Tuesday, August 21, 2007

ಇದು ನಮ್ಮ...

ಅದೊಂದು ೧೫ರಿಂದ ೨೦ ಅಡಿ ಎತ್ತರದ ಕಟ್ಟಡ. ಸುಮಾರು ೪೦ ಅಡಿ ಉದ್ದ ಮತ್ತೆ ೩೦ ಅಡಿ ಅಗಲದ ಕೋಣೆಯನ್ನ ಆ ಕಟ್ಟಡದಲ್ಲಿ ಮಾಡಿದ್ದಾರೆ. ಕೋಣೆಯ ಒಳಗೆ ಹೋಗಲು ಎರಡು ಮೆಟ್ಟಿಲುಗಳಿವೆ – ಕಟ್ಟಡದ ಎಡಭಾಗಕ್ಕೆ. ಮೆಟ್ಟಿಲು ಹತ್ತಿದ ತಕ್ಷಣ ಕಟ್ಟಡದ ಉದ್ದಕ್ಕೂ ಇರೋ ಜಗಲಿ ಬರುತ್ತೆ. ಅದನ್ನ ಧಾಟಿದರೆ ಕೋಣೆಗೆ ಪ್ರವೇಶ. ಆ ಕೋಣೆಯ ಪ್ರವೇಶವಾದ ಕೂಡಲೆ ಎದುರಿಗೋದು ಮೇಜು ಮತ್ತೆ ಕುರ್ಚಿ ಇದೆ. ಹಾಗೇ ಅಲ್ಲೇ ನಿಂತು ಬಲಕ್ಕೆ ತಿರುಗಿದರೆ ಸಾಲಾಗಿ ನಾಲ್ಕೈದು ಮಣೆಗಳಿವೆ. ಪ್ರತಿಯೊಂದು ಸಾಲಿನಲ್ಲೊ ಮಧ್ಯ ಸ್ವಲ್ಪ ಜಾಗ ಬಿಟ್ಟಿದ್ದಾರೆ – ಮಣೆಗಳ ಮಧ್ಯ – ಮುಂದಿನಿಂದ ಹಿಂದಿನವರೆಗೆ ಓಡಾಡೋಕೆ. ಬಲಭಾಗದ ಗೋಡೆಗೆ ಅವುಚಿಕೊಂಡಂತೆ ಎರಡು ಬೆಂಚು ಹಾಕಿದೆ. ಗಿಜಿ-ಗಿಜಿ ಅಂತ ಮಾತಾಡೋ ಶಬ್ಧ ಯಾವಾಗಲೂ. ಮಧ್ಯೆ ಮಧ್ಯೆ “ಏಯ್! ಏಯ್!!” ಅನ್ನೋ ಮಾತುಗಳು ಒಂದ್ ಕಡ್ಡಿಯನ್ನು ಆ ಮೇಜಿನಮೇಲೆ ಹೊಡೆದಾಗ ಬರೋ ’ಠಪ್’ ಅನ್ನೋದರಜೊತೆಗೆ ಕೇಳುತ್ತೆ. ಆಗ ಗಿಜಿ-ಗಿಜಿ ಸ್ವಲ್ಪ ಕಡಿಮೆ ಯಾಗುತ್ತೆ. ಒಂದೆರಡು ನಿಮಿಷಗಳಷ್ಟೆ! ಮತ್ತೆ ಗಿಜಿ-ಗಿಜಿ ಶುರು!

ಸರಿ, ಮೇಜಿನ ಹಿಂದಿದ್ದ ಕುರ್ಚಿಯಮೇಲೆ ಕುಳಿತಿದ್ದ ಮಧ್ಯವಯಸ್ಕ ಈಗ ಎದ್ದ. ಮೇಜಿನ ಹಿಂದಿದ್ದ ಸಣ್ಣ ಸಣ್ಣ ಮಕ್ಕಳನ್ನು ನೋಡಿ, “ಏಯ್! ಎಲ್ಲಾರೂ ಅ, ಆ, ಇ, ಈ ಬರೀರಿ. ಬಂದು ನೋಡ್ತಿನಿ ಈಗ” ಅಂದ್ರು. ಆ ಪಿಳ್ಳೆಗಳು ಮಣೆಯ ಕೆಳಗೆ ಇಟ್ಟ ಹಳೆಯ ಮಾಸಿದ ಕೆಂಪು-ನೀಲಿ, ಹಸಿರು-ಬಿಳಿ, ಹೀಗೆ ಹಲವಾರು ಬಣ್ಣ-ಬಣ್ಣದ ಕೈ ಚೀಲಗಳನ್ನ ಎಳೆದು ಅದರೊಳಗಿದ್ದ ಒಂದು ಕಪ್ಪಗಿನ ಸ್ಲೇಟು ತಗೋಳತ್ವೆ. ಕೆಲವು ತಗಡಿನಿಂದ ಮಾಡಿ ಮರದ ಕಟ್ಟು ಹಾಕಿದಾವಾದ್ರೆ, ಇನ್ನು ಕೆಲವು ಬಳಪದ ಕಲ್ಲಿನಿಂದ ಮಾಡಿದವು. ಕೆಲವಕ್ಕೆ ಕಟ್ಟೇ ಇಲ್ಲ. ಹೊಡೆತ ತಪ್ಪಿಸಿಕೊಳ್ಳಕ್ಕೆ ಬರೀಲೇ ಬೇಕು.

ಈ ಪಿಳ್ಳೆಗಳು ಇಷ್ಟೆಲ್ಲಾ ಮಾಡೊಹೊತ್ಗೆ, ಆ ಮಧ್ಯ ವಯಸ್ಕ ಎರಡನೇ ಮಣೆಯಲ್ಲಿದ್ದವರ ಬಳಿ ಹೋಗಾಗಿತ್ತು. ಅವರಿಗೆ “ಪುಸ್ತಕ ತಂದಿದೇರೇನ್ರೋ ಎಲ್ಲಾ?” ಅಂತ ಗದರಿಸಿದ್ರು. ಎಲ್ಲಾರೂ ಮತ್ತೆ ಅದೇ ಮಾಸಿದ ಕೈ ಚೀಲಗಳಿಂದ ಇದ್ದ ಎರಡೇ ಪುಸ್ತಕಗಳಿಂದ ಒಂದನ್ನು ತೆಗೆದರು. ಹೆಚ್ಚೂಕಡಿಮೆ ಎಲ್ಲರ ಪುಸ್ತಕಗಳೂ ಹರಿದಿವೆ. ಮೊದಲೆರಡು ಮತ್ತೂ ಕೊನೆಯ ಹಲವಾರು ಪುಟಗಳೇ ಕಾಣೆಯಾಗಿವೆಯಾದರೂ ಪುಸ್ತಕವಂತೂ ಇದೆ! ಸರಿ, ’ಈತ ಗಣಪ. ಈಶನ ಮಗ ಗಣಪ’ ಓದಿಸಿಯಾಯ್ತು. ಇದು ಒಂದನೇ ತರಗತಿಯ ಮೊದಲನೇ ಪಾಠ!

ಮುಂದಿನವು ಅಕ್ಷರಮಾಲೆ ಬೆರೆಯುವಾಗ, ಅವರ ಹಿಂದಿನವು ಗಣಪ-ಈಶನ ಪಾಠ ಒಪ್ಪಿಸುವಾಗ ಅವರ ಹಿಂದೆ ಕೂತಿದ್ದ ಮಕ್ಕಳು ಎರಡನೇ ತರಗತಿಯ ಕನ್ನಡ ಮತ್ತು ಜೊತೆಗಿನದ್ದು ಓದುತ್ತಿದ್ದವು. ಓದುತ್ತಿದ್ದರೋ ಅಥವಾ ಹಾಗೆ ನಟಿಸುತ್ತಿದ್ದರೋ ಗೊತ್ತಿಲ್ಲ ಯಾಕೇಂದ್ರೆ ಸ್ವಲ್ಪ ಮಟ್ಟಿಗೆ ಗಿಜಿ-ಗಿಜಿ ಇತ್ತು! ಕೆಲವು ಮಗ್ಗಿ ಬಾಯಿ ಪಾಠ ಮಾಡುತ್ತಿದ್ದವು.

ಇನ್ನೊಂದು ಮೂಲೆಯಲ್ಲಿ ಒಂದು ಕಬ್ಬಿಣದ ಪೆಟ್ಟಿಗೆಯಿದೆ. ಆದರ ಪಕ್ಕದಲ್ಲಿ ಒಂದು ನೈಲಾನ್ ಚೀಲ. ಇವೆರಡೂ ನಾಲ್ಕೈದು ಇಟ್ಟಿಗೆಗಳ ಮೇಲೆ ಇಟ್ಟಿದ್ದಾರೆ. ಇಟ್ಟಿಗೆಗಳನ್ನ ಎರಡು ಅಂಗುಲದಷ್ಟು ಎತ್ತರದ ಮರಳಿನ ಕಟ್ಟೆ ಕಟ್ಟಿ ನೀರು ಹಾಕಿದ್ದಾರೆ – ಇರುವೆಗಳು ಚೀಲದಲ್ಲಿರುವ ತಿಂಡಿಗೆ ಹತ್ತಬಾರದು ಅಂತ.

ನಿಮಗೆ ಇಷ್ಟು ಹೊತ್ತಿಗೆ ಗೊತ್ತಾಗಿರಬೇಕು ನಾನು ಏನು ಹೇಳುತ್ತಿದ್ದೇನೆ ಅಂತ. ಇದು ನಮ್ಮ ಹಳ್ಳಿಗಳ ಏಕೋಪಾಧ್ಯಾಯ “ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗಳ” ಪರಿಸ್ಥಿತಿ. ಒಂದರಿಂದ ನಾಲ್ಕನೇ ತರಗತಿಯ ಮಕ್ಕಳು ಒಂದೇ ಕೋಣೆಯಲ್ಲಿ ಓದಬೇಕು. ಉಪಾಧ್ಯಾರಯೂ ಒಬ್ಬರೆ. ಅವರು ಒಂದು ತರಗತಿಯ ಒಂದು ಪಾಠ ಮುಗಿಸಿ ಮತ್ತೊಂದಕ್ಕೆ ಹೋಗಬೇಕು. ಇಂಥಾ ಶಾಲೆಗಳು ನೂರಾರು-ಸಾವಿರಾರು. ನಾನು ಓದುವಾಗ ನನ್ನ ಊರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿದ್ದ ಶಾಲೆಗಳೆಲ್ಲಾ ಇವೇ. ಕೆಲವರು ಸ್ವಲ್ಪ ಭಾಗ್ಯಶಾಲಿಗಳು. ಯಾಕೆಂತಿರ? ಅವರೇನಾದರೂ ’ಗ್ರಾಮ’ ಅಂತ ಕರೆಸಿಕೊಳ್ಳೊ ಊರಿನಲ್ಲಿದ್ದರೆ ಅವರಿಗೆ ’ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ’ ನಲ್ಲಿ ಓದೋ ಅವಕಾಶ ಇರುತ್ತೆ. ಏಳನೇ ತರಗತಿಯವರೆಗೆ ಇರತ್ತೆ ಆ ಶಾಲೆಯಲ್ಲಿ. ಅಲ್ಲಿಯ ಪರಿಸ್ಥಿತಿ ಸ್ವಮ್ಪ ಉತ್ತಮ. ನಾನು ನೋಡಿದ ಇಂಥಹ ಒಂದು ಶಾಲೆಯಲ್ಲಿ ಐದು ಕೋಣೆಗಳು. ಒಂದು “office room” ಅಂತ ಆಗಿತ್ತು. ಇನ್ನುಳಿದ ನಾಲ್ಕು ಕೋಣೆಗಳು: ಒಂದರಲ್ಲಿ ಒಂದು ಮತ್ತು ಎರಡನೇ ತರಗತಿ, ಇದೇ ಕೋಣೆಯ ಜಗುಲಿಯಲ್ಲಿ ಶಿಶುವಿಹಾರದ ಚಿಳ್ಳೆಗಳು; ಮತ್ತೊಂದರಲ್ಲಿ ಮೂರನೆ ಮತ್ತು ನಾಲ್ಕನೇ ತರಗತಿ, ಮತ್ತೊಂದರಲ್ಲಿ ಐದನೇ ತರಗತಿ – ಇದು ಸ್ವಲ್ಪ ದೊಡ್ಡದು ಯಾಕೇಂದ್ರೆ ನಮ್ಮಾರಿನ ಸುತ್ತಲಿನಿಂದೆಲ್ಲಾ ಉತ್ತೀರ್ಣರಾದ ಹುಡುಗರು ಇಲ್ಲಿಗೇ ಐದನೆ ತರಗತಿಗೆ ಬರೋದು; ಆರನೇ ಮತ್ತು ಏಳನೇ ತರಗತಿಗಳು ಅವರದೇ ಕೊಠಡಿಗಳು. ಏಳನೇ ತರಗತಿ ಹಿಡುಗರಿಗೆ ಮಾತ್ರ ಸಂಪೂರ್ಣವಾಗ್ ಬೆಂಚುಗಳು! ಉಳಿದೆಲ್ಲಾ ಹುಡುಗರು ಮಣೆಯ ಮೇಲೆಯೇ ಕೂರಬೇಕು. ಒಟ್ಟು ಸುಮಾರು ೫೦೦-೬೦೦ ಮಕ್ಕಳು ಇಲ್ಲಿ ಓದುತ್ತಾರೆ. ಉಪಾಧ್ಯಾರರು ಮಾತ್ರ ೫ ಅಥವಾ ೬ ಮಂದಿ. ಏನಿದು ಯಾವುದೋ News channel ನಲ್ಲಿ ಬರ್ಬೇಕಿರೋ ವರದಿ ಇಲ್ಲಿ ಅಪ್ಪಿತಪ್ಪಿ ಬಂತೇ ಅನ್ಕೋತಿದೀರ? ಇಲ್ಲ. ಇದು ನಿಜ. ಎಲ್ಲಿ ಬಂದರೇನು ಸ್ವಾಮಿ?

ಇದು ಯಾವುದೋ ಓಬೀರಾಯನ ಕಾಲದ ಕಥೆ ಅಂತಿದ್ದೀರ? ಅಲ್ಲ. ಈಗಕೂಡ ನಮ್ಮ ಹಳ್ಳಿಗಳ ಶಾಲೆಗಳ ಪರಿಸ್ಥಿತಿ ಇದೇ. ಸ್ವಲ್ಪ ಚೆನ್ನಾಗಿದೆ ಅಂತ ಕೇಳುತ್ತಿದ್ದೀನಿ – ಹಲವಾರು ಏಕೋಪಾಧ್ಯಾಯ ಪ್ರಾಥಮಿಕ ಶಾಲೆಗಳನ್ನ ಹಿರಿಯ ಪ್ರಾಥಮಿಕ (ಅಂದರೆ middle school) ಶಾಲೆಗಳನ್ನಾಗಿ ಮಾಡಿದ್ದಾರಂತೆ.

ಇಂಥಾ ಶಾಲೆಗಳಲ್ಲಿ ಓದುತ್ತಿರುವ ಹುಡುಗರಿಗೆ ಇಷ್ಟು ಕಷ್ಟ ಇದೆ ಅಂತ ಬೆಂಗಳೂರಿನಲ್ಲಿರುವ ಮಂದಿಗೆ ಹೇಗೆ ಗೊತ್ತಾಗಬೇಕು? ಐದನೇ ತರಗತಿಯಲ್ಲಿ ಮೊದಲಬಾರಿಗೆ ಆಂಗ್ಲ ಭಾಷೆ ಪ್ರಾರಂಭ. ಅಲ್ಲಿನ ಹುಡುಗರಿಗೆ ಐದನೇ ತರಗತಿಯಲ್ಲೇ A, B,C, D ಕಲಿತು ಅದೇ ವರ್ಷ ತಥೆಗಳನ್ನೆಲ್ಲಾ ಓದಬೇಕು. ಇದೊಂಥರಾ ಮುದ್ದಣ ಹೇಳಿದಂತೆ ನೀರಿಳಿಯದ ಗಂಟಲಲ್ಲಿ ಕಡುಬುತುರುಕಿದಂತಾಯ್ತು. ಅಲ್ಲಿನ ಉಪಾಧ್ಯಾಯರು ಆಂಗ್ಲ ಭಾಷೆಯನ್ನ ಕೇವಲ ಒಂದುಬಾರಿ ಓದಿ ಅದನ್ನ ಕನ್ನಡಕ್ಕೆ ತರ್ಜಿಮೆ ಮಾಡುತ್ತಾರೆ. ಮಾತು-ಕಥೆಗಳೆಲ್ಲಾ ಕನ್ನಡವೇ. ಆದು ನಮ್ಮ ಆಡು ಭಾಷೆ. ಸಹಜವಾಗಿ ಕನ್ನಡವೇ ಮುಂದು. ಇದೆಲ್ಲಾ ಮುಗಿಸಿ ಯಾರಾದರೂ ಹುಡುಗರು ಮುಂದೆ ಪ್ರೌಢಶಾಲೆಗೋ ಅಥವಾ pre-universityಗೋ ಆಂಗ್ಲ ಮಾಧ್ಯಮಕ್ಕೆ ಸೇರಿದರೆಂದರೆ ಮುಗಿಯಿತು. ಮೊದಲು ಅವರ ಕಣ್ಣುಗಳಲ್ಲಿ ಧಾರಾಕಾರವಾಗಿ ಗಂಗೆ ಹರಿಯುತ್ತಿರುತ್ತಾಳೆ – “ನಾನೇಕೆ ಇಂಥಾ ತಪ್ಪು ಮಾಡಿದೆ” ಅಂತ. ಅದು ಎರಡೂ ಆಗಬಹುದು, ಮೊದಲಿಂದ ಯಾಕೆ ಆಂಗ್ಲ ಭಾಷೆಯಲ್ಲಿ ಓದಲಿಲ್ಲ ಅಂತ, ಹಾಗೂ ಈಗೇಕೆ ಆಂಗ್ಲ ಮಾಧ್ಯಮಕ್ಕೆ ಸೇರಿದೆ ಅಂತ. ಅವರು ಆಂಗ್ಲ ಮಾಧ್ಯಮಕ್ಕೆ ಹೋಗದಿದ್ದರೆ ಅವರ ಆಂಗ್ಲ ಭಾಷೆಯ ಮೇಲಿನ ಹಿಡಿತ ಚೆನ್ನಾಗುವುದೇ ಇಲ್ಲ. ಅದಿಲ್ಲದಿದ್ದರೆ ಮುಂದೆ ಓದಬೇಕೆನ್ನುವ ಹಂಬಲ??! ಅದನ್ನು ಹೇಗೆ ಪರಿಹರಿಸಿಕೊಳ್ಳೋದು? ಅದಕ್ಕೆ ಈಗ ಪರಿಶ್ರಮ ಪಡಲೇ ಬೇಕು. ಕಾಲೇಜಿಗೆ ಪಟ್ಟಣಗಳಿಗೆ ಓದಲು ಬರೋ ಇದೇ ಹುಡುಗರು ಅಲ್ಲಿನ ಆಂಗ್ಲಭಾಷಾ ಪರಿಣತ ಹುಡುಗರ ಜೊತೆ ಪ್ರತಿಸ್ಪರ್ಧಿಯಾಗಿ ಇಳಿಯಲೇಬೇಕು. ಹಳ್ಳಿಗಳಿಂದ ಬಂದ ಹುಡುಗರು ಯಾಕೆ ಸ್ವಲ್ಪ ಹಿಂದೆ ಉನ್ನತ (ಆಂಗ್ಲವನ್ನೊಳಗೊಂಡ) ಶಿಕ್ಷಣದಲ್ಲಿ ಅಂದರೆ ಇದೇ ಕಾರಣಕ್ಕಾಗಿ. ಆದರೆ ಈ ಸ್ಪರ್ಧೆ ಸುಲಭವಾಗಿ ಎದುರಿಸಲು ಈ ಹಳ್ಳಿ ಮಕ್ಕಳಿಗೆ ಸಾಧ್ಯವೇ ಅಂತಿರಾ? ಇಲ್ಲ! ಸಾಧ್ಯವೇ ಇಲ್ಲ. ಒಂದು ಪಟ್ಟಣದ ಹುಡುಗರ ಆಡುಕೊಳ್ಳುವ ಹಾಗು ಅವಮಾನವನ್ನ ಮೊದಲು ಎದುರಿಸಬೇಕು. ಆಮೇಲೆ ಪಠ್ಯಕ್ರಮಕ್ಕೆ!

ಪ್ರಾಥಮಿಕ ಮಟ್ಟದಲ್ಲಿ ಮಕ್ಕಳಿಗೆ ಅಂಗ್ಲ ಭಾಷೆ ಬೇಕು ಅಂತ ಒಂದೆರಡು ವರ್ಷಗಳ ಹಿಂದೆ ವಾದ ವಿವಾದಗಳು ನಡೆದು ಅಂಗ್ಲ ಭಾಷೆ ಸೇರ್ಪಡೆ ಆಗುತ್ತದೆಂಬ ಆಶಯ ದಿನಪತ್ರಿಕೆಗಳಲ್ಲಿ ಬಂದಾಗ ನಾನು ಖುಷಿಪಟ್ಟೆ. ಈಗ ನಮ್ಮ ಹಳ್ಳಿಯ ಮಕ್ಕಳೂ ಕೂಡ ದಿಳ್ಳಿಯ ಮಕ್ಕಳೊಂದಿಗೆ ಸರಿಸಮವಾಗಿ ನಿಲ್ಲಲು ಅಷ್ಟೇನೂ ಕಷ್ಟವಾಗಲಿಕ್ಕಿಲ್ಲ ಅಂತ. ಆದರೆ ಅದಿನ್ನೂ ಆಗಿಲ್ಲ. ನಾನಿಲ್ಲಿ ಕನ್ನಡಾಭಿಮಾನಿಗಳ ವಿರೋಧವಾಗಿ ಮಾತಾಡುತ್ತಿಲ್ಲ. ಕನ್ನಡವೇ ಮಾಧ್ಯಮವಾಗಲಿ ಆದ್ರೆ ಅಂಗ್ಲ ಭಾಷೆ ಕೂಡ ಮಕ್ಕಳು ಓದಬೇಕು. ಅವರ ಭಾಷಾಕೋಶಗಳು ವಿಕಾಸವಾಗಬೇಕು. ಆಂಗ್ಲಭಾಷೆ ನಮಗೇಕೆ ಬೇಕು ಅಂತ ಅದನ್ನ ಚೆನ್ನಾಗಿ ಬಲ್ಲವ ಕೆಲವರು ಹೇಳಿದರೆ – ಕೆಲ ಹೊರದೇಶಗಳು ಅವುಗಳ ಭಾಷೆಯಷ್ಟೆಯೇ ಕಲಿಯುವುದಿಲ್ಲವೇ ಅಂತ ವಾದ ಮಾಡಬಹುದು. ಆವೆಲ್ಲ ನನ್ನ ಮಟ್ಟಿಗೆ ನಿಷ್ಪ್ರಯೋಜಕ ಮಾತುಗಳು. ಪ್ರತಿಯೊಬ್ಬ ಮಗುವಿಗೂ ಮುಂದೆ ಬರಬೇಕು ಅನ್ನೊ ಹಂಬಲವಿರುತ್ತೆ. ಅದಕ್ಕೆ ಅನುಗುಣವಾದ ವಿಧ್ಯಾಭ್ಯಾಸ ಸಿಗಬೇಕು.

ಒಂದುಕಡೆ ಓದಿದೆ, ಎಲ್ಲಾ ಉನ್ನತ ಶಿಕ್ಷಣ, IT ಮೊದಲುಗೊಂಡು ಅಲ್ಲವೂ ಕನ್ನಡದಲ್ಲೇ ಇರಬೇಕು ಅಂತ. ಅದು ತುಂಬಾ ಒಳ್ಳೆಯದೇ. ಆದರೆ ಈ IT ಅನ್ನೋದನ್ನ ಪ್ರಾರಭಿಸಿದವರು ಅಂಗ್ಲರು. ಆದು ಎಲ್ಲಾಇರೋದು ಅಂಗ್ಲಭಾಷೆಯಲ್ಲಿ. ಅದು ಕನ್ನಡದಲ್ಲಿ ಈಗ ಆಗಬೇಕೆಂದರೆ ಅದನ್ನ ಕನ್ನಡಕ್ಕೆ ತರ್ಜಿಮೆ ಮಾಡಬೇಕು. ಅದನ್ನ ಕನ್ನಡಕ್ಕೆ ತರ್ಜಿಮೆ ಮಾಡೋಕೆ ಕನ್ನಡ ಹಾಗೂ ಅಂಗ್ಲಭಾಷೆ ಎರಡನ್ನೂ ಚೆನ್ನಾಗಿಬಲ್ಲವರು ಬೇಕು. ಹೌದಲ್ಲವೆ?? ಇಲ್ಲಿ ಅಂಗ್ಲಭಾಷೆಯ ಕೊರತೆ ಕಾಣುತ್ತಿಲ್ಲವೇ? ನಮ್ಮದೇ ಭಾಷೆಯಲ್ಲಿ ಕಲಿತ ಮಕ್ಕಳು ಅದನ್ನ ತಮ್ಮ ಭಾಷೆಗಷ್ಟೇ ಅಳವಡಿಸಲು ಸಾಧ್ಯ. ಅಷ್ಟಕ್ಕೇ ಸೀಮಿತವಾಗಲಿಲ್ಲವೇ ಅವರು ಕಲಿತದ್ದು? ಅಲ್ಲಿ ಮತ್ತೆ ಅವರ ಅನುಭವ ಹಾಗೂ ಬುದ್ಧಿಯನ್ನ ಹೊರಗೆ ಹಾಕಲು ಮತ್ತೆ ಈ ಭಾಷೆ ಅಡ್ಡವಾಗಿನಿಂತಿತೇ? ಅದು ಬೇಡ. ನಮ್ಮವರು ಕನ್ನಡ ಕಲಿಯಲಿ, ಬೆಳೆಸಲಿ.. ಅದೇ ಸಮಯದಲ್ಲಿ ಪ್ರತಿಯೊಬ್ಬನಿಗೂ ಅವರದೇ ಕ್ಷೇತ್ರದಲ್ಲಿ ಬೆಳೆಯಲು ಬೇಕಾದ ಅಂಗ್ಲವೂ ಸಿಗಲಿ ಅನ್ನೋದೇ ನನ್ನ ಅಶಯ. ಸುಮ್ಮನೆ ಇಂಥಾ ದೊಡ್ಡ ದೊಡ್ಡ ಮಾತುಗಳನ್ನ ಆಡುವುದು ಸುಲಭ; ಅದನ್ನ ಬೇರೆ ದೃಷ್ಟಿಯಲ್ಲೊ ನೋಡ್ಬೇಕು. ನಮ್ಮ ಮಕ್ಕಳು ಬೆಳೆಯೋಕೆ ಬೇಕಾದ್ದರ ಬಗ್ಗೆ ಯೋಚಿಸಬೇಕು. ಕೇವಲ ಭಾಷಾವಾದಿಗಳ ಕೈಲಿ ಸಿಕ್ಕಿ ಮಕ್ಕಳ ಭವಿಷ್ಯ ಹಾಳಾಗಬರದು ಅಲ್ಲವೆ?

Thursday, August 09, 2007

ನನಗೇಕೆ ಬರೆಯೋ ಹುಚ್ಚು?

ಹೌದು, ನಾನಗೆ ಯಾಕೆ ಬರೆಯಬೇಕು ಅನ್ನಿಸ್ತಿದೆ?

ನಾನೇನೂ ಸಾಹಿತ್ಯದ ಅಸಾಮಾನ್ಯ ವಿಧ್ಯಾರ್ಥಿಯಲ್ಲ. ನನ್ನಲ್ಲಿ ನನ್ನ ಮನಸ್ಸಿನಲ್ಲಿರುವ ಎಲ್ಲಾಭಾವನೆಗಳಿಗೂ ರಂಗು ಕೊಟ್ಟು ಬರೆಯಲು ಗೊತ್ತಿಲ್ಲ. ಕಥೆ ಸೃಸ್ಟಿ ಮಾಡಿ ಅಭ್ಯಾಸವಿಲ್ಲ. ನಾನು ಎಂದೋ ಓದಿದ್ದ ಸುಂದರ ಕನ್ನಡದ ಬಳಕೆ ನನ್ನಿಂದ ಬರವಣಿಗೆಯಲ್ಲಿ ಬಹಳಷ್ಟು ದಿನಗಳಿಂದ ಮೂಡಿಯೇಯಿಲ್ಲ. ನನಗೆ ನನ್ನ ಮೇಲೆಯೇ ಕೋಪ ಬರುವುದುಂಟು. ಯಾಕೇ ನಾನು ನನ್ನದೇ ಒಂದು ಅಂಕಣ ಪ್ರಾರಂಭಿಸಿದೆ ಅಂತ. ನಾನು ಅಂತರ್ಮುಖಿ ಅಂತ ನನಗೆ ಗೊತ್ತು ಆದ್ರೂ ಈ ಸಾಹಸ ಯಾಕೆ ಮಾಡಿದೆ? ನನ್ನ ಕೈಲಿ ನಿಜವಾಗಿ ನನ್ನ ಮನಸ್ಸಿನಲ್ಲಿರುವುದೆಲ್ಲವನ್ನೂ ಇಲ್ಲಿ ಕೆಡುಹಲು ಸಾಧ್ಯವ? ಅಥವಾ ಕೇವಲ ನನ್ನ ಮನಸ್ಸಿನಲ್ಲಿರುವುದನ್ನೆಲ್ಲಾ ಇಲ್ಲಿ ಬರೆದು ನಾನು ಗಳಿಸಿದ್ದಾದರೂ ಏನು? ನಾನು ಬರೆದದ್ದು ನನ್ನಂಥ ಬೇರೆ ಜನರೂ ಓದಲಿ ಅಂತ್ಲ? ಹಾಗಾದರೆ ನನ್ನ ಮನಸ್ಸಿನಲ್ಲಿರುವುದು ಅವರಿಗೆಲ್ಲಾ ಹಿಡಿಸೀತ? ಹಾಗೆ ಬರೆಯಲು ನನ್ನಿಂದ ಸಾಧ್ಯನ? ನನಗೆ ಎಲ್ಲರನೂ ಮೆಚ್ಚಿಸುವಂತೆ ಬರೆಯಬಲ್ಲ ಶಕ್ತಿಯಿಲ್ಲ ಅನ್ನೋದು ಚೆನ್ನಾಗಿ ಬಲ್ಲೆ. ಏನೋ ಬರೆದರೂ ಕೂಡ ಅನನ್ನ ಯಾರಾದರೂ ಇಷ್ಟಪಡುತ್ತಾರೆ ಅನ್ನೋದು ಕೂಡ ಖಾತ್ರಿಯಿಲ್ಲ. ಆದ್ರೂ ಬರೆಯಬೇಕು ಅನ್ನೊ ಹಂಬಲ ಯಾಕೆ ನನ್ನ ಬಿಡುತ್ತಿಲ್ಲ? ನಾನು ಇದೇ ಪ್ರಶ್ಣೆಯನ್ನ ಹಲವು ಬಾರಿ ನನಗೆ ನಾನೇ ಹಾಕಿಕೊಂಡಿದ್ದೇನೆ. ಆದರೆ ಸಮಂಜಸವಾದ ಉತ್ತರ ಮಾತ್ರ ಸಿಕ್ಕಿಲ್ಲ ನನಗೆ.

ಹೋಗಲಿ. ನನಗನ್ನಿಸಿದೆ ಏನನ್ನಿಸುತ್ತೋ ಅದನ್ನ ಇಲ್ಲಿ ಬರೆಯೋಣ ಅಂತ. ಸರಿ. ಹಾಗಂತ ಯಾರೂ ಓದದಿದ್ರೆ? ಹೌದಲ್ಲ, ಯಾರೂ ಓದದಿದ್ದಮೇಲೆ ನಾನು ಬರೆದು ಏನು ಪ್ರಯೋಜನ? ಛೆ! ನಾನು ನನಗನಿಸಿದ್ದನ್ನ ಮಾತ್ರ ಬರೆಯಬೇಕು. ನಾನು ಯಾರಿಗೂ ಬೇಜಾರು ಮಾಡದಿದ್ದರೆ ಅದು ಸರಿ. ಎಲ್ಲದನ್ನೂ ನಾನು ಇಲ್ಲಿ ಬರೆದಿಡಬಹುದು ಆಗ. ಆಲ್ಲವೆ? ಹುಂ. ಅಷ್ಟಿದ್ದರೆ ಸಾಕು ನನ್ನ ಬರವಣಿಗೆಯಲ್ಲಿ. ಹಾಗದರೆ ನಾನು ನನ್ನ ಮನಸ್ಸಿನಲ್ಲಿರುವುದನ್ನ ಬರೀತಿಲ್ಲ. ನಾನು ಬೇರೆಯವರನ್ನು ಒಲಿಸಲು ಬರೀತಿದ್ದೀನಾ? ನನಗೋಸ್ಕರ ಅಲ್ಲ? ಮತ್ತೆ ನಾನು ಬರೆದದ್ದು ಬೇರೆಯವರಿಗೆ ಹಿಡಿಸದಿದ್ದರೆ? ಮತ್ತೆ ನಾನು ಈ ಅಂಕಣ ನನಗಲ್ಲ... ಬೇರೆಯವರಿಗೆ ಪ್ರಾರಂಭಿಸಿದ್ದು? ಹಾಗಾದ್ರೆ ಇದು ನನ್ನದು ಹೇಗಾಗುತ್ತೆ? ಸರಿ. ನನಗೆ ನನ್ನ ಭಾವನೆಗಳನ್ನಷ್ಟೂ ಬರೆಯುವ ಹಕ್ಕಿದೆ. ನಾನೂ ಬರೆಯುತ್ತೇನೆ. ಯಾರು ನೋಡಲಿ ಬಿಡಲಿ. ಶಿವರುದ್ರಪ್ಪನವರು ಹೇಳಿದಂತೆ:

ಯಾರು ಕಿವಿಮುಚ್ಚಿದರೂ ನನಗಿಲ್ಲ ಚಿಂತೆ...

ನಾನೂ ಹಾಗೇನೆ ಇದ್ದುಬಿಡಬೇಕು ನನಗನ್ನಿಸಿದ್ದು ಬರೆದು ಅಂದ್ಕೊತೀನಿ. ಅದನ್ನೇ ನನ್ನ ಜೀವನದಲ್ಲಿ ಅವಳವಡಿಸಿಕೊಳ್ಳುತ್ತಿದ್ದೀನಿ. ಹಾಂ, ನಾನು ನನಗನ್ನಿಸಿಸ್ಸು ತಪ್ಪೋ ಸರಿಯೋ ಮಾಡೇ ಮಾಡುತ್ತೇನೆ ಅಂತಲ್ಲ. ಸ್ವಲ್ಪ ನನ್ನ ಅನಿಸಿಕೆಗಳನ್ನ ಪರಾಂಬರಿಸಿ, ನಾನು ನಾಲ್ಕಾರು ದೃಷ್ಟಿಯಿಂದ ನೋಡಿ ಅದು ತಪ್ಪಲ್ಲ ಅನ್ನಿಸಿದಮೇಲೇನೇ ಮಾಡೋಕೆ ಪ್ರಯತ್ನ ಮಾಡುತ್ತಿದ್ದೇನೆ. ನಮಗೆಲ್ಲಾ ಚಿಕ್ಕವಯಸ್ಸಿನಿಂದ ’ಬೇರೆಯವರು ಏನನ್ನುತ್ತಾರೆ, ನಮ್ಮ ಬಗ್ಗೆ ಏನಂದುಕೊಳ್ಳುತ್ತಾರೆ’ ಅನ್ನೋದನ್ನ ನಮ್ಮ ತಲೆಯಲ್ಲಿ ತುಂಬಿರುತ್ತಾರೆ ದೊಡ್ಡವರು. ಹಾಗಾಗಿ ನಾವು ಏನೇ ಮಾಡಿದರೂ ಬೆರೆಯವರನ್ನು ಮನಸ್ಸಿನಲ್ಲಿಟ್ಟುಕೊಂಡೇ ಕೆಸಲ ಪ್ರಾರಂಭಿಸುತ್ತೀವಿ, ಯೋಚಿಸುತ್ತೀವಿ, ಎಲ್ಲಾ. ಅದಕ್ಕೇ ಶಿವರುದ್ರಪ್ಪನವರು ’ಎದೆತುಂಬಿ ಹಾಡಿದೆನು...’ ಕವಿತೆಯಲ್ಲಿ ನಮಗೋಸ್ಕರ ಬದುಕೋಣ, ನಮಗೋಸ್ಕರ ಬಾಳೋಣ ಅಂತ ತಿಳಿಹೇಳಿದ್ದಾರೆ. ಜೊತೆಗೆ ಅವರು ಸುತ್ತಲಿನವರನ್ನು ಕಡೆಗಣಿಸಿಲ್ಲ - ಅಥವ ಪರಿವೆ ನನಗೆ ಬೇಡ ಅಂದಿಲ್ಲ.

ಇವನು ತುಂಬಾ ಉದ್ಧಟನಾಗಿ ಬರೀತಾಯಿದ್ದಾನೆ ಅನ್ನಿಸುತ್ತಿರಬಹುದು ಎಷ್ಟೋಜನಕ್ಕೆ. ಸುಮ್ಮನೆ ಮನಸ್ಸಿಗೆ ಬಂದಂತೆ ಕೆಲಸಕ್ಕೆ ಬಾರದ್ದು ಗೀಚುತ್ತಿದ್ದಾನೆ ಅಂತ. ನಿಜ! ಹಾಗನಿಸುವುದು ಸಾಮಾನ್ಯ ಯಾಕೆಂದ್ರೆ ’ನೀನೇ ಅಂದ್ರೂ ನನಗೆ ಏನೂ ಆಗಲ್ಲ’ ಅಂದ್ರೆ ಅವನನ್ನು ’ಮನುಷ್ಯ ಮುಟ್ಟಿದ ಗುಬ್ಬಿ’ ರೀತಿ ನೋಡೋದೇ ಬಂದಿದೆ ನಮಗೆ. ನನಗೆ ಹಿಡಿಸದ್ದನ್ನ ಯಾರಾದರೂ ನಮಗೆ ಹೇಳಿದರೆ ಅದನ್ನ ತಳ್ಳಿಹಾಕಬಹುದು ಆದರೆ ಸಂಪೂರ್ಣವಾಗಿ ಎಲ್ಲರೂ ಹೇಳಿದ್ದನ್ನಲ್ಲ.. ಯಾಕಂದ್ರೆ ನಾವೆಲ್ಲ ಸಂಘಜೀವಿಗಳು

ಹೂಂ! ಅಂತೂ ನಾನು ಯಾಕೆ ಬೆರೆಯೋಕೆ ತೀರ್ಮಾನಿಸಿದೆ ಅಂತ ನನಗೆ ಗೊತ್ತಗ್ತಿರೋ ಹಾಗಿದೆ... ನಾನು ನನಗೋಸ್ಕರ ಬರೀತೀನಿ ಅಂದ್ಕೋಂಡಮೇಲೆ ನನಗೋಸ್ಕರ ಬರೀಬೇಕು. ಬೇರೆಯವರು ಅದಕ್ಕೆ ಸ್ಪಂದಿಸುತ್ತಾರೋ ಇಲ್ಲವೊ ಅದರ ಗೋಜಿಗೆ ನಾನು ಹೋಗಬಾರದು. ಆದರೂ, ನನಗೆ, ನನ್ನ ಅನಿಸಿಕೆಗಳಿಗೆ ಸುತ್ತಮುತ್ತಲಿನವರು ಅದಕ್ಕೆ ಪ್ರತಿಕ್ರಯಿಸಿದರೆ ನಾನೇ ಧನ್ಯ!

Tuesday, August 07, 2007

ಬೇಸರ ಸಂಜೆ...

ನಿನ್ನೆ ರಾತ್ರಿ ಬಹಳಹೊತ್ತಿನತಂಕ ಕೆಲಸಮಾಡಿದ್ದಕ್ಕೆ ಬೆಳಗ್ಗೆ ಏಳಲಾಗಲಿಲ್ಲ. ಹಾಗಾಗಿ ಇವತ್ತು ಮನೇಇಂದನೇ ಕೆಲ್ಸ ಮಾಡೊ ನಿಶ್ಚಯಮಾಡ್ದೆ. ಬೆಳಗ್ಗೆ ಇಂದ ಸಂಜೆವರೆಗೆ ಊಟಕ್ಕೆ ಬಿಟ್ಟು ನನ್ನ ಲ್ಯಾಪ್-ಟಾಪ್ ಬಿಟ್ಟು ಎದ್ದೆರಲಿಲ್ಲ (ಕ್ಷಮಿಸಿ, ನಿಸರ್ಗಕ್ಕೆ ವಿರುದ್ಧಹೋಗಕ್ಕೆ ಸಾಧ್ಯವಿಲ್ಲ; ಆ ಕೆಲಸಗಳನ್ನೂ ಅದದರಸಮಯಕ್ಕೆ ಮುಗಿಸಿದೆ :) ). ಸಂಜೆ ಏನಾದರೂ ಅಂಚೆ ಇರಬಹುದೇನೋ ನೋಡೋಣ ಅಂತ ಹೊರಗೆ ಹೋರಟೆ. ಆಹ್! ಎಷ್ಟು ಚೆನ್ನಾದ ತಂಗಾಳಿ ಬರ್ತಿತ್ತು ಅಂದ್ರೆ ನಾನು ಮನೆ ಬಾಗಿಲಲ್ಲೇ ಒಂದೆರಡು ಕ್ಷಣ ಹಾಗೇ ನಿಂತು ಅದನ್ನ ಅನುಭವಿಸಿದೆ. ನನ್ನ ಅಪಾರ್ಟ್ಮೆಂಟಿನ ಬಾಲ್ಕನಿ ಯಿಂದ ನೋಡಿದರೆ ಅರುಣ ಆಕಾಶಕ್ಕೆ ಕೇಸರಿಬಣ್ಣ ಹಚ್ಚಿದ್ದ ಆಗಲೆ. ಆ ತಂಗಾಳಿ ಮತ್ತೆ ಸಂಜೆಯಮುಸುಕಲ್ಲಿ ಮನಸ್ಸು ಏನೇನೋ ಕಲ್ಪನೆಗಳಲ್ಲಿ ತೊಡಗಿತ್ತು. ಜೊತೆಗೆ, ನನ್ನ ಪತ್ನಿ ಇಲ್ಲವಲ್ಲಾ ಈ ಸಂದರ್ಭದಲ್ಲಿ ನನ್ನ ಜೊತೆ ಅನಿಸ್ತು. ಅವಳು ಇಲ್ಲಿ ನನ್ನೊಂದಿಗಿದ್ದಷ್ಟೂ ದಿನ ಸೂರ್ಯ ನಮ್ಮೊಂದಿಗೆ ಸಹಕಾರ ಮಾಡಿರಲಿಲ್ಲ. ಸಂಜೆ ಕೂಡ... ನಾನೀಗ ಸ್ವಲ್ಪದಿನಕ್ಕೆ ಒಂಟಿಯೇ... ತಕ್ಷಣ ನನಗೆ ಜ್ಞಾಪಕಕ್ಕೆ ಬಂದದ್ದು ನಿಸಾರ್ ಅಹಮದ್‍ರ ಈ ಗೀತೆ:

ಮತ್ತದೇ ಬೇಸರ
ಅದೇ ಸಂಜೆ ಅದೇ ಏಕಾಂತ
ನಿನ್ನಜೊತೆ ಇಲ್ಲದೆ
ಮಾತಿಲ್ಲದೆ ಮನ ವಿಭ್ರಾಂತ...

Sunday, August 05, 2007

ಬ್ಲಾಗಿನ ಬ್ಲಾಗು

ನಾನು ಬಹಳ ದಿನಗಳ ನಂತರ ಕನ್ನಡದ ಬ್ಲಾಗುಗಳನ್ನ ಹುಡುಕಿ ಒದ್ತಾಇದ್ದೆ. ತುಂಬಾನೆ ಖುಷಿಯಾಯ್ತು. ನಾನು ಮೊದಲು ಕನ್ನಡದಲ್ಲಿ ಬರೀಬೇಕು ಅಂತ ಅಂದುಕೊಂಡಾಗ ತುಂಬಾ ಬ್ಲಾಗುಗಳಿರಲಿಲ್ಲ. ಈಗ ಬಹಳವಾಗಿವೆ. ಇವಾಗಿನ ಯುವಕರು ಕನ್ನಡದಲ್ಲಿ ಬರೆಯೋಕೆ ಮುಂದೆಬಂದಿರೋದು ಸಂತಸದ ವಿಷಾಯನೇ ಸರಿ. ಎಷ್ಟೊಂದರಲ್ಲಿ ಅವರ ಆಲೋಚನೆ, ಅವರ ಬರೆಯೋ ವೈಖರಿ, ವಕ್ಕಣೆ ಎಲ್ಲಾತುಂಬಾ ಚೆನ್ನಾಗಿದೆ. ಅವರಿಗೆಲ್ಲಾ ನನ್ನ ವಂದನೆಗಳು.

ಅದಿರ್ಲಿ. ಕೆಲವೊಂದು postಗಳನ್ನ ಓದಿದಾಗ ನನಗನ್ನಿಸಿದ್ದು ಇಷ್ಟೇ. ಕೆಲವರು ಪ್ರಚಲಿತ ವಿಷಯ ತಗೊಂಡು ಅದಕ್ಕೆ ವಿರುದ್ಧವಾಗೇ ಬರೆಯೋಕೆ ಹೊರಟಿದ್ದಾರೆ. ಒಬ್ಬ ಬರಿತಾನೆ IT industry ನಮ್ಮ (ಸಾಮಾನ್ಯ ಮನುಷ್ಯರ) ಜೀವನ ಹಾಳುಮಾಡಿದೆ ಅಂತ (ಇದು ತುಂಬಾ ಹಳೇ ವಿಚಾರ ಬಿಡಿ!). ಮತ್ತೊಬ್ಬ ರವಿ ಬೆಳಗೆರೆ ಮುಂಚಿನಥರ ಇಲ್ಲ, ತುಂಬಾಬದಲಾಗಿದ್ದಾರೆ; ಕಡಕ್ಕಾಗಿ ಬರಿತಿಲ್ಲ ಅಂತ. ಹೌದು, ಯಾರೇ ಆಗ್ಲೀ ಏನಾದ್ರೂ ಹೇಳಿದ್ರೆ ಅದಕ್ಕೆ ವಿರುದ್ಧವಾಗಿ ಹೇಳಬೇಕು ಅನ್ನಿಸೋದು ಮಾನವ ಸಹಜ ಕ್ರಿಯೆ. ಆದ್ರೆ ಸ್ವಲ್ಪ ಯೊಚಿಸಿನೋಡಬೇಕು ಅಲ್ವಾ? ಸ್ವಲ್ಪ ನಿಧಾನವಾಗಿ ಅದೇ ವಿಷ್ಯನ ಬಿಚ್ಚು ಮನಸ್ಸಿನಿಂದಯೋಚಿಸಿದ್ರೆ ಬರೆಯುವ ಮುಂಚಿನ ನಮ್ಮ biased views ಬದಲಾಗಬಹುದು. ನಾನು ಹಾಗಂತ ಅವರೆಲ್ಲಾ ಬರೆದಿರೋದು ತಪ್ಪು ಅಂತ ಹೇಳ್ತಿಲ್ಲ. ಪ್ರತಿಯೊಬ್ಬರ ಅನಿಸಿಕೆ, ಪ್ರಭಾವಶಾಲಿ ಪ್ರತಿಕ್ರಿಯೆ ಏನೇನೋ ಮಾಡಲು ಸಾಧ್ಯ.

"ಒಂದ್ಸಲಾ ಈ ಸಾಫ್ಟ್ ವೇರು ಅನ್ನೋದು ಪೂರ್ತಿ ಬಿದ್ದೋಗ್ಬೇಕು ಆವಾಗ ಬುದ್ದಿ ಬರತ್ತೆ ಇವ್ಕೆ"
ಅಂತ ಇದೆ ಅದರಲ್ಲಿ. ತುಂಬಾ ನಗು ಬಂತುರೀ. :) ಬರೆದಿರುವಾತ ಇನ್ನೂ ಚಿಕ್ಕವನು ಅಂತ ಅಂದ್ಕೋತಿನಿ. ಅವನ e-mail idನಲ್ಲಿ 82 ಅಂತ ಇದೆ. ಅದು ಅವನು ಹುಟ್ಟಿದ ವರ್ಷ ಅಂದ್ಕೊಂಡಿದೀನಿ (ಆದ್ದರಿಂದ್ಲೆ ಇಲ್ಲಿ ಧೈರ್ಯವಾಗಿ ಕೆಲವುಕಡೆ ಏಕವಚನ ಪ್ರಯೋಗಿಸಿದ್ದೀನಿ; ಅಲ್ಲವಾದ ಪಕ್ಷದಲ್ಲಿ ಬದಲಾಯಿಸುತ್ತೀನಿ). ಹಾಗಾದ್ರೆ, ನಿಜ. ಆತ ಕೂಡ IT ಕೆಲಸದಲ್ಲೇ ಇದ್ರೂ ಈ ಉದ್ಯಮದ ಏಳು ಬೀಳುಗಳನ್ನ ನೋಡಿಲ್ಲ. ಯಾಕಂದ್ರೆ ಅವನು ಈ industryಗೆ ಸೇರಿದಾಗ 2003 ಆಗಿತ್ತು. ನಾವೆಲ್ಲಾ ಒಂದು ದೊಡ್ಡ ಗಂಡಾಂತರದಿಂದ ಪಾರಾಗಿದ್ವಿ ಅಷ್ಟುಹೊತ್ಗೆ. ಮರೆತು ಬಿಟ್ರಾ ಸ್ವಾಮಿ 1998-2001ರ downtrend ಹೇಗಿತ್ತು ಅಂತ? ಏನೇನೋ ಅಯ್ತು ಬಿಡಿ ಆಗ. ಈಗ ಅದರ ಮಾತೇಕೆ. ನಾನಿಲ್ಲಿ ಹೇಳೋಕೆ ಹೊರಟಿದ್ದು ಇಷ್ಟೆ. IT ಅನ್ನೋದು ಭಾರತದಲ್ಲಿ, ಮತ್ತೂ ಬೆಂಗಳೂರಿನಲ್ಲಿ, ಈಗ ನೋಡ್ತಿರೋದಷ್ಟೇ ಅಲ್ಲ. ಈಗದರ ಉದ್ಧಾರ ನೋಡಿ ಜನ ಏನೇನೊ ಕಲ್ಪಿಸಿಕೊಳ್ತಾರೆ, ನೆಗೆಟಿವ್ ಆಗೇ ಯೊಚನೆ ಮಾಡ್ತಾರೆ. ಅದರಿಂದ ಏನೂ adverse effect ಇಲ್ಲ ಅಂತ ನಾನೂ ಹೇಳೋದಿಲ್ಲ. ಪ್ರತಿಯೊಂದಕ್ಕೂ ಅದರ ಒಳ್ಳೆಯ ಮತ್ತು ಅಷ್ಟೇನೂ ಒಳ್ಳೆಯದಲ್ಲದ ಮುಖಗಳು ಇದ್ದೇ ಇರುತ್ತೆ ಅಂತ. ಎಷ್ಟು ಜನಕ್ಕೆ ಗೊತ್ತು ಭಾರತದಲ್ಲಿ ಈಗ boom ಅಗಿರೋ IT industry ಶುರುವಾಗಿದ್ದು 1968ರಲ್ಲಿ ಅಂತ? ಹ್ಹೂಂ. ತುಂಬಾ ಹಳೇ ಇಂಡಸ್ಟ್ರೀನೆ ಸ್ವಾಮಿ ಇದು. ತುಂಬಾಜನ ಅಂದುಕೊಂದಿರೋ ಹಾಗೆ ಅದು ಕಳೆದ ಐದು-ಹತ್ತು ವರುಷಗಳಿಂದ ಬಂದು ಇದ್ದಕ್ಕಿದ್ದಂತೆ ಗೆದ್ದಿಲ್ಲ ಅದು. ಅದು ತನ್ನದೇ ಆದ ಏಳು-ಬೀಳುಗಳನ್ನ ನೋಡಿದೆ. ಪ್ರಪಂಚದಲ್ಲೆಲ್ಲಾ ಐಟಿ ಬಳಕೆ ಆಗ್ತಿರೋದ್ರಿಂದನೇ ಅದು ಗೆದ್ದಿದ್ದು.

