಗೆ ನನ್ನ ಮೇಲೆಯೇ ಕೋಪ ಬರುವುದುಂಟು. ಯಾಕೇ ನಾನು ನನ್ನದೇ ಒಂದು ಅಂಕಣ ಪ್ರಾರಂಭಿಸಿದೆ ಅಂತ. ನಾನು ಅಂತರ್ಮುಖಿ ಅಂತ ನನಗೆ ಗೊತ್ತು ಆದ್ರೂ ಈ ಸಾಹಸ ಯಾಕೆ ಮಾಡಿದೆ? ನನ್ನ ಕೈಲಿ ನಿಜವಾಗಿ ನನ್ನ ಮನಸ್ಸಿನಲ್ಲಿರುವುದೆಲ್ಲವನ್ನೂ ಇಲ್ಲಿ ಕೆಡುಹಲು ಸಾಧ್ಯವ? ಅಥವಾ ಕೇವಲ ನನ್ನ ಮನಸ್ಸಿನಲ್ಲಿರುವುದನ್ನೆಲ್ಲಾ ಇಲ್ಲಿ ಬರೆದು ನಾನು ಗಳಿಸಿದ್ದಾದರೂ ಏನು? ನಾನು ಬರೆದದ್ದು ನನ್ನಂಥ ಬೇರೆ ಜನರೂ ಓದಲಿ ಅಂತ್ಲ? ಹಾಗಾದರೆ ನನ್ನ ಮನಸ್ಸಿನಲ್ಲಿರುವುದು ಅವರಿಗೆಲ್ಲಾ ಹಿಡಿಸೀತ? ಹಾಗೆ ಬರೆಯಲು ನನ್ನಿಂದ ಸಾಧ್ಯನ? ನನಗೆ ಎಲ್ಲರನೂ ಮೆಚ್ಚಿಸುವಂತೆ ಬರೆಯಬಲ್ಲ ಶಕ್ತಿಯಿಲ್ಲ ಅನ್ನೋದು ಚೆನ್ನಾಗಿ ಬಲ್ಲೆ. ಏನೋ ಬರೆದರೂ ಕೂಡ ಅನನ್ನ ಯಾರಾದರೂ ಇಷ್ಟಪಡುತ್ತಾರೆ ಅನ್ನೋದು ಕೂಡ ಖಾತ್ರಿಯಿಲ್ಲ. ಆದ್ರೂ ಬರೆಯಬೇಕು ಅನ್ನೊ ಹಂಬಲ ಯಾಕೆ ನನ್ನ ಬಿಡುತ್ತಿಲ್ಲ? ನಾನು ಇದೇ ಪ್ರಶ್ಣೆಯನ್ನ ಹಲವು ಬಾರಿ ನನಗೆ ನಾನೇ ಹಾಕಿಕೊಂಡಿದ್ದೇನೆ. ಆದರೆ ಸಮಂಜಸವಾದ ಉತ್ತರ ಮಾತ್ರ ಸಿಕ್ಕಿಲ್ಲ ನನಗೆ.

ಹೋಗಲಿ. ನನಗನ್ನಿಸಿದೆ ಏನನ್ನಿಸುತ್ತೋ ಅದನ್ನ ಇಲ್ಲಿ ಬರೆಯೋಣ ಅಂತ. ಸರಿ. ಹಾಗಂತ ಯಾರೂ ಓದದಿದ್ರೆ? ಹೌದಲ್ಲ, ಯಾರೂ ಓದದಿದ್ದಮೇಲೆ ನಾನು ಬರೆದು ಏನು ಪ್ರಯೋಜನ? ಛೆ! ನಾನು ನನಗನಿಸಿದ್ದನ್ನ ಮಾತ್ರ ಬರೆಯಬೇಕು. ನಾನು ಯಾರಿಗೂ ಬೇಜಾರು ಮಾಡದಿದ್ದರೆ ಅದು ಸರಿ. ಎಲ್ಲದನ್ನೂ ನಾನು ಇಲ್ಲಿ ಬರೆದಿಡಬಹುದು ಆಗ. ಆಲ್ಲವೆ? ಹುಂ. ಅಷ್ಟಿದ್ದರೆ ಸಾಕು ನನ್ನ ಬರವಣಿಗೆಯಲ್ಲಿ. ಹಾಗದರೆ ನಾನು ನನ್ನ ಮನಸ್ಸಿನಲ್ಲಿರುವುದನ್ನ ಬರೀತಿಲ್ಲ. ನಾನು ಬೇರೆಯವರನ್ನು ಒಲಿಸಲು ಬರೀತಿದ್ದೀನಾ? ನನಗೋಸ್ಕರ ಅಲ್ಲ? ಮತ್ತೆ ನಾನು ಬರೆದದ್ದು ಬೇರೆಯವರಿಗೆ ಹಿಡಿಸದಿದ್ದರೆ? ಮತ್ತೆ ನಾನು ಈ ಅಂಕಣ ನನಗಲ್ಲ... ಬೇರೆಯವರಿಗೆ ಪ್ರಾರಂಭಿಸಿದ್ದು? ಹಾಗಾದ್ರೆ ಇದು ನನ್ನದು ಹೇಗಾಗುತ್ತೆ? ಸರಿ. ನನಗೆ ನನ್ನ ಭಾವನೆಗಳನ್ನಷ್ಟೂ ಬರೆಯುವ ಹಕ್ಕಿದೆ. ನಾನೂ ಬರೆಯುತ್ತೇನೆ. ಯಾರು ನೋಡಲಿ ಬಿಡಲಿ. ಶಿವರುದ್ರಪ್ಪನವರು ಹೇಳಿದಂತೆ:

ಯಾರು ಕಿವಿಮುಚ್ಚಿದರೂ ನನಗಿಲ್ಲ ಚಿಂತೆ...

ನಾನೂ ಹಾಗೇನೆ ಇದ್ದುಬಿಡಬೇಕು ನನಗನ್ನಿಸಿದ್ದು ಬರೆದು ಅಂದ್ಕೊತೀನಿ. ಅದನ್ನೇ ನನ್ನ ಜೀವನದಲ್ಲಿ ಅವಳವಡಿಸಿಕೊಳ್ಳುತ್ತಿದ್ದೀನಿ. ಹಾಂ, ನಾನು ನನಗನ್ನಿಸಿಸ್ಸು ತಪ್ಪೋ ಸರಿಯೋ ಮಾಡೇ ಮಾಡುತ್ತೇನೆ ಅಂತಲ್ಲ. ಸ್ವಲ್ಪ ನನ್ನ ಅನಿಸಿಕೆಗಳನ್ನ ಪರಾಂಬರಿಸಿ, ನಾನು ನಾಲ್ಕಾರು ದೃಷ್ಟಿಯಿಂದ ನೋಡಿ ಅದು ತಪ್ಪಲ್ಲ ಅನ್ನಿಸಿದಮೇಲೇನೇ ಮಾಡೋಕೆ ಪ್ರಯತ್ನ ಮಾಡುತ್ತಿದ್ದೇನೆ. ನಮಗೆಲ್ಲಾ ಚಿಕ್ಕವಯಸ್ಸಿನಿಂದ ’ಬೇರೆಯವರು ಏನನ್ನುತ್ತಾರೆ, ನಮ್ಮ ಬಗ್ಗೆ ಏನಂದುಕೊಳ್ಳುತ್ತಾರೆ’ ಅನ್ನೋದನ್ನ ನಮ್ಮ ತಲೆಯಲ್ಲಿ ತುಂಬಿರುತ್ತಾರೆ ದೊಡ್ಡವರು. ಹಾಗಾಗಿ ನಾವು ಏನೇ ಮಾಡಿದರೂ ಬೆರೆಯವರನ್ನು ಮನಸ್ಸಿನಲ್ಲಿಟ್ಟುಕೊಂಡೇ ಕೆಸಲ ಪ್ರಾರಂಭಿಸುತ್ತೀವಿ, ಯೋಚಿಸುತ್ತೀವಿ, ಎಲ್ಲಾ. ಅದಕ್ಕೇ ಶಿವರುದ್ರಪ್ಪನವರು ’ಎದೆತುಂಬಿ ಹಾಡಿದೆನು...’ ಕವಿತೆಯಲ್ಲಿ ನಮಗೋಸ್ಕರ ಬದುಕೋಣ, ನಮಗೋಸ್ಕರ ಬಾಳೋಣ ಅಂತ ತಿಳಿಹೇಳಿದ್ದಾರೆ. ಜೊತೆಗೆ ಅವರು ಸುತ್ತಲಿನವರನ್ನು ಕಡೆಗಣಿಸಿಲ್ಲ - ಅಥವ ಪರಿವೆ ನನಗೆ ಬೇಡ ಅಂದಿಲ್ಲ.

