Wednesday, April 19, 2006

ಜೀವನ

ಮೊನ್ನೆ ಜಯನಗರದ ದೇವಸ್ಥಾನವೊಂದರಲ್ಲಿ ನನ್ನ ಚಪ್ಪಲಿ ಹಾಕಲು ಬಗ್ಗಿದಾಗ, "ನಾನು Insurance agentಉ" ಎಂದ ಒಂದು ಧ್ವನಿ ಕೇಳಿತು. ಕತ್ತು ಮೇಲೆತ್ತಿ ನೋಡಿದೆ. ೪೦ರ ಪ್ರಾಯದ ಒಬ್ಬರು ತಮ್ಮ ಕೈ ಹಿಂದೆ ಕಟ್ಟಿ ನಿಂತಿದ್ದರು: ಉಬ್ಬು ಹಲ್ಲು, ಅರ್ಧ ತೆರೆದ ಕಣ್ಣುಗಳು, summer cut ಗಿಂತಲೂ ಚಿಕ್ಕದಾದ ಕೂದಲುಗಳು, ಸಾಧಾರಣವಾದ ಬಟ್ಟೆ. ನನ್ನನ್ನು ನೋಡಿ, "ನಾನು Insurance agentಉ. ನಿಮ್ಮದು ಏನಾದ್ರು ಇದ್ರೆ ಮಾಡಿಸಿಕೊಡುತ್ತೀನಿ. ಮಾಡಿಸ್ತಿರ?" ಅಂದ್ರು. ತುಂಬ ದೀನ ಭಾವದಲ್ಲಿದ್ದವರನ್ನು ಕಂಡು ಒಂದು ಕ್ಷಣ ನನ್ನ ಮನಸ್ಸು ಅಯ್ಯೊ ಅಂತು. ಆದರೂ ನಾನು ಏನೂ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ. "ನಾನು ಎಲ್ಲ ಮುಗಿಸಿಬಿಟ್ಟೆನಲ್ಲ, ಸ್ವಾಮಿ" ಅಂದೆ. ಅದಕ್ಕವರು, "ಹೌದೇ..." ಎಂದು ರಾಗ ಎಳೆದು "Post office RDನೂ ಮಾಡಿಸ್ತಿನಿ. ಬೇರೆ ಯಾರಿಗಾದರೂ ಬೇಕಿದ್ದರೆ ನಂಗೇ ಹೇಳಿ. ದೇವಸ್ಥಾನಕ್ಕೆ ಬರ್ತಿರ್ತೀರ ಅಲ್ವ?" ಎಂದರು. ಆಯಿತು ಎಂದು ಹೇಳಿ ನಾನು ಹೊರಬಿದ್ದೆ.

Insurance ಮಾಡಿಸಿ ಅಂತ ಬರೋರು ಸರ್ವೇ ಸಾಮಾನ್ಯ. ಆದರೆ ಇವರ ದೀನಸ್ಥಿತಿ ನೋಡಿ ನನ್ನ ಮನಸ್ಸು ಚುರುಕ್ ಅಂತು. ನಾವೇನೆ ಆದರೂ ಪರಿಸ್ಥಿತಿ ಮನುಷ್ಯನನ್ನು ಏನೆಲ್ಲ ಮಾಡಿಸುತ್ತದೆ ಅಲ್ಲವೆ? ಸ್ವಾಭಿಮಾನ ಅಡ್ಡಬರುವುದೇ ಇಲ್ಲವೆ ಇವರಿಗೆ? ಅವರ ವೃತ್ತಿ ಎಲ್ಲರನ್ನು ಕೇಳುವುದೇ ಇರಬಹುದು, ಆದರೆ ಈಗಿನ ಖಾಸಗಿ ಸಂಸ್ಥೆಗಳು ಇಂಥವರ ಹೊಟ್ಟೆಗೆ ಹೊಡೆಯುತ್ತಿದ್ದಾರೇನೊ ಅನ್ನಿಸುತ್ತದೆ. ಇಂಥ ಮನುಷ್ಯರನ್ನು ನೋಡಿ ನಗುವವರೆಷ್ಟೊ - ಆಡಿಕೊಳ್ಳುವವರೆಷ್ಟೊ. ಏನೇ ಆಗಲಿ ಜೀವನ ನಡೆಯಲೇ ಬೇಕಲ್ಲವೆ?

"ಉದರನಿಮಿತ್ತಂ ಬಹುಕೃತ ವೇಷಂ" - ಎಷ್ಟು ನಿಜ!

No comments: