Showing posts with label ಅನಿಸಿಕೆ. Show all posts
Showing posts with label ಅನಿಸಿಕೆ. Show all posts

Thursday, January 03, 2008

New Year's Resolution

ಸರ್ವರಿಗೂ ಹೊಸ ಆಂಗ್ಲ ವರ್ಷದ ಶುಭಾಶಯಗಳು! ಬೆಂಗಳೂರಿನ ಜನತೆಗೆ ಹೊಸ ಆಂಗ್ಲ ವರ್ಷದ ಉತ್ತಮ ಸಂಕಲ್ಪ ಅಂದ್ರೆ ನಮ್ಮ ಸಂಚಾರ ವ್ಯವಸ್ಥೆ ಉತ್ತಮಪಡಿಸೋಕೆ ಸಹಾಯ ಮಾಡೋದು. ಯಾಕಂದ್ರೆ ನನಗನ್ನಿಸುತ್ತೆ ಇದೊಂದು ಸಾಮಾನ್ಯ ಮನುಷ್ಯ ಮಾಡಬಹುದಾದ ಕೆಲಸ - ನಮ್ಮ ಯಾವುದೆ ಸರ್ಕಾರಕ್ಕೆ ಏನುಮಾಡಬಹುದು ಅಂತ ಕಾಯದೆ! ತುಂಬಾ ವಾಹನಗಳು ಹೆಚ್ಚಾಗಿ ನಮ್ಮ ರಸ್ತೆ ಗಳು ಅದನ್ನ ತಡಕೊಳ್ಳೋಕೆ ಆಗದಿರೊ ಸಂದರ್ಭದಲ್ಲಿ ನಮ್ಮ 'ಅಳಿಲು ಸೇವೆ' ಮಾಡಬಹುದಲ್ಲಾಂತ.

ನಿಜ ಎಲ್ಲಾರಿಗೂ ಅದೊಂದೆ ಪ್ರಶ್ನೆ. ಯಾಕೆ ನಮ್ಮೂರಿನಲ್ಲಿ ಸಂಚಾರ ವ್ಯವಸ್ಥೆ ಇಷ್ಟು ಹದಗೆಟ್ಟಿದೆ ಅಂತ. ಅದು ಎಲ್ಲಾರಿಗೂ ಗೊತ್ತು ಸ್ವಾಮಿ, ಆದ್ರೆ ಅದನ್ನ ಸರಿಪಡಿಸೋಕೆ ಅಂತ ನೀವು ಎಷ್ಟು ಪ್ರಯತ್ನಿಸಿದ್ದೀರ? ಅದನ್ನ ನೀವು ಯಾವತ್ತಾದರೂ ನೇವೇ ಪ್ರಶ್ನಿಸಿ ನೋಡಿದ್ದೀರ? ರಸ್ತೆಯಲ್ಲಿ 'ನಾನೊಬ್ಬನೇ ಅಲ್ಲ ಬೇರೆಯವರೂ ಅದರ ಬಗ್ಗೆ ಯೋಚಿಸಬೇಕು' ಅನ್ನೋ ಉತ್ತರ ನಾನು ತುಂಬ ಕೇಳಿದ್ದೀನಿ. ಈ 'ಬೇರೆಯವರು' ಯಾರು? ನನಗೆ ನೀವು ಬೇರೆಯವರು, ನಿಮಗೆ ನಾನು ಬೇರೆಯವನು. ಹೌದಲ್ವ? ನಾವೆಲ್ಲಾ ರಸ್ತೆಯ ನಿಯಮಗಳನ್ನ ಸಾಧ್ಯವಾದಷ್ಟು (ಬೇರೆಯವರಿಗಿಂತ ಹೆಚ್ಚುಮಾಡೊಕೆ ಪ್ರಯತ್ನ ಪಟ್ಟು) ಪಾಲಿಸಬೇಕು. ಆಗಷ್ಟೇ ನಮ್ಮ ಬೆಂಗಳೂರಿನಲ್ಲಿ ನಾವು ಸ್ವಲ್ಪ ನಿರಾಳವಾಗಿ ಸಂಚರಿಸಬಹುದು.