ಇವನು ತುಂಬಾ ಉದ್ಧಟನಾಗಿ ಬರೀತಾಯಿದ್ದಾನೆ ಅನ್ನಿಸುತ್ತಿರಬಹುದು ಎಷ್ಟೋಜನಕ್ಕೆ. ಸುಮ್ಮನೆ ಮನಸ್ಸಿಗೆ ಬಂದಂತೆ ಕೆಲಸಕ್ಕೆ ಬಾರದ್ದು ಗೀಚುತ್ತಿದ್ದಾನೆ ಅಂತ. ನಿಜ! ಹಾಗನಿಸುವುದು ಸಾಮಾನ್ಯ ಯಾಕೆಂದ್ರೆ ’ನೀನೇ ಅಂದ್ರೂ ನನಗೆ ಏನೂ ಆಗಲ್ಲ’ ಅಂದ್ರೆ ಅವನನ್ನು ’ಮನುಷ್ಯ ಮುಟ್ಟಿದ ಗುಬ್ಬಿ’ ರೀತಿ ನೋಡೋದೇ ಬಂದಿದೆ ನಮಗೆ. ನನಗೆ ಹಿಡಿಸದ್ದನ್ನ ಯಾರಾದರೂ ನಮಗೆ ಹೇಳಿದರೆ ಅದನ್ನ ತಳ್ಳಿಹಾಕಬಹುದು ಆದರೆ ಸಂಪೂರ್ಣವಾಗಿ ಎಲ್ಲರೂ ಹೇಳಿದ್ದನ್ನಲ್ಲ.. ಯಾಕಂದ್ರೆ ನಾವೆಲ್ಲ ಸಂಘಜೀವಿಗಳು

ಹೂಂ! ಅಂತೂ ನಾನು ಯಾಕೆ ಬೆರೆಯೋಕೆ ತೀರ್ಮಾನಿಸಿದೆ ಅಂತ ನನಗೆ ಗೊತ್ತಗ್ತಿರೋ ಹಾಗಿದೆ... ನಾನು ನನಗೋಸ್ಕರ ಬರೀತೀನಿ ಅಂದ್ಕೋಂಡಮೇಲೆ ನನಗೋಸ್ಕರ ಬರೀಬೇಕು. ಬೇರೆಯವರು ಅದಕ್ಕೆ ಸ್ಪಂದಿಸುತ್ತಾರೋ ಇಲ್ಲವೊ ಅದರ ಗೋಜಿಗೆ ನಾನು ಹೋಗಬಾರದು. ಆದರೂ, ನನಗೆ, ನನ್ನ ಅನಿಸಿಕೆಗಳಿಗೆ ಸುತ್ತಮುತ್ತಲಿನವರು ಅದಕ್ಕೆ ಪ್ರತಿಕ್ರಯಿಸಿದರೆ ನಾನೇ ಧನ್ಯ!

2 comments:

shiela nayak said...

ನನಗೂ ನಿಮ್ಮ ಹಾಗೆ ಅನಿಸಿತು ಎಂದು ನಾನು ಸಹ ಬ್ಲಾಗ್ ಬರೆಯಲು ಪ್ರಾರಂಭಿಸಿದ್ದೇನೆ. ಗ್ರಹಿಣಿಯಾಗಿರುವ ನಾನು ನನ್ನ ಮಿತಿಯಲ್ಲಿ ಶುರುಮಾಡಿದ್ದೇನೆ, ನಾಳೆ ಚೆನ್ನಾಗುತ್ತದೆ ಎಂಬ ಆಶಾವಾದದಿಂದ!
ನಿಮ್ಮ ಬರೆವಣಿಗೆಯ ಶೈಲಿ ಮೆಚ್ಚಿಗೆಯಾಯಿತು.
ಶೀಲಾ, ಮಂಗಳೂರು.

ಶ್ರೀ said...

ಶೀಲಾ ಅವರಿಗೆ ಧನ್ಯವಾದಗಳು.

ದಯವಿಟ್ಟು ಬರೆಯಿರಿ. ನಿಮ್ಮಲ್ಲಿರುವ ಕಲೆ ಹೊರಗೆ ಬರಲಿ. ನನ್ನ ಅನಿಸಿಕೆಯ ಪ್ರಕಾರ ಪ್ರತಿಯೊಬ್ಬರಲ್ಲೂ ಕಲೆ ಇದ್ದೇ ಇದೆ. ಅದನ್ನ ಹೊರಗೆಳೆಯ ಬೇಕು ಅಷ್ಟೆ. ಗೃಹಿಣಿಯಾದ ಮಾತ್ರಕ್ಕೆ ನೀವೇ ’ಮಿತಿ’ಯನ್ನು ಸೃಷ್ಟಿಸಿಕೊಳ್ಳಬೇಡಿ.. ಅದಕ್ಕೆ ನನ್ನ ಸದಾಶಯ!

-- ಶ್ರೀ