ಮತ್ತೊಂದು ವಿಚಾರ ಅದೇ ಬ್ಲಾಗ್ ನಿಂದ -

"ಅಷ್ಟಕ್ಕೂ ಈ ಸಾಫ್ಟ್ ವೇರು ಅಂದ್ರೆ ಏನಂತ ಅಂದ್ಕಂಡಿದಿರಾ? ಇದೊಂದು ಕೂಲಿ ಕೆಲಸ."
ಸ್ವಾಮಿ ಹೀಗಂದ್ರೆ ನೀವು ಐಟಿನೋರ್ನ ಹೀಯಾಳಿಸಿದಂಗೆ ಅಂತ ಅಂದುಕೊಂಡ್ರ? ತಪ್ಪು. ಯಾಕಂದ್ರೆ IT ನಲ್ಲಿರೋರು ತಮ್ಮ ಕೆಲಸ ಮಾಡ್ತಿದ್ದಾರೆ ಅಷ್ಟೆ. ಕೂಲಿ ಮಾಡೊದು ತಪ್ಪಾ ನಿಮ್ಮ ಅರ್ಥದಲ್ಲಿ? ಅದೂ ಸಹ ಒಂದು ಕಾಯಕ ಸ್ವಾಮಿ. ಪ್ರತಿಯೊಂದು ಕೆಲಸ ಮಾಡೋಕೂ ಜನ ಬೇಕು. ನನಗೆ ನನ್ನಮ್ಮ ನಾನು ಚಿಕ್ಕವನಾಗಿರುವಾಗ ಹೇಳ್ತಿದ್ದ ಮಾತು ನೆನಪಿಗೆ ಬರುತ್ತೆ: ಎಲ್ಲಾರೂ ಪಲ್ಲಕ್ಕಿಯ ಮೇಲೇನೆ ಕೂತ್ಕೊಂಡು ಹೋಗೊಕೆ ಆಸೆ ಪಟ್ರೆ ಅದನ್ನ ಹೊರೋರು ಯಾರು? :) ನೀವೂ ಕಾಯ್ತಿರ್ತಿರ, ಪಲ್ಲಾಕ್ಕಿನೂ ಅಲ್ಲೀ ಇರುತ್ತೆ. ಮುಂದೆ ಹೇಗೆ ಹೋಗೊದು ಮತ್ತೆ? ಯಾವಾಗಲೂ ನಿಧಾನ ವಾಗಿ ಮೇಲೆ ಹೋಗಣ ಅಲ್ವ? ಹಾಗಂತ ಭಾರತೀಯ IT companyಗಳು ಬರೀ ಈ ಕೂಲಿ ಕೆಲಸ ಮಾಡ್ತಿಲ್ಲ ಗುರು. ನಾವುಗಳೂ ನಮ್ಮದೇ ಆದ ಸ್ಥಾನ ಪಡೆದುಕೊಂದಿದ್ದೀವಿ. ನಮ್ಮದೇ innovations ಇವೆ. ಮೊದಲು ಈ outsourcing ಪ್ರಾರಂಭವಾದಾಗ ನಾವು - ಭಾರತೀಯರು - ಅಮೇರಿಕನ್ನರಿಗೆ ಸಿಕ್ಕಿದ್ವಿ. ಹೌದು ನಾವು ಅವರಿಗಿಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡ್ತಿದ್ವಿ - ಈಗಲೂ ಮಾಡ್ತಿದ್ದೀವಿ. ಆದ್ರೆ ಈಗ ಭಾರತಾನ ಮುಂಚಿನಥರಾನೇ ನೋಡ್ತಿಲ್ಲ. ಯಾಕಂದ್ರೆ ನಾವು ಈಗ ಜಾಸ್ತಿ ದುಡ್ಡು ಕೇಳ್ತಿದ್ದೆವಿ. ಅವರೇ ಬರೆದಿರೋಹಾಗೆ ಕಂಪನಿಗಳು ಜಾಸ್ತಿಆದಂಗೆ ಅದನ್ನ ಬದಲಿಸೋ ಜನಾ ಕೂಡ ಜಾಸ್ತಿಯಾಗಿದ್ದಾರೆ. ಆದ್ದರಿಂದ ಒಳ್ಳೆಯ ಜನನ್ನ ಉಳಿಸಿಕೋಬೇಕಂದ್ರೆ ಅವರಿಗೆ ಜಾಸ್ತಿ ಸಂಬಳ ಕೊಡಬೇಕು. ಹಾಗಾಗಿ ಈಗ ತುಂಬಾ ಬೇಕಿದ್ದ ಭಾರತೀಯ ಕಂಪನಿಗಳಿಂದ ಬೇರೆ ಕಡಿಮೆ ಸಂಬಳ ತಗೋ ದೇಶಗಳಿಗೆ ಹೋಗ್ತಿದೆ projectಗಳು. BRIC (Brazil, Russia, India, and China) ಅನ್ನೊ ಪದ ಕೇಳಿದ್ದೀರ? ಅದರಲ್ಲಿ ಎಷ್ಟೊಜನ ನಂ. 1 ಸ್ಥಾನದಲ್ಲಿದ್ದ ಭಾರತನ ಕೆಳಗೆ ಹಾಕ್ತಿದ್ದಾರೆ ಈಗ. ಬೇರೆಯವರಿಗೆ ಭಾರತದ ಜೊತೆ technology & ಆಂಗ್ಲ ಭಾಷೆಯಲ್ಲಿ ಸ್ಪರ್ಧಿಸಿ ಮುಂದೆ ಬರೋಕ್ಕೆ ಸ್ವಲ್ಪ ಸಮಯ ಹಿಡೀಬಹುದು ಆದ್ರೆ ತುಂಬಾ ದೂರ ಇರಲಿಕ್ಕಿಲ್ಲ. ಆಗ ನೋಡಿ ಗೊತ್ತಾಗತ್ತೆ!! ಬರೇ ನಾವು ಕೂಲಿ ಕೆಲ್ಸ ಮಾಡ್ತಿದ್ದೀವಿ ಅಂತ ಹೇಳ್ಕೊಳ್ಳೋದು ಬಿಟ್ಟು ಒಂದು product idea ಹೇಳು ಗುರು. ಆದು ಕೂಲಿ ಕೆಲಸ ಬಿಡಿಸಿ ನಿನ್ನ ಸಿಂಹಾಸನದ ಮೇಲೆ ಕೂರಿಸುತ್ತೆ! ಬೇಜಾರ್ಮಾಡ್ಕೊ ಬೇಡ, ನಿನ್ನ ಕೂಲಿ ಕೆಸದಿಂದ ನಿನ್ನ ಹೇಗೆ ಹೊರಗೆ ತರೋದು ಅಂತ ಸುಲಭಬಾಗಿ ಒಂದು optionಕೊಟ್ಟೆ ಅಷ್ಟೆ.

"ಈ ಸಾಫ್ಟ್ ವೇರ್ ಕಂಪನಿ ಜನರು ಇವರೆಲ್ಲಾ ಒಂಥರಾ ಅರ್ಧ ತುಂಬಿದ ಮಡಕೆಗಳು"

??!! ಅದು ತಪ್ಪು ಅಭಿಪ್ರಾಯ ಕಣಮ್ಮ. ಈಗ ನಿನ್ನನ್ನೇ ತಗೊ. ನೀನು ಎಷ್ಟು ಚಂದ ಬರೆದಿದ್ದೀಯ. ಏನೇನೋ ಯೊಚನೆ ಮಾಡ್ತಿದ್ದೀಯ. :) Generalize ಮಾಡ್ಬೇಡ್ವೋ ತಮ್ಮ. ಅದು ತಪ್ಪು. ಈ ಸಾಫ್ಟ್ ವೇರ್ ನಲ್ಲಿ ತುಂಬಿದ ಕೊಡಗಳೂ ಇವೆ. ಆದ್ರೆ ಆ ತುಂಬಿದ ಕೊಡಗಳು ಪ್ರಾಚಾರಕ್ಕೆ ಬರಲ್ಲ. ’ಎಲೆ ಮರೆ ಕಾಯಿ’ ಥರ ತಮ್ಮ ಪಾಡಿಗೆ ಇರ್ತಾವೆ. ಈನು ಮಾಡೊದು? ನಿನ್ನಂಥವರೇ ಅವರನ್ನ ಬಡಿದೆಬ್ಬಿಸಬೇಕು. ಮಾಡ್ತಿರ ಬಿಡ್ರಪ್ಪ!! :)

"ನಮ್ ಸಮಾಜಕ್ಕೆ ಏನಾದ್ರೂ ಕೈಲಾದಷ್ಟು ಮಾಡ್ಬೋದಾ ನೋಡ್ರಯ್ಯ, ನೀವು ನಮ್ ದೇಶದ ಪ್ರಜೆಗಳು ಅಲ್ವಾ"
ಅಂದ್ರೆ ಎಲ್ಲಾರೂ ನಂದೇ ನಂಗೆ ಅನ್ನಲ್ಲಪ್ಪ. ಸಮಾಜಕ್ಕೆ ಒಬ್ಬರಿಂದ ಏನೂ ಆಗಲ್ಲ. ಅದನ್ನ ಪಾಲಿಸುತ್ತಿರೋ ರಾಜಕಾರಣಿಗಳು ತಮ್ಮ ಕೈಜೋಡಿಸಬೇಕು. ಒಂದು ಉದಾಹರಣೆ ಕೊಡ್ತಿನಿ. ಸರ್ಜಾಪುರದ ರಸ್ತೆ ಗೆ PPP ಪಾಲಸಿ ಹಾಕಿದ್ರು ಕೆಲವ ವರ್ಶಗಳಹಿಂದೆ. ಜ್ಞಾಪಕ ಇದ್ಯ? ಅದಕ್ಕೆ ವಿಪ್ರೊ ತಾನು ಹಣ ಕೊಡೋಕೆ ಮುಂದೆ ಬಂತು (ಅದರ ಸ್ವಾರ್ಥ ಜೊತೆಗೆ ಬೇರೆಯವರಿಗೂ ಸಹಾಯ ಆಗ್ತಿತ್ತು ಅನ್ನೋದೆ ಮುಖ್ಯ ಇಲ್ಲಿ). ಆದ್ರೆ ಅದು ಸರ್ಕಾರನ ಕೇಳಿದ್ದು ಇಷ್ಟೆ. ನಾನು ಕೊಡೊ ಹಣಕ್ಕೆ ಕಾಸು ಕಾಸಿಗೆ ಲೆಕ್ಕಾಬೇಕು ಹೆಂಗೆ ಕರ್ಚಾಯ್ತು ಅಂತ. ಅದಕ್ಕೆ ನಮ್ಮ ಸರ್ಕಾರ ’ನಿಮ್ಮ ದುಡ್ಡೇ ಬೆಡ. ನಮಗೆ ಅವಮಾನ ಮಾಡ್ತಿದ್ದಾರೆ’ ಅಂತು. ಸ್ವಾಮಿ ಸರ್ಕಾರಕ್ಕೆ ಅಷ್ಟು ಭರವಸೆ ಇದ್ದಿದ್ರೆ ಲೆಕ್ಕ ಕೊಡೊಕೆ ತಯಾರಾಗಿರಬೇಕಿತ್ತು ಅಲ್ವ?

ನನಗೂ ಸಹ basic science ತಗೊಳೋ ಹುಡುಗರ ಸಂಖ್ಯೆ ಕಡಿಮೆಯಾಗ್ತಿರೋದು ಸಂಕಟತರುತ್ತೆ. ಆದನ್ನ HN ನಾನು collegeನಲ್ಲಿ ಓದಬೇಕಾದಾಗ್ಲೇ ಹೇಳ್ತಿದ್ರು. ಅದು ಹದಿನೈದು ವರ್ಷಗಳ ಹಿಂದೆನೇ. ಜನಕ್ಕೆ ಎಲ್ಲರಂತೆ ನಾನೂ ಜೀವನ ಸಾಗಿಸಬೇಕು ಅನ್ನೊ ಆಸೆ. ಅದೇ ಕಾರಣದಿಂದ್ಲೆ UGC ತನ್ನ ಸಂಬಳ ಜಾಸ್ತಿ ಮಾಡಿದ್ದು ಉಪನ್ಯಾಸಕರಿಗೆ. ಇದೂ ಅಷ್ಟೆ IT ನಿಂದ ಪರೋಕ್ಷವಾಗಿ ಆಗಿರೊ ಸಹಾಯ. :)

ಹೊರದೇಶಗಳಿಗೆ ಹೋಗಿಬಂದು ಬೇರೇಥರನೇ ವರ್ತಿಸೊ ಭಾರತೀಯರಬಗ್ಗೆ ನಮಗೂ ಬೇಜಾರಿದೆ. ಅದಕ್ಕೆ ನನ ಬೇರೋಂದು ಬ್ಲಾಗಿನಲ್ಲಿ ಹೇಳಿದ್ದೀನಿ.

ಇನ್ನು ರವಿ ಬಗೆಗಿನ ಮಾತು. ನಾನೇನು ಅವರ ತುಂಬಾ ಬರಹಗಳನ್ನು ಓದಿಲ್ಲ. ಹಾಗಾಗಿ ಅವರ ಇತ್ತೀಚಿನ ಬರವಣಿಗೆಯ ಬಗ್ಗೆ ಸ್ವಾಮಿ ಅವರೂ ಕೂಡ ನಮ್ಮ-ನಿಮ್ಮಂತೆ ಸಾಧಾರಣ ಮನುಷ್ಯರು. ಆವರಿಗೂ ಬದಲಾವಣೆ ಇರುತ್ತೆ ಅಲ್ವ? ಸಮಯ ಸಂದರ್ಭ ಎಲ್ಲರನ್ನೂ ಸ್ವಲ್ಪ ಬದಲಾಗಿಸಬಹುದು. ಯಾಕಂದ್ರೆ ಅವರೇನೂ ಅತಿಮಾನವರಲ್ಲ. ಅಲ್ವೆ? ಸ್ವಲ್ಪ ಸಮಯ ಕೊಡಿ ಅವರ ಇತ್ತೀಚಿನ ಬರಹಗಳು ಜೊಳ್ಳು ಅನ್ನಿಸಿದರೆ. ಯಾಕೆಂದ್ರೆ ರವಿಯವರೇ ಹೇಳೋ ಹಾಗೆ ಅವರೂ ಸಹ ತಮ್ಮ ಬರವಣಿಗೆಯನ್ನು ಓದಿ ಅವಲೋಕಿಸುತ್ತಿರುತ್ತಾರೆ. ಅವರಿಗೇ ಹಾಗನಿಸಿದರೆ ಅವರು ಮತ್ತೆ ’ಅವರದೇ ಶೈಲಿ’ಗೆ ಬರುತ್ತಾರೆ. ಕಾಯಬೇಕು ಅಲ್ವ? ಯಾಕಂದ್ರೆ ಏನೇ ಆಗಲಿ ಅದಕ್ಕೆ ತನ್ನದೇ ಸಮಯ-ಕಾಲ ಆಂತಿರತ್ತೆ. ಅದು ಬರಲೇಬೇಕು.

ಹಿತೋಪದೇಷಗಳನ್ನ ಬೇಡಾನ್ಬೇಡಪ್ಪ. ಅದು ಎಲ್ಲಾರಿಗೂ ಬೇಕು. ಎಷ್ಟುಜನಕ್ಕೆ ಅದು ಸಹಾಯ ಮಡುತ್ತೊ ಗೊತ್ತಿಲ್ಲ. ಜೊತೆಗೆ, ಅದು ಅವರಿಗೆ ಓದುಗರಿದ್ದಾರೆ ಅಂತ ಗೊತ್ತಿರೋದ್ರಿಂದ್ಲೇ ಅದು ಬರ್ತಿರೋದು. ಇಲ್ಲದಿದ್ರೆ ಅವರು ಜನ ಓದದೇ ಇರೋದು ಬರೆದು ಲಾಸುಮಾಡ್ಕೊಳ್ಳೋಲ್ಲ. ಅಲ್ವ?

ಹುಂ?? :)

Saturday, August 04, 2007

ಮುಳುಗುವವನ ಕೂಗು...

ಮುಳುಗುವವನ ಕೂಗು
ಚಾಚುವಂತೆ ಮಾಡಿದೆ ಕೈಯ್ಯ
ಜಾರಿಬಿಡುವುದೇ ಈ ಹೃದಯ
ಏನೊ ತಳಮಳ |


ಇದು ಮುಂಗಾರು ಮಳೆ ಚಿತ್ರದ ’ಇವನು ಇನಿಯನಲ್ಲ’ ಅನ್ನೊ ಹಾಡಿನದ್ದು.’ಅಯ್ಯೊ! ಮತ್ತೆ ಇಲ್ಲೂ ಮುಂಗಾರು ಮಳೆ ಬಂತಾ’ ಅಂದ್ಕೊಬೇಡಿ. ನಾನು ಇಲ್ಲಿ ಮುಂಗಾರು ಮಳೆ ಬಗ್ಗೆ ಬರೀತಿಲ್ಲ. ಅದನ್ನ ತುಂಬಾಜನ ಬರೆದಿದ್ದಾರೆ ಮತ್ತು ಅದಕ್ಕೆ ಸಿಗಬೇಕಿದ್ದ ಪ್ರಚಾರ ಸಿಕ್ಕಿದೆ ಅಂದ್ಕೊತಿನಿ! ನಾನು ಹೇಳ್ತಿರೋದು ಮೊದಲ ಮೂರು ಸಾಲುಗಳನ್ನ ಮಾತ್ರ.

ಈ ಹಾಡನ್ನ ತುಂಬಾಸಲನೇ ಕೇಳಿದ್ದೆ - ನಂಗೆ ಸ್ವಲ್ಪ ವಿಷಾದ ಪ್ರಧಾನ ಗೀತೆಗಳು ಇಷ್ಟ, ಹಾಗಾಗಿ. ಆದ್ರೆ ಸ್ವಲ್ಪ ದಿನಗಳ ಹಿಂದಷ್ಟೇ ಈ ಸಾಲುಗಳು ನನ್ನ ಹಿಡಿದು ನಿಲ್ಲಿಸಿದ್ವು. ಸಂದರ್ಭ ಅಷ್ಟೆ!

ನನ್ನ ಸ್ನೇಹಿತ ಮಹೇಶನ ಜೊತೆ ಸ್ವಲ್ಪ ದಿನಗಳ ಹಿಂದೆ ನಡೆದ ಘಟನೆ ಜ್ಞಾಪಕ್ಕೆ ಬಂತು. ಅವನು officeನಿಂದ ಒಂದುದಿನದ ಪ್ರವಾಸಕ್ಕೆ ಹೋಗಿದ್ದ. ಆಲ್ಲಿ ತನ್ನ ಸಹೋದ್ಯೊಗಿಯೊಬ್ಬಳನ್ನ ಭೇಟಿಯಾದ. ಆಕೆ ಇವನ ಜೊತೆ ತುಂಬಾ ಸಲೀಸಾಗಿ ಮಾತಡಿದ್ಲಂತೆ. ತುಂಬಾನೇ ಚೆನ್ನಾಗಿ ಇಬ್ಬರೂ ಅವತ್ತು ಮಾತಾಡಿದ್ದಾರೆ. ಪರಸ್ಪರ ಪರಿಚಯ ಎಲ್ಲಾ ಅಯ್ತು. ಆಮೇಲೆ ಮಹೇಶನ ಮನಸ್ಸು ಒಂದೇ ದಿನದ ಈ ಹುಡುಗಿಯ ಬಗ್ಗೆ ಯೋಚನೆಮಾಡೊಕ್ಕೆ ಪ್ರಾರಂಭಿಸಿತ್ತು. ಅದು ಎಲ್ಲಿಂದ ಎಲ್ಲಿಗೊ ತಗೊಂದು ಹೊಯ್ತು. ಆವನ ಮನಸ್ಸಿನ ’ಕಲ್ಪನೆಯ ಕನ್ಯೆ’ಯ ಜೊತೆ ಈಕೆಯನ್ನು ಹೋಲಿಸಲು ಶುರುಮಾಡಿದ. ಹಲವಾರು ರಾತ್ರಿಗಳು ಅವಳದ್ದೇ ಯೊಚನೆಯಲ್ಲಿ ಕಳೆದ. ಅವರು ದಿನೇ ದಿನೇ ಹೆಚ್ಚು ಹೆಚ್ಚು ಮಾತಾಡೊಕ್ಕೆ ಮುಂದಾದ್ರು. ಅವರ ಭಾವನೆ ಇವನಿಗೆ - ಇವನ ಭಾವನೆ ಅವರಿಗೆ ವಿನಿಮಯ ಅಯ್ತು. ಅದು ಅವರಿಗೆ ಇಬ್ಬರ ಬಗ್ಗೆ ತಿಳ್ಕೊಳಕ್ಕೆ ಸಹಾಯ ಆಯ್ತು. ನನಗೆ ಇದೆಲ್ಲಾ ಒಂದು ದಿನ ಮಹೇಶ ಉರುಹಿದ - ಅಷ್ಟೊತ್ಗೆ ಅವನ ಮನಸ್ಸು ಅವನ್ನ ಎಲ್ಲೆಲ್ಲೋ ಕರೆದುಕೊಂಡು ಹೋಗಿತ್ತು. ಅವನು ಅವಳಿಗೆ ತನ್ನ ಮನಸ್ಸನ್ನು ಆಗ್ಲೆ ಅರ್ಪಿಸಿದ್ದ. ’ಲವ್ ಅಂತ ಏನು time waste ಮಾಡ್ತಾರೆ ಈಜನ; ಅವರಿಗೆ ಬೇರೆ ಕೆಲಸನೇ ಇಲ್ವ?’ ಅಂತ ಬೇರೆಯವರಿಗೆ ಬಯ್ತಾಇದ್ದೋನು ಈಗ ಅದೇ ಗೊಂದಲದಲ್ಲಿ ಸಿಕ್ಕಿದ್ದ! ಈಗೊಂದಲದಲ್ಲಿ ನರಳಾಡುತ್ತಿದ್ದಾಗ ಅವನಿಗೆ ಜ್ಞ್ನಾಪಕಕ್ಕೆ ಬಂದದ್ದು ನಾನು.

ಒಂದಿನ ಚಾಯ್ ಕುಡೀತಾ ಅವನ ಭಾವನೆಗಳನ್ನೆಲ್ಲಾ ನಿಧಾನವಾಗಿ ಬಿಚ್ಚಲು ಆರಂಭಿಸಿದ. ಅದು ಸುರುಳಿ-ಸುರುಳಿಯಾಗಿ ಹೊರಬಂತು. ’ನನಗೆ ನನ್ನ ಬಗ್ಗೆನೇ ಅರ್ಥವಾಗ್ತಿಲ್ಲ ಕಣೋ. ನಾನ್ಯಾಕೆ ಹಿಂಗಾದೆ ಅಂತ. ತಪ್ಪು ಮಾಡ್ತಿದ್ದೀನಾ ಅನ್ನಿಸ್ತಿದೆ...’ ಅವನ ಮನಸ್ಸಿನಲ್ಲಿದ್ದ ತುಮುಲ, ಉನ್ಮಾದ, ಪ್ರಶ್ಣೆಗಳು, ಎಲ್ಲಾ ಆಚೆ ಬಿದ್ವು. ಹುಂ.. ಏನಪ್ಪ ಮಾಡೋದು ಈಗ?!! ಸರಿ ನನಗೆ ಗೊತ್ತಿದ್ದಷ್ಟು ಹೇಳಿದೆ. ’ನೀನು ಅವಳನ್ನು ಇಷ್ಟಪಟ್ರೆ ತಪ್ಪೇನಿಲ್ಲ ಕಣೊ. ಹಾಗೆ ಅಂದ್ಕೋಬೇಡ. ಆದ್ರೆ, ಇದನ್ನ ಮುಂದುವರಿಸಬೇಕು ಅಂದ್ರೆ ಅವಳ ಮನಸ್ಸಿನಲ್ಲಿ ಏನಿದೆ ಅಂತ ಮೊದಲು ಹುಡುಕು’ ಅಂದೆ. ಆ ಹುಡುಗಿಯ ಮಾತುಗಳನ್ನ ಅವನಿಂದನೇ ಕೇಳಿದಾಗ, ನನಗೆ ಆಕೆಯ ಮನಸ್ಸಿನಲ್ಲಿ ಅಂಥಹ ಯಾವುದೇ ವಿಚಾರ ಇರೋ ಕುರುಹುಗಳು ನನಗೆ ಕಾಣಿಸಲಿಲ್ಲ. ಆದ್ರೆ ಅವನಿಗೆ ಒಂದೇಸಲ ’ಬೇಡ’ ಅಂತ ಹೆಳಕ್ಕಾಗ್ಲಿಲ್ಲ ನಂಗೆ. ಅದಕ್ಕೆ ಅವಳ ಮನಸ್ಸಿನಲ್ಲಿ ಏನಿದೆ ಅಂತ ಹುಡುಕೋಕ್ಕೆ ದಾರಿ ಹೆಳ್ದೆ. ಜೊತೆಗೆ ಅವಳ ಅಭಿಪ್ರಾಯ ಅವನ ಆಸೆಯ ವಿರುಧ್ದವಾಗಿದ್ರೆ ಅವನು ಹೇಗೆ ಅದರಿಂದ ಹೊರಗೆ ಬರಬೇಕು ಅಂತ ಅವನನ್ನ ತಯಾರಿ ಮಾಡೊಕೆ ಶುರುಮಾಡಿದೆ - ಯಾಕಂದ್ರೆ ಇದೇಥರ missನ missಮಾಡಿಕೊಂಡು ತಲೆ ಕೆಡಿಸಿಕೊಂಡು ಅವರ ಯಥಾಸ್ಥಿತಿಗೆ ಬರೋಕ್ಕೆ ತುಂಬಾ ಸಮಯ ತಗೊಂಡಿದ್ದಾರೆ ಅನ್ನೋದು ನಂಗೆ ಗೊತ್ತು. ಆಕೆ ಇವನು ಮೊದಮೊದಲು ಸ್ವಲ್ಪ ಹೆಚ್ಚಿನ ಆತ್ಮೀಯವಾಗಿ, ವಲವಿನಿಂದ ಅವಳ ಜೊತೆ ಮಾತಾಡಿದ್ದು ನೋಡಿ ’ನನಗೆ ನಿಮ್ಮ ಮಾತಿನ ಶೈಲಿ ಭಯ ತರುತ್ತೆ - ನೀವೆಲ್ಲಿ ನಂಗೆ ಸಧ್ಯದಲ್ಲೇ propose ಮಾಡ್ತಿರೋ ಅಂತ’ ಅಂದಿದ್ಲಂತೆ ಚಾಣಾಕ್ಷೆ! ಎಷ್ಟು ಬೇಗ ಇವನ ಮನಸ್ಸನ್ನ ಓದಿದಳಾಕೆ! ಹುಡ್ಗಿಯರಿಗೆ ಅದು ಬೇಗ ಗೊತ್ತಾಗತ್ತ ಅಂತ?! ಅದಕ್ಕೆ ಇವ, ’ಛೆ!ಛೆ! ಹಾಗೇನಿಲ್ಲ. ನೀವೂ ಕೂಡ ಮನಸು ಮಿಚ್ಚಿ ಮಾದಾಡ್ತಿದ್ದೀರ ಅದಕ್ಕೇ ನಾನೂ ಹಾಗೇ ಮಾತಾಡ್ತಿದ್ದೆನಿ ಅಷ್ಟೆ. ಮತ್ತೇನೂ ಇಲ್ಲ. ಹಾಗೆಲ್ಲ ಅಂದುಕೋಬೇಡಿ’ ಅಂತ ಹೇಳಿ ಜಾರಿಕೊಂಡ ಪುಣ್ಯಾತ್ಮ. ಆದ್ರೆ ಅವನ ಮನಸ್ಸಿನಲ್ಲಿ ಸುಳ್ಳುಹೇಳಿದ್ದಕ್ಕೆ ಅಳುಕಿತ್ತು. ಇವರಿಬ್ಬರ ಮಾತುಕತೆ, ಇವನು ಅವನ ಬಗ್ಗೆ ಅವಳ ಮನಸ್ಸಿನಲ್ಲೇನಿದೆ ಅಂತ ತಿಳ್ಕೊಳಕ್ಕೆ ಸುಮಾರು ಪ್ರಶ್ಣೆಗಳು, ಸಂಧರ್ಭ ಗಳನ್ನ ಸೃಷ್ಟಿಮಾಡಿ ಮಾತಾಡೋದು, ಹೀಗೆ.. ಸುಮಾರು ದಿನ ನಡೆಸಿ, ಕೊನೆಗೆ ಒಂದು ದಿನ ಅವಳನ್ನ ಕೇಳೇ ಬಿಟ್ಟ ಸ್ವಾಮಿ ’ನನ್ನ ಮದುವೆಯಾಗ್ತಿಯ?’ ಅಂತ. ಅವಳು ಪಾಪ, ಅವಳ ಭಯ ನಿಜ ಆಗಿದ್ದಾಕ್ಕೆ ಬೇಜಾರು ಪಟ್ಕೊಂಡ್ಳು. ಆದ್ರೆ ಏನು ಮಾಡೋದು ಈಗ, ಇವನಾಗ್ಲೆ ಅವಳಿಗೆ ಸ್ವಲ್ಪ ಹತ್ತಿರವಾಗಿದ್ದ. ಇವನನ್ನ ಒಪ್ಪಿಕೊಳ್ಳೋಕೆ ಅವಳ ಮನಸ್ಸಿನಲ್ಲಿ ಅಂಥಾ ಭಾವನೆಗಳೆ ಇರಲಿಲ್ಲ. ಅನಾಮಾತ್ತಾಗಿ ಅವನನ್ನ ದೂರ ತಳ್ಳೋಕೂ ಮನಸ್ಸಿಲ್ಲ. ಅವಳು ಈಗ ಸಂಪೂರ್ಣ ಗೊಂದಲದಲ್ಲಿದ್ಲು. ಅಲ್ಲಿಂದ ಆಕೆ ಇವನನ್ನ ಅವನ ಭಾವನೆಗಳಿಂದ ಹೊರಕ್ಕೆ ತರೋ ಪ್ರಯತ್ನ ಮಾಡಿದ್ಲು. ಇದೇ ಸಲುವಾಗಿ ಅವಳು ಇವರು ಮಾತಾಡೊಕ್ಕೆ ಹೋದಾಗ್ಲೆಲ್ಲಾ ಅವಳಮನಸ್ಸಿನಲ್ಲಿ ಇವರಬಗ್ಗೆ ಬೇರೆರೀತಿಯ ಭಾವನೆಗಳೇನೂ ಇಲ್ಲ, ಕೇವಲ ಸ್ನೇಹ ಅಷ್ಟೆ ಅಂತ ತಿಳಿಸಲು ಬಲು ವಿಧವಾಗಿ ತಿಳಿಹೇಳಿದಳು. ಮಾತು ಮತ್ತೂ ಜಾಸ್ತಿಯಾಯ್ತು, ಮಾತಾಡ್ತಿದ್ದ ಸಮಯಬದಲಾಯ್ತು, ಮಾತಿನ ಕಾಲಾವಧಿ ಹೆಚ್ಚಾಯ್ತು.