ನನಗೆ ಈ ರಸ್ತೆ ನಿಯಮ ಅಂದ ತಕ್ಷಣ ನೆನಪಿಗೆ ಕಾಣಿಸೋದು ನಮ್ಮ 'ಪೆಡಂಭೂತ' ಬೆ.ಎಂ.ಟ್.ಸಿ. ಬಸ್ಸುಗಳು. ಅವನ್ನು ನಾನು 'ಭೂತ' ಅಂದಿದ್ದು ಕೇವಲ ಗಾತ್ರ ದಿಂದ ಅಷ್ಟೆ (ಹಲವಾರು ಸಂದರ್ಭದಲ್ಲಿ ಅವು ಭೂತ ಗಳನ್ನ ಸೃಷ್ಟಿ ಮಾಡಿವೆ, ಅದು ನಮ್ಮ ಈಗಿನ ವಿಶಯವಲ್ಲ!). ಸಾಮಾನ್ಯವಾಗಿ, ನಮ್ಮ ರಸ್ತೆಗಳ ಅಗಲಕ್ಕೆ ಒಮ್ಮೆ ಕೇವಲ ಎರಡು ಬಸ್ಸುಗಳು ಹೋಗಬಹುದು. ಆದರೆ ಈ ಬಸ್ಸುಗಳಲ್ಲಿರುವ ಪೈಪೋಟಿನ ಯಾರು ಸರಿ ಮಾಡೊರು? ಒಂದು ಬಸ್ಸು ನಿಂತಿರುವಾಗ ಮತ್ತೊಂದು ಹಿಂದಿನಿಂದ ಬಂದ ಬಸ್ಸು, ಈಗಾಗಲೇ ನಿಂತಿರೋ ಬಸ್ಸಿನ ಹಿಂದೆ ನಿಲ್ಲೋದು ಎಲ್ಲಾರು ಪಾಲಿಸಬೇಕಾದದ್ದು - ಸಂಚಾರ ಸರಾಗವಾಗಿ ನಡೀಬೇಕೂಂದ್ರೆ. ಆದ್ರೆ ಹಾಗಾಗೋದು ನೀವು ನೋಡಿದ್ದೀರ? ಎರಡನೇ ಬಸ್ಸು ಹಾಗೆ ಮಾಡಲ್ಲ. ಅದು diagonalಆಗೇ ನಿಲ್ಲೋದು. ಇಲ್ಲಾ - ನಿಲ್ಲಿಸೋಕೆ ಮುಂಚೆ ಇನ್ನ್ಯಾವುದೋ ವಾಹನನ overtake ಮಾಡಿ ಎಡಗಡೆಗೆ ಕೊಯ್ಮೂಲೆಯಾಗೇ ನಿಲ್ಸೋದು. ಇದು ಬೇರೆ ವಾಹನಗಳಿಗೆ ಎಷ್ಟು ತೊಂದರೆ ಅಂತ ಅವರು ಒಮ್ಮೆಕೂಡ ಯೋಚಿಸಿರ್ತಾರೆ ಅಂತ... ಹಾಗಾಗಿದ್ರೆ ಅವರು ಹೀಗೆ ಮಾಡೊಲ್ಲ. ಇನ್ನೊಂದು ಈ ಬಸ್ಸಿನ ಚಾಲಕರು ಮಾಡುವ ಸಹಾಯ ಅಂದ್ರೆ, ಬಸ್ ಸ್ಟಾಪಿನ ಹತ್ರ ಬಂದಾಗ ಅವರು ಯಾವ laneನಲ್ಲಿರ್ತಾರೋ ಅದೇ ನೇರಕ್ಕೆ ನಿಲ್ಲಿಸಿಬಿಡುತ್ತಾರೆ. ಅಂದರೆ ಬಸ್ ಸ್ಟಾಪಿಗೂ ಈ ಬಸ್ಸಿಗೂ ಹೆಚ್ಚುಕಡಿಮೆ ಮೂರು-ನಾಲ್ಕು ಅಡಿಗಳಷ್ಟು ಅಂತರ ಇರುತ್ತೆ. ನಮ್ಮ ಚಿಕ್ಕ-ಚಿಕ್ಕ ರಸ್ತೆಗಳಲ್ಲಿ ಇರೋ-ಬರೋ ಜಾಗನೆಲ್ಲಾ ಇವರೇ ತಗೊಂಡ್ರೆ ಬೇರೆಯವರ ಸಮಾಚಾರ ಹೇಳಿ!

ಎರಡನೆಯವರು ಅಂದ್ರೆ, ನಮ್ಮ ಆಟೋ ಚಾಲಕರು. ನಮ್ಮ ರಸ್ತೆಗಳೆಲ್ಲಾ ಅವರದ್ದೇ... ಅವರು ರಸ್ತೆಯ ಯಾವ ತುದಿಯಿಂದ ಯಾವತುದಿಗೂ ಹೇಗೆಬೇಕಾದರೆ ಹಾಗೆ ಓಡಿಸಬಹುದು ಆಂದ್ಕೊಂಡಿದ್ದಾರೆ. ಇವರೆಲ್ಲ ಒಂದು ಥರ ಮೋಟಾರು 'ಹಾವು'ಗಳು. ನನ್ನ ಕೇಳಿದ್ರೆ, ಪ್ರಾಣಿ ಹಾವು ಕೂಡ ಸ್ವಲ್ಪ ನಿಯಮಬದ್ಧವಾಗಿ ಚಲಿಸುತ್ತೆ. ಆದ್ರೆ ಇವರಿಗೆ ಯಾವ ನಿಯಮಗಳೂ ಇಲ್ಲ. ಒಟ್ಟಿನಲ್ಲಿ ಇವರು ಸಿಕ್ಕ ಜಾಗವನ್ನು ಬಿಟ್ಟುಬಿಟ್ರೆ ಅವರ ಆಸ್ತಿ ಕಳೆದುಹೋಗ್ತಿದೆ ಅನ್ನೋಥರ ಆ ಜಾಗನ ಓಡಿಸಿಕೊಂಡು ಹೋಗ್ತಾರೆ.. ಇವರು ಒಮ್ಮೆಯೂ ಸರಿಯಾಗಿ indicate ಮಾಡಿರೋದು ನೋಡಿಲ್ಲ. Indicatorಗಳು ಕೆಟ್ಟಿರ್ತ್ವೆ. ಮತ್ತೆ ಕೈ ತೋರಿಸುತ್ತಾರೆ ಬಲಗಡೆ ತಿರುಗೋಕೆ, ಅದು ಆಟೋ ಒಳಗೆ ಕೂತಿರೋರಿಗೆ ಮಾತ್ರ ಕಾಣೋದು. ಅವರ ಹಿಂದಿರೋ ವಾಹನಗಳಿಗಲ್ಲ... ಇನ್ನೂ ಹಸಿರು ಬಣ್ಣ ಬಂದೇಯಿರಲ್ಲ, ಇವರಾಗಲೇ ಮುಂದುವರಿದಿರ್ತಾರೆ... ಒಳಗೆ ಕೂತವರು ಈ ಆಟೊ ಚಾಲಕರಿಗೆ ನಿಯಮ ಪಾಲಿಸಿ ಅಂತ ಹೇಳ್ತಾರ? ಮೊದಲು ಅವರೇ ಪಾಲಿಸ್ತಿರಲ್ಲ ಇನ್ನು ಬೇರೆಯವರಿಗೆ ಏನು ಹೇಳ್ತಾರೆ? ಒಳಗಿರೋರ್ಗೆ ಮೊದಲು ಅವರು ತಲಪಿದ್ರೆ ಸಾಕು ಅಷ್ಟೆ. ಅಥವಾ ನಿಯಮ ಪಾಲಿಸಿ ಅಂತ ಹೇಳಿದರೆ ಅವರು ಕೇಳ್ತಾರೆ ಅಂದ್ಕೊಂಡಿದ್ದೀರ? ನಿಂಗೆ 'ನಾವು rulesಉಅಂತ ಹೋದ್ರೆ ಈ ಊರ್ನಲ್ಲಿ ಹೋದಂಗೆಯ' ಅಂತಾರೆ ಮತ್ತೆ ಅವರ ಚಾಳಿ ಬಿಡಲ್ಲ.. ಏನು ಹೇಳ್ತಿರ ಇವರಿಗೆ.. ಹಾಗಂತ ಒಳ್ಳೆಯ ಆಟೋ ಡ್ರೈವರ್ಗಳಿಲ್ಲ ಅಂತಲ್ಲ.. ಕೆಲವರು ತುಂಬಾ ಚೆನ್ನಾಗಿ ಓಡಿಸ್ತಾರೆ.. ಆದ್ರೆ majority ಇರೋರು ಮೊದಲಿನ categoryನವರೇ...

ನನಗೆ ಮತ್ತೊಂದು ಉತ್ತಮ ಪ್ರಯತ್ನ ಮಾಡಬಹುದಾದಂಥ ವಿಭಾಗ ಅಂದ್ರೆ, ಸರ್ಕಾರಿ ವಾಹನಗಳು - ಕಾರು, ಜೀಪು ಮುಂತಾದವು. ಈ ಕಾರುಗಳಲ್ಲಿ ಓಡಾದೋರೆಲ್ಲ officialಗಳು. ಇವರು ಓಡಾಡೋ ವಾಹನಗಳು ಕೂಡ ಅವೇ. ತುಂಬಾ ಕೆಟ್ಟದಾಗಿ ಓಡಿಸ್ತಿರ್ತಾರೆ ಅವರ ಡ್ರೈವರ್ಗಳು. ಆದರೆ ಈ ಸರ್ಕಾರಿ ನೌಕರರು ಅವರ ಡ್ರೈವರ್ಗಳಿಗೆ ನಿಯಮ ಪಾಲಿಸೋಕೆ ಹೇಳ್ತಾರ? ಇಲ್ಲ.. ನಾನು ನೋಡಿಲ್ಲ.. ನಾನು ನೋಡಿರೋ ಅಷ್ಟೂಸಲ ಅವರು ನಿಂದಿನ ಸೀಟಿನಲ್ಲಿ ಕೂತು ದೈನಂದಿನದಲ್ಲಿ ಮಗ್ನರಾಗಿರ್ತಾರೆ. ಈ ಸರ್ಕಾರಿ ನೌಕರರು ಅವರ ಚಾಲಕರಿಗೆ ಹೇಳೋಕಾಗಲ್ವ? ಅವರ ಪಾಡಿಗೆ ಅವರು ಪೇಪರ್ ಓದ್ತಿದ್ರೆ ಏನು ಮಾಡೋಕೆ ಸಾಧ್ಯ?

ಸಣ್ಣ ದ್ವಿಚಕ್ರ ವಾಹನಗಳು ರಸ್ತೆಯ ಬಲಗಡೆ ಯಾಕೆ ಹೋಗ್ತಾರೋ ಗೊತ್ತಿಲ್ಲ. ಅವರ ಗಾಡಿ ಅವರನ್ನ ಯಳಿಯಲ್ಲ ಆದ್ರೂ ಅವರ ಭಗೀರಥ ಪ್ರಯತ್ನ ಬಿಡಲ್ಲ... ಕೆಲವು ಸಲ ಏನೂ ಮಾಡಕ್ಕಾಗಲ್ಲ ಬಿಡಿ, ಅವರು right turn ಮಾಡ್ಬೇಕಿದ್ರೆ! ಇವರು, ಮತ್ತೆ ಬೇರೆ ದ್ವಿಚಕ್ರ ವಾಹನಗಳಲ್ಲಿರೋರು, ಎಡಕ್ಕೆ ತಿರುಗುವಾಗ ತೀರಾ ಬಲಗಡೆ ನಿಂತಿರ್ತಾರೆ junctionಗಳಲ್ಲಿ, ಮತ್ತೆ ಹೊರಡುವಾಗ, ಎಲ್ಲರಿಗೂ ತೊಂದರೆ, ಯಾಕಂದ್ರೆ ಅವರು ಧಾಟುವತನಕ ಕಾಯ್ಬೇಕಲ್ಲ... ಇವರಷ್ಟೆಅಲ್ಲ, B-segmet ಕಾರು ಇಟ್ಟುಕೊಂಡಿರೋರೆಲ್ಲಾ ತಮ್ಮ laneಬಿಟ್ಟು ಪಕ್ಕಕ್ಕೆ ಹೋಗೋರೇ ಜಾಸ್ತಿ... ಅದಕ್ಕಿಂತ ಕೆಟ್ಟರೀತಿ ಓಡಿಸೋರು ಅಂದ್ರೆ mid-segmet ಗಾಡಿಗಳನಿಟ್ಟುಕೊಂದಿರೋರು. ಹೌದು! ಅದನ್ನಿಟ್ಟುಕೊಂಡಿರೋರು ಚೆನ್ನಾಗೇ ಓದಿರೋರು.. ಓಳ್ಳೆ ಹುದ್ದೆಯಲ್ಲಿರೋರು.. ಹೊರದೇಶಗಳಿಗೆ ಹೋಗಿಬಂದಿರೋರು.. ಆದರೆ, ಅವರು ಹೊರಗಿದ್ದಾಗ ತುಂಬಾ ನಿಯಮ ಬದ್ಧವಾಗಿ ಓಡಿಸೋರು, ಇಲ್ಲಿ ನಮ್ಮ ದೇಶದಲ್ಲಿ ಮಾತ್ರ ಯಾಕೆ ಹಾವಿನಥರ ಓಡಿಸ್ತಾರೆ? ಬಹಳಜನ ಸರಿಯಾಗಿ ಓಡಿಸಲ್ಲ ಇಲ್ಲಿ, ಹಾಗಿರುವಾಗ ನಾವ್ಯಾಕೆ ಸರಿಯಾಗಿ ಓಡಿಸೋದು ಅಂತಿರ್ಬಹುದು... ಅಲ್ವ?

