Saturday, August 04, 2007

ಮುಳುಗುವವನ ಕೂಗು...

ಮುಳುಗುವವನ ಕೂಗು
ಚಾಚುವಂತೆ ಮಾಡಿದೆ ಕೈಯ್ಯ
ಜಾರಿಬಿಡುವುದೇ ಈ ಹೃದಯ
ಏನೊ ತಳಮಳ |


ಇದು ಮುಂಗಾರು ಮಳೆ ಚಿತ್ರದ ’ಇವನು ಇನಿಯನಲ್ಲ’ ಅನ್ನೊ ಹಾಡಿನದ್ದು.’ಅಯ್ಯೊ! ಮತ್ತೆ ಇಲ್ಲೂ ಮುಂಗಾರು ಮಳೆ ಬಂತಾ’ ಅಂದ್ಕೊಬೇಡಿ. ನಾನು ಇಲ್ಲಿ ಮುಂಗಾರು ಮಳೆ ಬಗ್ಗೆ ಬರೀತಿಲ್ಲ. ಅದನ್ನ ತುಂಬಾಜನ ಬರೆದಿದ್ದಾರೆ ಮತ್ತು ಅದಕ್ಕೆ ಸಿಗಬೇಕಿದ್ದ ಪ್ರಚಾರ ಸಿಕ್ಕಿದೆ ಅಂದ್ಕೊತಿನಿ! ನಾನು ಹೇಳ್ತಿರೋದು ಮೊದಲ ಮೂರು ಸಾಲುಗಳನ್ನ ಮಾತ್ರ.

ಈ ಹಾಡನ್ನ ತುಂಬಾಸಲನೇ ಕೇಳಿದ್ದೆ - ನಂಗೆ ಸ್ವಲ್ಪ ವಿಷಾದ ಪ್ರಧಾನ ಗೀತೆಗಳು ಇಷ್ಟ, ಹಾಗಾಗಿ. ಆದ್ರೆ ಸ್ವಲ್ಪ ದಿನಗಳ ಹಿಂದಷ್ಟೇ ಈ ಸಾಲುಗಳು ನನ್ನ ಹಿಡಿದು ನಿಲ್ಲಿಸಿದ್ವು. ಸಂದರ್ಭ ಅಷ್ಟೆ!