ಇದೇ ಮಧ್ಯ ಇದೆಲ್ಲವೂ ನನಗೆ ಮಹೇಶ ದಿನಾ ಒಪ್ಪಿಸುತ್ತಿದ್ದ. ನಾನು ಆಕೆಯ ಅಭಿಪ್ರಾಯ ಇತ್ತಿಹಿಡಿದು ಇವನಿಗೆ ಅವಳಿಷ್ಟಕ್ಕೆ ಬಿಡು, ಅದರಿಂದ ಹೊರಗೆ ಬಾ ಅಂತ ಎಷ್ಟು ಕರೆದರೂ ಹೊರಬರೋಕ್ಕಾಗದಷ್ಟು ಒಳಗೆ ಹೋಗಿದ್ದ ಮಹೇಶ. ಹುಂ.. ಏನು ಮಾಡೊಕೆ ಸಾಧ್ಯ. ಅವನು ಏನೇಆದ್ರೂ ನನ್ನ ಗೆಳ್ಯ ತಾನೆ.. ಅವನ ಜೊತೆಗಿರಲೇಬೇಕು. ಮಧ್ಯ ಎಷ್ಟು ಸಾಧ್ಯನೋ ಅಷ್ಟೆಲ್ಲಾ ಪ್ರಯತ್ನ ನಡಿತನೇ ಇತ್ತು.’ಅಪ್ಪ-ಅಮ್ಮ ನ್ನ ಬಿಟ್ಟು ನನಗೆ ಇರೋಕ್ಕಾಗಲ್ಲ. ನಮಗಾಗಿ ಅವರು ಅಷ್ಟೆಲ್ಲಾ ಮಾಡಿರೋ ಅವರಿಗೆ ಅವರಿಷ್ಟದಂತಿರೋ ಮಕ್ಕಳು ಬೇಕು ಅಲ್ವ? ನಾನು ಮದುವೆಯಾಗೋ ಹುಡ್ಗಿನ ನಮ್ಮಮ್ಮನೇ ಹುಡುಕೋದು ಕಣೊ. ಆಮೇಲೆ ಅವರ ಲಿಸ್ಟ್ ನಲ್ಲಿ ನನಗೆ ಆಗೋರ್ನ ನಾನು ಚೂಸ್ ಮಾಡ್ತಿನಿ’ ಅಂತಿದ್ದ ಮಹೇಶ ಈಗ ’ನಾನು ಅಪ್ಪ-ಅಮ್ಮನ್ನ ಒಪ್ಪಿಸುತ್ತೀನಿ. ನಂಗೆ ಗೊತ್ತು ಅವರಿಗೆ ಹೇಗೆ ಒಪ್ಪಿಸಬೇಕು’ ಅನ್ನೋ ಮಟ್ಟಕ್ಕೆ ಬಂದಿದ್ದ. ನಾನು ಇದು ತಪ್ಪು ಅಥವಾ ಅವನ ಈ ಬದಲಾವಣೆಯ ಬಗ್ಗೆ ಟೀಕೆ ಮಾಡ್ತಿಲ್ಲ. ಅದಕ್ಕೆ ನಾನು ಸಲ್ಲ ಕೂಡ. ಅವನ ಈ ಬದಲಾವಣೆಗೆ ಅವನು ಆ ಹುಡ್ಗಿಯಮೇಲಿಟ್ಟಿದ್ದ ಪ್ರೀತಿಯೇ ಕಾರಣ. ಅಂದ್ರೆ ತುಂಬಾ ಆಳವಾಗೇ ಪ್ರೀತಿಸುತ್ತಿದ್ದ. ಈ ಪ್ರೀತಿನೇ ಹಾಗಲ್ವ ಸ್ವಾಮಿ? :)

ಬರಬರುತ್ತಾ ನನಗೆ ಅವನಿಂದ ಆಕೆ ಬದಲಾಗ್ತಿರೋ ರೀತಿಯ ಮಾತು ಕೇಳಿಸ್ತಾಬಂತು. ನಾನು ಸ್ವಲ್ಪ ಅವಕ್ಕಾದೆ! ಅರರೆ, ಏನಿದು ಹುಡುಗಿ ತನ್ನ ಸಂಯಮ ಕಳೆದುಕೊಂಡ್ಳ ಇಷ್ಟುಬೇಗ ಅನ್ನಿಸ್ತು. ಇದರಬಗ್ಗೆ ಯೋಚಿಸ್ತಾ ಇದ್ದೆ. ಅದೇಸಮಯಕ್ಕೆ ಮೇಲೆಹೇಳಿದ ಹಾಡಿನ ಸಾಲುಗಳು ನನ್ನ ಹಾಗೇ ಹಿಡಿದಿಟ್ಟವು. ಈಗ ಈ ಸಾಲುಗಳಿಗೆ ನನ್ನ ಗೆಳೆಯ ಮಹೇಶನೇ ನಿದರ್ಶನವಾಗಿದ್ದ. ಅವನ ಗೆಳತಿ ಅವನನ್ನ ಅವನ ಗೊಂದಲಗಳಿಂದ ಹೊರಕ್ಕೆ ತರೋಕ್ಕೆ ಹೋಗಿ ಅವಳೇ ಬಿದ್ಲ ಅಂತ ಅನ್ನಿಸ್ತಿತ್ತು. ಹೌದು, ಅವಳು ಈಗ ಜಾರಿ ಬಿದ್ದಿದ್ಲು! ಆದ್ರೆ ಮೊದಲಿಂದ ಅವಳು ಅದಕ್ಕೆ ಅವಳ ಮನಸ್ಸನ್ನು ಸುಲಭವಾಗಿ ಬಿಟ್ಟಿರಲಿಲ್ಲವಾದ್ದರಿಂದ ಸ್ವಲ್ಪ ಕಷ್ಟ ಪಡುತ್ತಿದ್ಲು. ಒಮ್ಮೆ ಒಪ್ಪಿಕೊಂಡ್ರೆ ಮತ್ತೊಮ್ಮೆ ಬೇಡ ಅಂತಿದ್ಲು, ಮಗದೊಮ್ಮೆ ನನಗೆ ಗೊತ್ತಾಗ್ತಿಲ್ಲ ನಾನೇನ್ಮಾಡ್ತಿದ್ದೀನಿ ಅಂತಿದ್ಲು. ತಲೆಕೆಟ್ಟು ಹಲವಾರು ಸಾರಿ ತನ್ನ ಅಶ್ರುತರ್ಪಣ ಮಾಡಿದ್ಲು.

ಇಷ್ಟೆಲ್ಲಾ ಆಗಿದ್ದು ಕೇವಲ ಮುವ್ವತ್ತು ದಿನಗಳಲ್ಲಿ! ನಾನು ಹಾಗೇ ಯೊಚಿಸಿದೆ,ಅಷ್ಟು ಗಿದ್ದ ಹುಡುಗಿ ಯಾಕೆ ಮರುಳಾದ್ಲು ಮತ್ಯಾಕೆ ಗೊಂದಲಕ್ಕೆ ಬಲಿಯಾದ್ಲು ಅಂತ. ಅವಳು ಕೆಲಸದ ನಿಮಿತ್ತ ನಾವಿದ್ದ ಊರಿಗೆ ಬಂದಿದ್ಲು ತನ್ನ ಮನೆಯವರನ್ನೆಲ್ಲಾ ಬಿಟ್ಟು. ಈಲ್ಲಿ ಅವಳಿಗೆ ಹತ್ತಿರವಾಗಿ ಯಾರೂ ಇರಲಿಲ್ಲ. ಅವಳ ಮನಸ್ಸಿನಲ್ಲಿದ್ದದ್ದನ್ನು ಹಂಚಿಕೊಳ್ಳಲು ಯಾರೂ ಇರಲಿಲ್ಲ. ಮಹೇಶ ಅವಳ ಆ ಕೊರತೆಯನ್ನ ನೀಗಿಸಿದ್ದ. ಅವನ ಆ ಗುಣ ಅವಳನ್ನು ಅವನ ಹತ್ತಿರವಾಲು ಪ್ರೇರೇಪಿಸಿತ್ತು.

ಈಗ ಇಬ್ಬರೂ ಗೊಂದಲದಲ್ಲಿ ಮುಳುಗಿಹೋಗಿದ್ದಾರೆ. ಅವರಿಗೆ ಮುಂದೇನು ಅಂತ ಗೊತ್ತಗ್ತಿಲ್ಲ. ಇಬ್ಬರೂ ಬೇಕು-ಬೇಡಗಳ ನಡುವೆ ಸಂಘರ್ಷ ನಡೆಸುತ್ತಿದ್ದಾರೆ. ಯಾಕೆ ಯೋಚನೆ? ಮೇಲಿರೋ ಸೂತ್ರಧಾರ ಎಲ್ಲರಿಗೂ ದಾರಿ ತೋರಿಸ್ತಾನೆ ಅಲ್ವ? ಹೌದು. ಆವನೇ ಒಂದು ದಾರಿ ತೋರಿಸ್ದ. ಆಕೆಗೆ ಅವಳ ಅಪ್ಪ-ಅಮ್ಮ ಇದ್ದ ಊರಿನಲ್ಲೇ ಕೆಲಸ ಸಿಕ್ತು. ಬೇರೆ ದಾರಿಯೇ ಇಲ್ಲ. ಅವಳು ಹೊರಟಳು. ಹೋದ ಸ್ವಲ್ಪ ದಿನದಲ್ಲೇ ಇವರಿಬ್ಬರ ಮಧ್ಯದ ದೂರ ಇವರಿಗೆ ಒಂದು ನಿರ್ಧಾರ ಮಾಡೊಕ್ಕೆ ಸಹಾಯ ಮಾಡ್ತು. ಇಬ್ಬರೂ ಯಾವುದೇ ನಿರ್ಧಾರ ಒಟ್ಟಿಗಿದ್ದಾಗ ತಗೊಂಡಿಲ್ದೇಇದ್ದೆದ್ರಿಂದ ಭೌತಿಕವಾಗಿದ್ದ ದೂರ ಮನಸ್ಸುಗಾಳಿಗೂ ಆಯ್ತು. ಇಬ್ರೂ ನಿಜವನ್ನು ಬೇಗ ಅರ್ಥಮಾಡಿಕೊಂಡ್ರು! ಈಗಲೂ ಒಳ್ಳೇ ಸ್ನೆಹಿತರಾಗಿದ್ದಾರೆ. ತಮ್ಮ ಮುಂದಿರೋ ಜೀವನವನ್ನ ಎದುರಿಸಲು ಮತ್ತೆ ತಮ್ಮ ತಮ್ಮ ದಾರಿಗಳಿಗೆ ವಾಪಸ್ ಆಗಿದ್ದಾರೆ!

ಮಹೇಶ ಅವಳನ್ನ ಬಿಡಲ್ಲ ಆಂತಿದ್ದ. ಬಿಟ್ಟಿರಕ್ಕೆ ಆಗಲ್ಲ ಅಂತಿದ್ದ. ಈಗ ಹೊರಗೆ ಬಾಂದಿದ್ದಾನೆ. ಕಾಲಕ್ಕೆ ಏನನ್ನಾದರೂ ವಾಸಿಮಾಡೊ ತಾಕತ್ತಿದೆ ಅಲ್ಲವೆ?

Thursday, August 02, 2007

ಆಸೆ... ನೂರು ಆಸೆ...

ಎಷ್ಟು ಆಸೆ ಒಳ್ಳೆಯದು?
ಅದಕ್ಕೂ ಮೊದಲು ಯೋಚಿಸಬೇಕಾದದ್ದು - ಆಸೆ ಪಡುವುದು ಒಳ್ಳೆಯದೆ?

ನನ್ನನ್ನ ಕೇಳಿದರೆ, ಆಸೆ ಪಡಬೇಕು ಸ್ವಾಮಿ. ಆಸೆ ಇಲ್ಲದಿದ್ರೆ ಜೀವನದಲ್ಲಿ ಏನಿದೆ? ಇವನೇನು ದೊಡ್ಡಮನುಷ್ಯ ಆಸೆ ಬಗ್ಗೆ ಮಾತಾಡ್ತಿದ್ದನೆ ಅನ್ನಬೇಡಿ. ನಾನೇನು ದೊಡ್ಡವನಲ್ಲ. ಆದ್ರೆ ಆಸೆ ಅನ್ನೋದು ಎಲ್ಲರಿಗೂ ಹತ್ತಿರದ ವಿಷಯ. ಹಾಗಾಗಿ ನನ್ನ ಅನಿಸಿಕೆ ಹೇಳ್ತಿದ್ದೀನಿ ಅಷ್ಟೆ. ಯಾರಿಗೆ ಆಸೆ ಇಲ್ಲ ಹೇಳಿ? ಪ್ರತಿಯೊಬ್ಬರಿಗೂ ಇದೆ. ಎಲ್ಲಾರೂ ಒಂದಲ್ಲ ಒಂದು ರೀತಿಯಲ್ಲಿ ಆಸೆಗೊಳಗಾಗಿಯೇ ಇರುತ್ತಾರೆ. ನೀವು ಬುದ್ಧ ಅಂತ ಪ್ರಶ್ನಿಸಬಹುದು. ಅವನಿಗೂ ಒಂದು ಆಸೆ ಇತ್ತು - ಪ್ರಪಂಚದವರೆಲ್ಲರಿಗೂ ’ಆಸೆ ಅಂದ್ರೇನು, ಅದರ ಬಗ್ಗೆ ತಿಳಿಸಿಕೊಡಬೇಕು’ ಅಂತ. ’ಆಸೆಯೇ ದುಃಖಕ್ಕೆ ಮೂಲ’ ಅನ್ನುವ ಅವನ ಬೋಧನೆ ಎಲ್ಲರಿಗೂ ಅರ್ಥವಾಗಬೇಕು ಅಂತ :). ಬುದ್ಧ ಹೇಳಿದ ಆಸೆಗೂ ನಾವೆಲ್ಲಾ ಸಾಮಾನ್ಯವಾಗಿ ಇಟ್ಟುಕೊಂದಿರೋ ಆಸೆಗೂ ವ್ಯತ್ಯಾಸವಿರಬಹುದು. ಆದು ಬಿಡಿ.

