ನಾನು ಮೊದಲ ಬಾರಿ 'ಮೈಸೂರು ಮಲ್ಲಿಗೆ' ಧ್ವನಿ ಸುರಳಿ ಕೇಳಿದಾಗಿನಿಂದ ಅದರ ಸಂಗೀತಕ್ಕೆ ಮಾತ್ರವಲ್ಲ, ಅದರ ಒಳಗಿನ ಕಾವ್ಯ ಸಂಪತ್ತಿಗೂ ಮಾರುಹೋದೆ. ಆಗ ನಾನು ತುಂಬಾ ಚಿಕ್ಕವನು. ಆದರೂ ಕಾವ್ಯ, ಕನ್ನಡದ ಕವಿಗಳ ಬಗ್ಗೆ ಒಲವು/ಅರಿವು ಅಲ್ಪ-ಸ್ವಲ್ಪವಿತ್ತು - ನಾ ಓದಿದ ಕನ್ನಡ ಮಾಧ್ಯಮದ ಶಾಲೆಗೆ ಧನ್ಯವಾದ. ಮೈಸೂರು ಮಲ್ಲಿಗೆಯಲ್ಲಿದ್ದ ೯ ಹಾಡುಗಳನ್ನು ಕೇಳಿದಮೇಲೆ ಆ ಕವನ ಸಂಕಲನವನ್ನು ಓದುವ ಆಸೆ ಜಾಸ್ತಿಯಾಯ್ತು. ಅಲ್ಲಿ, ಇಲ್ಲಿ ಹುಡುಕಿ, ನಂತರ ಅವರ ಸಂಪೂರ್ಣ ಸಂಕಲನ 'ಮಲ್ಲಿಗೆಯ ಮಾಲೆ' ಕೊಂಡೆ. ಈಗಾಗಲೇ ನನ್ನ ಕನ್ನಡದ ಸಾಹಿತ್ಯದ ಹವ್ಯಾಸ ಕಡಿಮೆಯಾಗಿದೆ; ಹಲವಾರು ವರ್ಷಗಳೇ ಕಳೆದಿವೆ. ಆದರೂ 'ಮೈಸೂರು ಮಲ್ಲಿಗೆ' ಬಗೆಗಿನ ನನ್ನ ಅನಿಸಿಕೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಪ್ರಯತ್ನವೇ ಇದು.
ಮೈಸೂರು ಮಲ್ಲಿಗೆಬಗ್ಗೆ ಎಚ್. ಎಸ್. ರಾಘವೆಂದ್ರರಾವ್ ಅವರು ಅದಕ್ಕೆ ಪಾಶ್ಚಿಮಾತ್ಯದ ಪ್ರಭಾವವಿದೆ ಎಂದು ಒಂದೆಡೆ ಬರೆದಿದ್ದಾರೆ. ಅಂತೆಯೆ, ಅದರಲ್ಲಿ 'ಹಳಗನ್ನಡಗಳ ಕಾಮಸೀಮಿತ ಪ್ರಣಯಕ್ಕೆ ಇಲ್ಲಿ ಪಾರಸ್ಪರಿಕ ಭಾವನೆಗಳ ಉಡುಗೆ ಸಿಕ್ಕಿದೆ' ಎಂದಿದ್ದಾರೆ. ಅಂದಿನ ಕಾಲಕ್ಕೆ ಆ ಮಾತು ಸೂಕ್ತವಿರಬಹುದು ಆದರೆ ಅದೇ ಮೈಸೂರು ಮಲ್ಲಿಗೆಯ ಕವನಗಳನ್ನು ಇಂದಿನ ಯುವಕ-ಯುವತಿಯರು ಓದಿದಲ್ಲಿ, ಹಲವು ವಿಷಯಗಳು ಇಂದಿಗೂ ಸಮಂಜಸ ಎಂದೆನಿಸುತ್ತದೆ. ಅವರೂ ಕೂಡ ಅದನ್ನೇ ಬಯಸುತ್ತಿದ್ದರೆಂಬುದು ಸ್ಪಷ್ಟವಾಗುತ್ತದೆ. ಅದರಲ್ಲೂ ಕೆ.ಎಸ್.ನ. ಅವರು ಹೆಣ್ಣನ್ನು ಬಣ್ಣಿಸಿರುವ ರೀತಿಯಂತೂ ಇಂದಿಗೂ ಸಲ್ಲುತ್ತದೆ. ಅದನ್ನೇ ಇಂದಿನ ಯುವಕ (ಕನ್ನಡ ಬಲ್ಲ ಯುವತಿಗೆ) ಹೇಳಿದಲ್ಲಿ ಅವಳ ಪ್ರೀತಿ ಗಿಟ್ಟಿಸುವುದರಲ್ಲಿ ಸಂಶಯವೇಯಿಲ್ಲ. 'ಹಳ್ಳಿಯ ಚಲುವೆಗೆ'ಯಲ್ಲಿ ಹೇಳಿರುವ ಈ ಸಾಲುಗಳನ್ನು ನೋಡಿ:
"ಬೆಳ್ಳಬೆಳ್ಳಗೆ ತೆಳ್ಳತೆಳ್ಳಗಿಹೆ ನೀನು;
ಬೇಟೆಗಾರನ ಬಿಲ್ಲಿನಂತಿರುವೆ ನೀನು.
ಒತ್ತಾಗಿ ಕಪ್ಪಾಗಿ ಬೆಳೆದಿರುವ ಹುಬ್ಬು,
ಪಾರಿವಾಳದ ಕಣ್ಗೆ ನೆರಳನಿತ್ತಿಹುದು.
ಉಟ್ಟ ರೇಸಿಮೆಗಿಂತ ನಿನ್ನ ಮೈ ನುಣುಪು;
ಬೆಟ್ಟದರಗಿಳಿಗಿಂತ ನಿನ್ನ ನುಡಿ ಇಂಪು;
ತುಂಬು ಹರೆಯದ ಹುಡುಗಿ ನೀನೊಲುಮೆಗೀಡು;
ನಂಬಿ ನನ್ನನು ವರಿಸಿ ಸಂತಸದಿ ಬಾಳು."
ಇದನ್ನು ಕೇಳಿ ಯಾರು ತಾನೇ ಸೋಲುವುದಿಲ್ಲ ಹೇಳಿ? ಅವಳನ್ನು ಹೊಗಳುವುದರ ಜೊತೆಗೆ ಅವನು ಅವಳ ಕೈಬಿಡನೆಂಬ ಆಶ್ವಾಸನೆ ಕೂಡ ನೀಡುತ್ತನೆ. ಪ್ರೀತಿಯಿರುವ ಯಾವ ಹುಡುಗಿಗೆ ಅವಳ ಪ್ರಿಯತಮನ ಇಂತಹ ನಂಬಿಕೆ ಬೇಡ ಹೇಳಿ? ಇಂದಿಗೂ - ಎಂದೆಂದಿಗೂ ಕೂಡ - ಪ್ರೀತಿ, ದಾಂಪತ್ಯಗಳು ನಿಂತಿರುವುದೇ ಈ ನಂಬಿಕೆಯ ಮೇಲಲ್ಲವೆ?
'ಗೃಹಲಕ್ಷ್ಮಿ'ಯ ಕೊನೆಯಲ್ಲಿ ಕೆ.ಎಸ್.ನ. ಹೇಳುತ್ತಾರೆ: '... ತಾರೆಗಳ ಮೀಟುವೆವು, ಚಂದಿರನ ದಾಟುವೆವು; ಒಲುಮೆಯೊಳಗೊಂದು ನಾವು; ನಮಗಿಲ್ಲ ನೋವು, ಸಾವು'. ಎಂತಹ ಸುಂದರ ಕಲ್ಪನೆ! ಅಲ್ಲವೆ? ಯಾವ ದಂಪತಿಗಳಿಗೆ ಇದು ಬೇಡ? ಹೇಳುವ ರೀತಿ ಕೊಂಚ ಬೇರೆಯಾಗಿರಬಹುದು ಆದರೆ ಅರ್ಥ ಇದೇ ಅಲ್ಲವೆ?
ಈ ಸಾಲುಗಳು ನೆನಪಿದೆಯೆ? 'ಯಾರು ಕದ್ದು ನೋಡಿದರೇನು? ಊರೆ ಎದ್ದು ಕುಣಿದರೇನು? ಜನರ ಬಾಯಿಗಿಲ್ಲ ಬೀಗ, ಹೃದಯದೋಳಗೆ ಪ್ರೇಮರಾಗ ಇಂಥಕೂಗನಳಿಸಿದೆ, ಬೆಳಗಿ ಬದುಕ ಹರಸಿದೆ'. ಅಬ್ಬ! ನಮ್ಮಲ್ಲೊಂದು ಗಾದೆಯಿದೆ - 'ಜನರನ್ನು ಮೆಚ್ಚಿಸಲು ಜನಾರ್ಧನನಿಂದಲೂ ಸಾಧ್ಯವಿಲ್ಲ' ಎಂದು. ಎಷ್ಟೋಜನ ಜನಕ್ಕಂಜಿ ತಮಗೆ ಪ್ರೀತಿಯವರ ಜೊತೆ ಹೋಗದೆ ಮನಸ್ಸಿನಲ್ಲೇ ಮಣೆಹಾಕುವುದನ್ನು ಕೇಳಿದ್ದೇನೆ, ನೋಡಿದ್ದೇನೆ - ಅದು ಮದುವೆಯ ಮೊದಲು. ಆದರೆ ಮದುವೆಯ ಮೊದಲ ದಿನಗಳು ಹೇಗಿದ್ದವು ಎಂದು ಹೇಳಿರುವ ಈ ಸಾಲುಗಳು ಪ್ರಸ್ತುತ ದಿನಗಳಲ್ಲಿ ಪ್ರೀತಿಸಿದವನೊಂದಿಗೆ ಹೋಗಲು ತಪ್ಪಿಲ್ಲ ಎಂದು ಸಾರಿ ಸಾರಿ ಹೆಳಿದಂತಿದೆ ನನಗೆ. ಆದರೂ ಕೆಲವು ಸಮಾಜವಾದಿಗಳು ಇದನ್ನು ತಪ್ಪು ಎಂದು ವಾದಿಸುವರೆಂದು ನಾನು ಬಲ್ಲೆ. ಆವರಿಗೊಂದು ನನ್ನ ಪ್ರಶ್ನೆ. ಪ್ರೀತಿಯಲ್ಲಿ ತಪ್ಪಿಲ್ಲವೆಂದವರು ಅದನ್ನು ವ್ಯಕ್ತಪಡಿಸುವ ರೀತಿಯಲ್ಲಿ ತಪ್ಪೇಕೆ ನೋಡುತ್ತರೆ? ನಿಜವಾದ ಪ್ರೀತಿಯಲ್ಲಿ ಕಾಮಕ್ಕೆ ಎಷ್ಟರಮಟ್ಟಿಗೆ ಪ್ರಾಮುಖ್ಯತೆಯಿದೆ?
ಕೆ.ಎಸ್.ನ. ಅವರ ಪ್ರಿಯತಮ ತನ್ನ ಪ್ರೇಯಸಿಯ ಪ್ರೀತಿಯನ್ನು ವ್ಯಕ್ತಪಡಿಸಿರುವ ರೀತಿ ನನಗೆ ತುಂಬ ಇಷ್ಟವಾಯಿತು. ಅವನಿಗೆ ತನ್ನ ಪ್ರೇಯಸಿಯ ಪ್ರೀತಿ 'ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ, ನಿನ್ನೊಲುಮೆ ನನ್ನಕಂಡು' ಎನ್ನಿಸುತ್ತದೆ. ಸಾಗರದ ಹುಣ್ಣಿಮೆ ಉಬ್ಬರಕ್ಕೆ ಎಲ್ಲರೂ ಭಯಪಡುವುದರಲ್ಲಿ ಸಂಶಯವಿಲ್ಲ, ಆದರೆ ಈ ಉಬ್ಬರಕ್ಕೆ ಭಯವುಂತೆ!? ಮಿಥ್ಯಪ್ರೇಮಿಗಳಲ್ಲಿ ಇರಬಹುದು, ಆದರೆ ನಿಜ ಪ್ರೇಮಿಗೆ ಅವಳ ಪ್ರೀತಿ 'ತೀರದಲಿ ಬಳುಕುವಲೆ ಕಣ್ಣಚುಂಬಿಸಿ ಮತ್ತೆ ಸಾಗುವುದು ಕನಸಿನಂತೆ'. ಇದು ಕಲ್ಪನೆಯ? ಕಲ್ಪನೆ ಎನ್ನುವುದಕ್ಕಿಂತ ಅದನ್ನು ಅನುಭವಿಸಿ ನೋದುವುದರಲ್ಲಿ ಹೆಚ್ಚಿನ ಅರ್ಥವಿದೆ ಎನ್ನುವುದು ನನ್ನ ಅನಿಸಿಕೆ. ಎಷ್ಟೋ ಪ್ರೇಮಿಗಳಿಗೆ ಇದು ಸತ್ಯ ಅಲ್ಲವೆ? ನೀವೂ ಅನುಭವಿಸಿ.
[I wrote this a year ago when I bought 'malligeya maale'. Now I feel I could have added or modified this, but didn't want to change the original script. Sharing the same]
Subscribe to:
Post Comments (Atom)
No comments:
Post a Comment