ನನ್ನ ಸ್ನೇಹಿತ ಮಹೇಶನ ಜೊತೆ ಸ್ವಲ್ಪ ದಿನಗಳ ಹಿಂದೆ ನಡೆದ ಘಟನೆ ಜ್ಞಾಪಕ್ಕೆ ಬಂತು. ಅವನು officeನಿಂದ ಒಂದುದಿನದ ಪ್ರವಾಸಕ್ಕೆ ಹೋಗಿದ್ದ. ಆಲ್ಲಿ ತನ್ನ ಸಹೋದ್ಯೊಗಿಯೊಬ್ಬಳನ್ನ ಭೇಟಿಯಾದ. ಆಕೆ ಇವನ ಜೊತೆ ತುಂಬಾ ಸಲೀಸಾಗಿ ಮಾತಡಿದ್ಲಂತೆ. ತುಂಬಾನೇ ಚೆನ್ನಾಗಿ ಇಬ್ಬರೂ ಅವತ್ತು ಮಾತಾಡಿದ್ದಾರೆ. ಪರಸ್ಪರ ಪರಿಚಯ ಎಲ್ಲಾ ಅಯ್ತು. ಆಮೇಲೆ ಮಹೇಶನ ಮನಸ್ಸು ಒಂದೇ ದಿನದ ಈ ಹುಡುಗಿಯ ಬಗ್ಗೆ ಯೋಚನೆಮಾಡೊಕ್ಕೆ ಪ್ರಾರಂಭಿಸಿತ್ತು. ಅದು ಎಲ್ಲಿಂದ ಎಲ್ಲಿಗೊ ತಗೊಂದು ಹೊಯ್ತು. ಆವನ ಮನಸ್ಸಿನ ’ಕಲ್ಪನೆಯ ಕನ್ಯೆ’ಯ ಜೊತೆ ಈಕೆಯನ್ನು ಹೋಲಿಸಲು ಶುರುಮಾಡಿದ. ಹಲವಾರು ರಾತ್ರಿಗಳು ಅವಳದ್ದೇ ಯೊಚನೆಯಲ್ಲಿ ಕಳೆದ. ಅವರು ದಿನೇ ದಿನೇ ಹೆಚ್ಚು ಹೆಚ್ಚು ಮಾತಾಡೊಕ್ಕೆ ಮುಂದಾದ್ರು. ಅವರ ಭಾವನೆ ಇವನಿಗೆ - ಇವನ ಭಾವನೆ ಅವರಿಗೆ ವಿನಿಮಯ ಅಯ್ತು. ಅದು ಅವರಿಗೆ ಇಬ್ಬರ ಬಗ್ಗೆ ತಿಳ್ಕೊಳಕ್ಕೆ ಸಹಾಯ ಆಯ್ತು. ನನಗೆ ಇದೆಲ್ಲಾ ಒಂದು ದಿನ ಮಹೇಶ ಉರುಹಿದ - ಅಷ್ಟೊತ್ಗೆ ಅವನ ಮನಸ್ಸು ಅವನ್ನ ಎಲ್ಲೆಲ್ಲೋ ಕರೆದುಕೊಂಡು ಹೋಗಿತ್ತು. ಅವನು ಅವಳಿಗೆ ತನ್ನ ಮನಸ್ಸನ್ನು ಆಗ್ಲೆ ಅರ್ಪಿಸಿದ್ದ. ’ಲವ್ ಅಂತ ಏನು time waste ಮಾಡ್ತಾರೆ ಈಜನ; ಅವರಿಗೆ ಬೇರೆ ಕೆಲಸನೇ ಇಲ್ವ?’ ಅಂತ ಬೇರೆಯವರಿಗೆ ಬಯ್ತಾಇದ್ದೋನು ಈಗ ಅದೇ ಗೊಂದಲದಲ್ಲಿ ಸಿಕ್ಕಿದ್ದ! ಈಗೊಂದಲದಲ್ಲಿ ನರಳಾಡುತ್ತಿದ್ದಾಗ ಅವನಿಗೆ ಜ್ಞ್ನಾಪಕಕ್ಕೆ ಬಂದದ್ದು ನಾನು.