ಆಸೆ ಇದ್ರೇನೆ ಜೀವನದಲ್ಲಿ ನಾವೆಲ್ಲಾ ಏನಾದ್ರೂ ಸಾಧಿಸಕ್ಕೆ ಸಾಧ್ಯ ಅನ್ನೋದು ನನ್ನ ಅನಿಸಿಕೆ. ಜೀವನದಲ್ಲಿ ಒಂದು ’ಗುರಿ’ ಇಟ್ಟುಕೊಬೇಕು ಅಂತ ನಮ್ಮ ದೊಡ್ಡವರು ಹೇಳಿದ್ದು ಅದನ್ನೇ. ಅಲ್ಲಿ ಗುರಿಯೆ ನಮ್ಮ ಆಸೆ. ಅದನ್ನ ನಾವು ಏನಾದ್ರು ಮಾಡಿ ಸಾಧಿಸಬೇಕು. ಸಾಮಾನ್ಯವಾಗಿ ನಾವೆಲ್ಲ ಪ್ರಸಕ್ತ ಆಸಕ್ತಿಯೇನಿದೆಯೊ ಅದರಸಂಬಂಧವಷ್ಟೇ ಗುರಿ ಇಟ್ಟಿರುತ್ತೇವೆ. Schoolನಲ್ಲಿ ಓದೋರಿಗೆ ಒಳ್ಳೆ collegeನಲ್ಲಿ ಓದೋ ಗುರಿ, collegeನಲ್ಲಿರೋರ್ಗೆ ಒಳ್ಳೆಕಡೆ ಕೆಲಸ ಮಾಡೊ ಗುರಿ, ಆಮೇಲೆ ಅದರಲ್ಲಿ ಮುಂದೆ-ಮುಂದೆ ಹೋಗಿ ಹೆಚ್ಚು-ಹೆಚ್ಚು ಹಣ ಸಂಪಾದಿಸೊ ಗುರಿ.. ಹೀಗೆ ಹಲವಾರು ಇರುತ್ತೆ. ಅದೇ ಗುರಿ/ಆಸೆ ನಮ್ಮ ಶಕ್ತಿಗೆ ಮೀರಿ ಇಟ್ಟುಕೊಂಡಾಗ ನಾವೆಲ್ಲ ಸಾಕಷ್ಟು ಸಾಧಿಸಲು ಸಾಧ್ಯ. ಅದೇ ನಮ್ಮ ಶಕ್ತಿಗೆ ವಿಪರೀತ ಮೀರಿದರೆ? ನಮ್ಮ ಆಸೆ ನಮ್ಮ ಮಿತಿಯಲ್ಲಿದ್ದರೆ ಒಳ್ಳೆಯದು. ಆಗ ನಾವು ನಮ್ಮ ಗುರಿ ತಲುಪಲು ಪ್ರತಿಯೊಂದು ಹೆಜ್ಜೆ ಹೇಗಿಡಬೇಕು ಅಂತ planಮಾಡಬಹುದು. ಮತ್ತೆ ಅದೇ plan ಪ್ರಕಾರ ಹೆಜ್ಜೆ ಇಡಬಹುದು. ಪ್ರತೀ ಹೆಜ್ಜೆಯಲ್ಲೂ ಮುಂದಿನ ಹೆಜ್ಜೆಗೆ ತಲುಪಲು ಆಸೆ ಇರಬೇಕು. ಆಗಷ್ಟೇ ಮುಂದಿನ ಹೆಜ್ಜೆ ತಲುಪಲು ಸಾಧ್ಯ. ಪ್ರತಿಯೊಂದು ಹೆಜ್ಜೆಗೂ ಅದರದ್ದೇ ಆದ ಸ್ವರೂಪ ಇದೆ. ಅದಕ್ಕೇ ಆ ಗುರಿ ತಲುಪಲು ಅದರದೇ ಸಮಯ ತಗೋತಿವಿ. ಅದನ್ನ ಮುಗಿಸಿ ಮುಂದೆ ಹೋಗಬೇಕು. ಆದರೆ ಮೊದಲನೇ ಹೆಜ್ಜೆ ಇಂದ ಐದನೇ ಹೆಜ್ಜೆಗೆ ಅನಾಮತ್ತಾಗಿ ಹೋಗಲು ಸಾಧ್ಯನ? ಸಾಧ್ಯ ಇರಬಹುದು - ಆದ್ರೆ ಸ್ವಲ್ಪ ಕಷ್ಟಕರ. ಅದು ಅವರವರ ಸಾಮರ್ಥ್ಯದ ಮೇಲೆ ಅವಲಂಬಿಸಿರುತ್ತೆ. ತುಂಬಾ ಅಭ್ಯಾಸ ಮಾಡಬೇಕು. ಕ್ರಮೇಣ ನಮ್ಮ ಸಾಮರ್ಥ್ಯದ ಜೊತೆಜೊತೆಗೆ ನಮ್ಮ ಭರಾಟೆ ಹೆಚ್ಚಿಸಿಕೊಳ್ಳಬೇಕು. ಆಗ ಒಮ್ಮೆಗೇ ಐದು ಹೆಜ್ಜೆ ಮುಂದೆ ಹೋಗಬಹುದು. ಇಲ್ಲದಿದ್ದಲ್ಲಿ ಮಧ್ಯದಲ್ಲಿ ಬೀಳುವ ಸಾಧ್ಯತೆಗಳೇ ಹೆಚ್ಚು. ಅದು ಸರಿ! ಏನೂ ತೊಂದರೆಯಿಲ್ಲ. ಯಾಕಂದ್ರೆ ಮುಂದೆನೇತಾನೆ ಇದ್ದೀವಿ. ಮತ್ತೆ ಮುಂದುವರಿಸೋಣ. ಆದ್ರೆ ಎರಡು ಹೆಜ್ಜೆಗಳ ಮಧ್ಯ ಬಿದ್ದು ಹಿಂದೆ-ಮುಂದೆ ಹಿಡಿಯಲು ಆಗದೇ ಪೆಟ್ಟಾದ್ರೆ? ಅಲ್ಲಿದೆ ಸ್ವಾಮಿ ತೊಂದರೆ! ಅದಕ್ಕೇ ಸರಿಯಾದ planningಬೇಕು. ಜೊತೆಗೆ ಸಾಧನೆ. ನಮ್ಮ ಆಸೆ ಏನಿದೆ ಅದು ನಮ್ಮ ಶಕ್ತಿಗೆ ಅನುಗುಣವಾಗಿದ್ದರೆ ಕ್ಷೇಮ. ಇಲ್ಲದಿದ್ದಲ್ಲಿ ಕಷ್ಟವಾದೀತು. ಎರಡು ಹೆಜ್ಜೆಗಳ ಮಧ್ಯ ಬಿದ್ದು ಪೆಟ್ಟಾಗಿ ಮತ್ತೆ ಎದ್ದು ನಮ್ಮ ಹಾದಿ ಸೇರಲು ತುಂಬಾ ಸಮಯ ತಗೊಂಡಾಗ ನಮ್ಮ ಗುರಿ ಮುಟ್ಟಲು ನಾವಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತೆ. ಹಾಗಾಗಿ ಕ್ರಮಬದ್ಧವಾಗಿ ಮುಂದುವರಿಯುವುದು ಮುಖ್ಯ.

ನಾನು ಇದನ್ನ ಯಾಕೆ ನಿಮ್ಮಜೊತೆ ಹಂಚಿಕೊಬೇಕು ಅಂದುಕೊಂಡೆ ಅಂದ್ರೆ, ನಾವೆಲ್ಲಾ ಆಸೆಬುರುಕರೇ. ಆಸೆಯೇ ನಮ್ಮ ಜೀವಾಳ - ಅದರಲ್ಲೂ ಮಧ್ಯಮವರ್ಗದ ಜನರಿಗೆ. ಕೆಲವೊಮ್ಮೆ ನಮ್ಮ ಆಸೆಗಳು ಮಿತಿಮೀರಿ ಹೊಗುತ್ತವೆ. ಅದು ಹೇಗೆ ಅಂತಿರ? ನಮಗೆ ನಮ್ಮದೇ ಆಸೆಗಳು ಒಂದಾದ್ರೆ ಮತ್ತೊಂದು ವರ್ಗ - ಬೇರೆಯವರನ್ನು ನೋಡಿ ಬರೋದು. ಸಾಮಾನ್ಯವಾಗಿ ಸುಮಾರು ನಮ್ಮದೇ ಸುತ್ತ ಮುತ್ತ, ಸ್ನೇಹಿತರು, ಗುರುತು-ಪರಿಚಯ ಇರೋರನ್ನೆಲ್ಲಾ ನೋಡಿ ನಮ್ಮಲ್ಲೇ ಒಂದು ಪ್ರಚಂಡ ಆಸೆ ಅಂಕುರಿಸುತ್ತೆ. ಇಲ್ಲಿ ನಾವು ನಮ್ಮನ್ನ ಅವರ ಜೊತೆ ಹೋಲಿಸಿ ನೋಡಿ ನಾವೂ ಯಾಕೆ ಅವರಂತೆನೇ ಇರಬಾರದು ಅಂತ ಅನ್ನಿಸೋದು ಸಹಜ. ಹೋಲಿಸುವ ಮನೋವೃತ್ತಿ ಆಸೆಯ ಮತ್ತೊಂದು ರೂಪ ಅನ್ನಬಹುದೇನೊ. ಆಸೆ ಇರತ್ತೊ ಬಿಡತ್ತೊ, ಒಮ್ಮೆ ನೀವು ಮತ್ತೊಬ್ಬರ ಜೊತೆ compareಮಾಡಿ ’ನಾನೇನು ಕಮ್ಮಿ’ ಅನ್ನೊ ಮನೋವೃತ್ತಿಗೆ ಬಂದ್ರೊ, ಕೆಲಸ ಕೆಟ್ಟಿತು ಅಂತಂದ್ಕೊಳ್ಳಿ. ಆದು ನಮ್ಮ ಶಕ್ತಿಯ ಒಳಗಿದ್ದರೆ ಏನೂ ತೊಂದರೆಯಿಲ್ಲ ಬಿಡಿ. ಅದಲ್ಲದೆ ಇದ್ದಲ್ಲಿ ಮಾತ್ರ ಕಷ್ಟ. ಬರ್ಲಿ ಬಿಡಿ ಸ್ವಾಮಿ, ತಪ್ಪೇನು? ಮೇಲೆ ಹೆಳಿದಹಾಗೆ ಆಸೆ ಇಲ್ಲದಿದ್ರೆ ಜೀವನದಲ್ಲಿ ಏನಿದೆ; ಮುಂದೆ ಬರೋಕೆ ಆಸೆಪಡೋದು ಮುಖ್ಯ ಅಲ್ವ? ಹೌದು ಸ್ವಾಮಿ ಹೌದು. ಆದ್ರೆ ನಾನು ಹೆಳಿದ್ದು ಇಷ್ಟೆ. ನಮ್ಮ ಹೋಲಿಕೆ ಆರೋಗ್ಯಕರವಾಗಿರಬೇಕು. ಅದು ಯಾವಾಗಲೂ ಅಸೂಯೆ/ಜಿದ್ದೆನಿಂದ ಬಂದಿದ್ದಾಗಬಾರದು. ನನ್ನನ್ನ ಕೇಳಿದರೆ, compareರೇ ಮಾದಿಕೊಳ್ಳಬಾರದು. ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮುಂದಿರುತ್ತೇವೆ; ಒಳ್ಳೆಯ ಗುಣಗಳಿರುತ್ತವೆ.. ನಮ್ಮ comparison ನಮ್ಮ ಬೆಳವಣಿಗೆಗೆ ಪೂರಕವಾಗಿದ್ದರೆ ಚೆನ್ನ. ಅಲ್ಲದಿದ್ದರೆ - ನನಗೆ ನನ್ನಡದ ಒಂದು ಗಾದೆ ಜ್ಞಾಪಕಕ್ಕೆ ಬರ್ತಿದೆ: ನವಿಲು ಕುಣಿಯಿತು ಅಂತ ಕೆಂಬೂತ ಪುಕ್ಕ ಕೆದರಿಕೊಳ್ತು ಅಂತ. ಹಾಗಾಗತ್ತೆ! ಅದಕ್ಕೆ ನಾವು ಅವಕಾಶ ಕೊಡಬಾರದು ಅಲ್ವ? ಯಾರಿಗೆ ಎಷ್ಟು ಲಭ್ಯವೋ ಅಷ್ಟೇರೀ ಸಿಗೋದು. ಹಾಗಂತ ಕೈ ಕಟ್ಟಿ ಕುಳಿತುಕೊಳ್ಳಿ ಅಂತ ಹೇಳ್ತಿಲ್ಲ. ನಮ್ಮ ಪ್ರಯತ್ನ ನಾವು ಮಾಡಲೇ ಬೇಕು. ಹಾಗೆ ಮಾಡಿಯೂ ನಮ್ಮ ಆಸೆ ನೆರವೇರದಿದ್ದಲ್ಲಿ ಅದನ್ನ ಅಲ್ಲಿಗೇ ಬಿಟ್ಟು ಮುಂದೆ ನಡೆಯ ಬೇಕು - ಮತ್ತೊಂದು ಆಸೆ ಕಟ್ಟಿ. ಯಾವಾಗಲೂ ಮುಂದೆ ನೋಡಿ.. ಹೀಗಾಯ್ತಲ್ಲ ಅಂತ ತಲೆ ಮೇಲೆ ಕೈಹೊತ್ತು ಕೂರಬೇಡಿ.

ಆಸೆ ಪಡೋಣ. ಆದ್ರೆ ನಮ್ಮ limits ಗೊತ್ತಿರಲಿ.
ನಮ್ಮನ್ನ ಹೋಲಿಸಿಕೊಳ್ಳೋಣ. ಆದ್ರೆ ಅದು ಆರೋಗ್ಯಕರವಾಗಿರಲಿ (healthy comparison).
ಯಾವಾಗಲೂ factsನ ಒಪ್ಪಿಕೊಳ್ಳೊ ಮನೋಭಾವ ಬೆಳೆಸಿಕೊಳ್ಳೋಣ.
ಏನಂತೀರ??