ಒಂದಿನ ಚಾಯ್ ಕುಡೀತಾ ಅವನ ಭಾವನೆಗಳನ್ನೆಲ್ಲಾ ನಿಧಾನವಾಗಿ ಬಿಚ್ಚಲು ಆರಂಭಿಸಿದ. ಅದು ಸುರುಳಿ-ಸುರುಳಿಯಾಗಿ ಹೊರಬಂತು. ’ನನಗೆ ನನ್ನ ಬಗ್ಗೆನೇ ಅರ್ಥವಾಗ್ತಿಲ್ಲ ಕಣೋ. ನಾನ್ಯಾಕೆ ಹಿಂಗಾದೆ ಅಂತ. ತಪ್ಪು ಮಾಡ್ತಿದ್ದೀನಾ ಅನ್ನಿಸ್ತಿದೆ...’ ಅವನ ಮನಸ್ಸಿನಲ್ಲಿದ್ದ ತುಮುಲ, ಉನ್ಮಾದ, ಪ್ರಶ್ಣೆಗಳು, ಎಲ್ಲಾ ಆಚೆ ಬಿದ್ವು. ಹುಂ.. ಏನಪ್ಪ ಮಾಡೋದು ಈಗ?!! ಸರಿ ನನಗೆ ಗೊತ್ತಿದ್ದಷ್ಟು ಹೇಳಿದೆ. ’ನೀನು ಅವಳನ್ನು ಇಷ್ಟಪಟ್ರೆ ತಪ್ಪೇನಿಲ್ಲ ಕಣೊ. ಹಾಗೆ ಅಂದ್ಕೋಬೇಡ. ಆದ್ರೆ, ಇದನ್ನ ಮುಂದುವರಿಸಬೇಕು ಅಂದ್ರೆ ಅವಳ ಮನಸ್ಸಿನಲ್ಲಿ ಏನಿದೆ ಅಂತ ಮೊದಲು ಹುಡುಕು’ ಅಂದೆ. ಆ ಹುಡುಗಿಯ ಮಾತುಗಳನ್ನ ಅವನಿಂದನೇ ಕೇಳಿದಾಗ, ನನಗೆ ಆಕೆಯ ಮನಸ್ಸಿನಲ್ಲಿ ಅಂಥಹ ಯಾವುದೇ ವಿಚಾರ ಇರೋ ಕುರುಹುಗಳು ನನಗೆ ಕಾಣಿಸಲಿಲ್ಲ. ಆದ್ರೆ ಅವನಿಗೆ ಒಂದೇಸಲ ’ಬೇಡ’ ಅಂತ ಹೆಳಕ್ಕಾಗ್ಲಿಲ್ಲ ನಂಗೆ. ಅದಕ್ಕೆ ಅವಳ ಮನಸ್ಸಿನಲ್ಲಿ ಏನಿದೆ ಅಂತ ಹುಡುಕೋಕ್ಕೆ ದಾರಿ ಹೆಳ್ದೆ. ಜೊತೆಗೆ ಅವಳ ಅಭಿಪ್ರಾಯ ಅವನ ಆಸೆಯ ವಿರುಧ್ದವಾಗಿದ್ರೆ ಅವನು ಹೇಗೆ ಅದರಿಂದ ಹೊರಗೆ ಬರಬೇಕು ಅಂತ ಅವನನ್ನ ತಯಾರಿ ಮಾಡೊಕೆ ಶುರುಮಾಡಿದೆ - ಯಾಕಂದ್ರೆ ಇದೇಥರ missನ missಮಾಡಿಕೊಂಡು ತಲೆ ಕೆಡಿಸಿಕೊಂಡು ಅವರ ಯಥಾಸ್ಥಿತಿಗೆ ಬರೋಕ್ಕೆ ತುಂಬಾ ಸಮಯ ತಗೊಂಡಿದ್ದಾರೆ ಅನ್ನೋದು ನಂಗೆ ಗೊತ್ತು. ಆಕೆ ಇವನು ಮೊದಮೊದಲು ಸ್ವಲ್ಪ ಹೆಚ್ಚಿನ ಆತ್ಮೀಯವಾಗಿ, ವಲವಿನಿಂದ ಅವಳ ಜೊತೆ ಮಾತಾಡಿದ್ದು ನೋಡಿ ’ನನಗೆ ನಿಮ್ಮ ಮಾತಿನ ಶೈಲಿ ಭಯ ತರುತ್ತೆ - ನೀವೆಲ್ಲಿ ನಂಗೆ ಸಧ್ಯದಲ್ಲೇ propose ಮಾಡ್ತಿರೋ ಅಂತ’ ಅಂದಿದ್ಲಂತೆ ಚಾಣಾಕ್ಷೆ! ಎಷ್ಟು ಬೇಗ ಇವನ ಮನಸ್ಸನ್ನ ಓದಿದಳಾಕೆ! ಹುಡ್ಗಿಯರಿಗೆ ಅದು ಬೇಗ ಗೊತ್ತಾಗತ್ತ ಅಂತ?! ಅದಕ್ಕೆ ಇವ, ’ಛೆ!ಛೆ! ಹಾಗೇನಿಲ್ಲ. ನೀವೂ ಕೂಡ ಮನಸು ಮಿಚ್ಚಿ ಮಾದಾಡ್ತಿದ್ದೀರ ಅದಕ್ಕೇ ನಾನೂ ಹಾಗೇ ಮಾತಾಡ್ತಿದ್ದೆನಿ ಅಷ್ಟೆ. ಮತ್ತೇನೂ ಇಲ್ಲ. ಹಾಗೆಲ್ಲ ಅಂದುಕೋಬೇಡಿ’ ಅಂತ ಹೇಳಿ ಜಾರಿಕೊಂಡ ಪುಣ್ಯಾತ್ಮ. ಆದ್ರೆ ಅವನ ಮನಸ್ಸಿನಲ್ಲಿ ಸುಳ್ಳುಹೇಳಿದ್ದಕ್ಕೆ ಅಳುಕಿತ್ತು. ಇವರಿಬ್ಬರ ಮಾತುಕತೆ, ಇವನು ಅವನ ಬಗ್ಗೆ ಅವಳ ಮನಸ್ಸಿನಲ್ಲೇನಿದೆ ಅಂತ ತಿಳ್ಕೊಳಕ್ಕೆ ಸುಮಾರು ಪ್ರಶ್ಣೆಗಳು, ಸಂಧರ್ಭ ಗಳನ್ನ ಸೃಷ್ಟಿಮಾಡಿ ಮಾತಾಡೋದು, ಹೀಗೆ.. ಸುಮಾರು ದಿನ ನಡೆಸಿ, ಕೊನೆಗೆ ಒಂದು ದಿನ ಅವಳನ್ನ ಕೇಳೇ ಬಿಟ್ಟ ಸ್ವಾಮಿ ’ನನ್ನ ಮದುವೆಯಾಗ್ತಿಯ?’ ಅಂತ. ಅವಳು ಪಾಪ, ಅವಳ ಭಯ ನಿಜ ಆಗಿದ್ದಾಕ್ಕೆ ಬೇಜಾರು ಪಟ್ಕೊಂಡ್ಳು. ಆದ್ರೆ ಏನು ಮಾಡೋದು ಈಗ, ಇವನಾಗ್ಲೆ ಅವಳಿಗೆ ಸ್ವಲ್ಪ ಹತ್ತಿರವಾಗಿದ್ದ. ಇವನನ್ನ ಒಪ್ಪಿಕೊಳ್ಳೋಕೆ ಅವಳ ಮನಸ್ಸಿನಲ್ಲಿ ಅಂಥಾ ಭಾವನೆಗಳೆ ಇರಲಿಲ್ಲ. ಅನಾಮಾತ್ತಾಗಿ ಅವನನ್ನ ದೂರ ತಳ್ಳೋಕೂ ಮನಸ್ಸಿಲ್ಲ. ಅವಳು ಈಗ ಸಂಪೂರ್ಣ ಗೊಂದಲದಲ್ಲಿದ್ಲು. ಅಲ್ಲಿಂದ ಆಕೆ ಇವನನ್ನ ಅವನ ಭಾವನೆಗಳಿಂದ ಹೊರಕ್ಕೆ ತರೋ ಪ್ರಯತ್ನ ಮಾಡಿದ್ಲು. ಇದೇ ಸಲುವಾಗಿ ಅವಳು ಇವರು ಮಾತಾಡೊಕ್ಕೆ ಹೋದಾಗ್ಲೆಲ್ಲಾ ಅವಳಮನಸ್ಸಿನಲ್ಲಿ ಇವರಬಗ್ಗೆ ಬೇರೆರೀತಿಯ ಭಾವನೆಗಳೇನೂ ಇಲ್ಲ, ಕೇವಲ ಸ್ನೇಹ ಅಷ್ಟೆ ಅಂತ ತಿಳಿಸಲು ಬಲು ವಿಧವಾಗಿ ತಿಳಿಹೇಳಿದಳು. ಮಾತು ಮತ್ತೂ ಜಾಸ್ತಿಯಾಯ್ತು, ಮಾತಾಡ್ತಿದ್ದ ಸಮಯಬದಲಾಯ್ತು, ಮಾತಿನ ಕಾಲಾವಧಿ ಹೆಚ್ಚಾಯ್ತು.

ಇದೇ ಮಧ್ಯ ಇದೆಲ್ಲವೂ ನನಗೆ ಮಹೇಶ ದಿನಾ ಒಪ್ಪಿಸುತ್ತಿದ್ದ. ನಾನು ಆಕೆಯ ಅಭಿಪ್ರಾಯ ಇತ್ತಿಹಿಡಿದು ಇವನಿಗೆ ಅವಳಿಷ್ಟಕ್ಕೆ ಬಿಡು, ಅದರಿಂದ ಹೊರಗೆ ಬಾ ಅಂತ ಎಷ್ಟು ಕರೆದರೂ ಹೊರಬರೋಕ್ಕಾಗದಷ್ಟು ಒಳಗೆ ಹೋಗಿದ್ದ ಮಹೇಶ. ಹುಂ.. ಏನು ಮಾಡೊಕೆ ಸಾಧ್ಯ. ಅವನು ಏನೇಆದ್ರೂ ನನ್ನ ಗೆಳ್ಯ ತಾನೆ.. ಅವನ ಜೊತೆಗಿರಲೇಬೇಕು. ಮಧ್ಯ ಎಷ್ಟು ಸಾಧ್ಯನೋ ಅಷ್ಟೆಲ್ಲಾ ಪ್ರಯತ್ನ ನಡಿತನೇ ಇತ್ತು.’ಅಪ್ಪ-ಅಮ್ಮ ನ್ನ ಬಿಟ್ಟು ನನಗೆ ಇರೋಕ್ಕಾಗಲ್ಲ. ನಮಗಾಗಿ ಅವರು ಅಷ್ಟೆಲ್ಲಾ ಮಾಡಿರೋ ಅವರಿಗೆ ಅವರಿಷ್ಟದಂತಿರೋ ಮಕ್ಕಳು ಬೇಕು ಅಲ್ವ? ನಾನು ಮದುವೆಯಾಗೋ ಹುಡ್ಗಿನ ನಮ್ಮಮ್ಮನೇ ಹುಡುಕೋದು ಕಣೊ. ಆಮೇಲೆ ಅವರ ಲಿಸ್ಟ್ ನಲ್ಲಿ ನನಗೆ ಆಗೋರ್ನ ನಾನು ಚೂಸ್ ಮಾಡ್ತಿನಿ’ ಅಂತಿದ್ದ ಮಹೇಶ ಈಗ ’ನಾನು ಅಪ್ಪ-ಅಮ್ಮನ್ನ ಒಪ್ಪಿಸುತ್ತೀನಿ. ನಂಗೆ ಗೊತ್ತು ಅವರಿಗೆ ಹೇಗೆ ಒಪ್ಪಿಸಬೇಕು’ ಅನ್ನೋ ಮಟ್ಟಕ್ಕೆ ಬಂದಿದ್ದ. ನಾನು ಇದು ತಪ್ಪು ಅಥವಾ ಅವನ ಈ ಬದಲಾವಣೆಯ ಬಗ್ಗೆ ಟೀಕೆ ಮಾಡ್ತಿಲ್ಲ. ಅದಕ್ಕೆ ನಾನು ಸಲ್ಲ ಕೂಡ. ಅವನ ಈ ಬದಲಾವಣೆಗೆ ಅವನು ಆ ಹುಡ್ಗಿಯಮೇಲಿಟ್ಟಿದ್ದ ಪ್ರೀತಿಯೇ ಕಾರಣ. ಅಂದ್ರೆ ತುಂಬಾ ಆಳವಾಗೇ ಪ್ರೀತಿಸುತ್ತಿದ್ದ. ಈ ಪ್ರೀತಿನೇ ಹಾಗಲ್ವ ಸ್ವಾಮಿ? :)

ಬರಬರುತ್ತಾ ನನಗೆ ಅವನಿಂದ ಆಕೆ ಬದಲಾಗ್ತಿರೋ ರೀತಿಯ ಮಾತು ಕೇಳಿಸ್ತಾಬಂತು. ನಾನು ಸ್ವಲ್ಪ ಅವಕ್ಕಾದೆ! ಅರರೆ, ಏನಿದು ಹುಡುಗಿ ತನ್ನ ಸಂಯಮ ಕಳೆದುಕೊಂಡ್ಳ ಇಷ್ಟುಬೇಗ ಅನ್ನಿಸ್ತು. ಇದರಬಗ್ಗೆ ಯೋಚಿಸ್ತಾ ಇದ್ದೆ. ಅದೇಸಮಯಕ್ಕೆ ಮೇಲೆಹೇಳಿದ ಹಾಡಿನ ಸಾಲುಗಳು ನನ್ನ ಹಾಗೇ ಹಿಡಿದಿಟ್ಟವು. ಈಗ ಈ ಸಾಲುಗಳಿಗೆ ನನ್ನ ಗೆಳೆಯ ಮಹೇಶನೇ ನಿದರ್ಶನವಾಗಿದ್ದ. ಅವನ ಗೆಳತಿ ಅವನನ್ನ ಅವನ ಗೊಂದಲಗಳಿಂದ ಹೊರಕ್ಕೆ ತರೋಕ್ಕೆ ಹೋಗಿ ಅವಳೇ ಬಿದ್ಲ ಅಂತ ಅನ್ನಿಸ್ತಿತ್ತು. ಹೌದು, ಅವಳು ಈಗ ಜಾರಿ ಬಿದ್ದಿದ್ಲು! ಆದ್ರೆ ಮೊದಲಿಂದ ಅವಳು ಅದಕ್ಕೆ ಅವಳ ಮನಸ್ಸನ್ನು ಸುಲಭವಾಗಿ ಬಿಟ್ಟಿರಲಿಲ್ಲವಾದ್ದರಿಂದ ಸ್ವಲ್ಪ ಕಷ್ಟ ಪಡುತ್ತಿದ್ಲು. ಒಮ್ಮೆ ಒಪ್ಪಿಕೊಂಡ್ರೆ ಮತ್ತೊಮ್ಮೆ ಬೇಡ ಅಂತಿದ್ಲು, ಮಗದೊಮ್ಮೆ ನನಗೆ ಗೊತ್ತಾಗ್ತಿಲ್ಲ ನಾನೇನ್ಮಾಡ್ತಿದ್ದೀನಿ ಅಂತಿದ್ಲು. ತಲೆಕೆಟ್ಟು ಹಲವಾರು ಸಾರಿ ತನ್ನ ಅಶ್ರುತರ್ಪಣ ಮಾಡಿದ್ಲು.

ಇಷ್ಟೆಲ್ಲಾ ಆಗಿದ್ದು ಕೇವಲ ಮುವ್ವತ್ತು ದಿನಗಳಲ್ಲಿ! ನಾನು ಹಾಗೇ ಯೊಚಿಸಿದೆ,ಅಷ್ಟು ಗಿದ್ದ ಹುಡುಗಿ ಯಾಕೆ ಮರುಳಾದ್ಲು ಮತ್ಯಾಕೆ ಗೊಂದಲಕ್ಕೆ ಬಲಿಯಾದ್ಲು ಅಂತ. ಅವಳು ಕೆಲಸದ ನಿಮಿತ್ತ ನಾವಿದ್ದ ಊರಿಗೆ ಬಂದಿದ್ಲು ತನ್ನ ಮನೆಯವರನ್ನೆಲ್ಲಾ ಬಿಟ್ಟು. ಈಲ್ಲಿ ಅವಳಿಗೆ ಹತ್ತಿರವಾಗಿ ಯಾರೂ ಇರಲಿಲ್ಲ. ಅವಳ ಮನಸ್ಸಿನಲ್ಲಿದ್ದದ್ದನ್ನು ಹಂಚಿಕೊಳ್ಳಲು ಯಾರೂ ಇರಲಿಲ್ಲ. ಮಹೇಶ ಅವಳ ಆ ಕೊರತೆಯನ್ನ ನೀಗಿಸಿದ್ದ. ಅವನ ಆ ಗುಣ ಅವಳನ್ನು ಅವನ ಹತ್ತಿರವಾಲು ಪ್ರೇರೇಪಿಸಿತ್ತು.

ಈಗ ಇಬ್ಬರೂ ಗೊಂದಲದಲ್ಲಿ ಮುಳುಗಿಹೋಗಿದ್ದಾರೆ. ಅವರಿಗೆ ಮುಂದೇನು ಅಂತ ಗೊತ್ತಗ್ತಿಲ್ಲ. ಇಬ್ಬರೂ ಬೇಕು-ಬೇಡಗಳ ನಡುವೆ ಸಂಘರ್ಷ ನಡೆಸುತ್ತಿದ್ದಾರೆ. ಯಾಕೆ ಯೋಚನೆ? ಮೇಲಿರೋ ಸೂತ್ರಧಾರ ಎಲ್ಲರಿಗೂ ದಾರಿ ತೋರಿಸ್ತಾನೆ ಅಲ್ವ? ಹೌದು. ಆವನೇ ಒಂದು ದಾರಿ ತೋರಿಸ್ದ. ಆಕೆಗೆ ಅವಳ ಅಪ್ಪ-ಅಮ್ಮ ಇದ್ದ ಊರಿನಲ್ಲೇ ಕೆಲಸ ಸಿಕ್ತು. ಬೇರೆ ದಾರಿಯೇ ಇಲ್ಲ. ಅವಳು ಹೊರಟಳು. ಹೋದ ಸ್ವಲ್ಪ ದಿನದಲ್ಲೇ ಇವರಿಬ್ಬರ ಮಧ್ಯದ ದೂರ ಇವರಿಗೆ ಒಂದು ನಿರ್ಧಾರ ಮಾಡೊಕ್ಕೆ ಸಹಾಯ ಮಾಡ್ತು. ಇಬ್ಬರೂ ಯಾವುದೇ ನಿರ್ಧಾರ ಒಟ್ಟಿಗಿದ್ದಾಗ ತಗೊಂಡಿಲ್ದೇಇದ್ದೆದ್ರಿಂದ ಭೌತಿಕವಾಗಿದ್ದ ದೂರ ಮನಸ್ಸುಗಾಳಿಗೂ ಆಯ್ತು. ಇಬ್ರೂ ನಿಜವನ್ನು ಬೇಗ ಅರ್ಥಮಾಡಿಕೊಂಡ್ರು! ಈಗಲೂ ಒಳ್ಳೇ ಸ್ನೆಹಿತರಾಗಿದ್ದಾರೆ. ತಮ್ಮ ಮುಂದಿರೋ ಜೀವನವನ್ನ ಎದುರಿಸಲು ಮತ್ತೆ ತಮ್ಮ ತಮ್ಮ ದಾರಿಗಳಿಗೆ ವಾಪಸ್ ಆಗಿದ್ದಾರೆ!

ಮಹೇಶ ಅವಳನ್ನ ಬಿಡಲ್ಲ ಆಂತಿದ್ದ. ಬಿಟ್ಟಿರಕ್ಕೆ ಆಗಲ್ಲ ಅಂತಿದ್ದ. ಈಗ ಹೊರಗೆ ಬಾಂದಿದ್ದಾನೆ. ಕಾಲಕ್ಕೆ ಏನನ್ನಾದರೂ ವಾಸಿಮಾಡೊ ತಾಕತ್ತಿದೆ ಅಲ್ಲವೆ?

1 comment:

Madhu said...

ಇದು ಹುಡುಕು ನೋಡಿ
http://www.yanthram.com/kn/