ಪಾದಚಾರಿಗಳೇನು ಕಡಿಮೆಯಲ್ಲ. Foot Path ಇದ್ದರೂ ಕೂಡ ಅವರು ರಸ್ತೆಯಲ್ಲೇ ನಡಿಯಬೇಕು. ಜೊತೆಯಲ್ಲಿ, ಚಿಕ್ಕ ಮಕ್ಕಳಿದ್ದರೆ ಅವರನ್ನು ರಸ್ತೆಯ ಕಡೆಗೆ ಇಟ್ಟುಕೊಂಡು ನಡೆಯಬೇಕು, ರಸ್ತೆಯ pavement ಕಡೆಯಲ್ಲ. ಅವರುತಾನೆ ಏನು ಮಾಡ್ತಾರೆ ಹೆಳಿ ಸ್ವಾಮಿ, ಎಷ್ಟೋ ರಸ್ತೆಗಳಲ್ಲಿ pavements ಇಲ್ಲ. ಎದ್ದರೂ ಅದರಲ್ಲಿ ಬೇಕಾದಷ್ಟುಜನ scooter, bike, Car ಗಳನ್ನ ನಿಲ್ಲಿಸಿರುತ್ತಾರೆ, ಎಲ್ಲಂದ್ರೆ, ಸಣ್ಣ-ಪುಟ್ಟ ವಸ್ತುಮಾರೋ ಗಾಡಿಗಳು, ಇಲ್ಲಾಂದ್ರೆ KEB/BSNL ಅವರ ದೊಡ್ಡ ದಬ್ಬಗಳು.. ಹೀಗಿರುವಾಗ ನಡೆಯುವರಿಗೆ ಎಲ್ಲಿದೆ ಜಾಗ?.. ಅವರು ಒಮ್ಮೆಯಾದರೂ ರಸ್ತೆಗೆ ಬರಲೇ ಬೇಕು. ಹಾಗಾಗಿ ಪಾದಚಾರಿಗಳು ರಸ್ತೆಯಲ್ಲೇ ನಡೆಯೋ ನಿರ್ಧಾರ ಮಾಡಿರಬಹುದು... ಆದರೆ, ಈಗೀಗ ಸಿಗ್ನಲ್ ಹತ್ತಿರದಲ್ಲಿ bikeಸವಾರರು foot pathಮೇಲೇ ಓಡಿಸಿಕೊಂಡು ಹೋಗೋದು ಸಾಮಾನ್ಯ ವಾಗುತ್ತಿದೆ.. ಹೀಗಾದಾಗ, ಪಾದಚಾರಿಗಳು ಹೇಗೆ ಧೈರ್ಯವಾಗಿ ಅಲ್ಲಿ ನಡೆಯೋದು ಹೇಳಿ?

ಇನ್ನೂ ಬರೀಬಹುದು.. ಆದ್ರೆ ವಿಶಯ ಇಷ್ಟೆ. ನಾವೆಲ್ಲಾ ಸಾಧ್ಯವಾದಷ್ಟು ರಸ್ತೆ ನಿಯಮ ಪಾಲಿಸೋಣ. ಬೇಕಾದಷ್ಟು ಜನ ಇದೇ ಬಗ್ಗೆ ಎಷ್ಟೋ ಬರೆದಿದ್ದಾರೆ.. ಆದ್ರೆ ಬೇರೆಯವರ ಮೇಲೆ ಗೂಬೆ ಕೂರಿಸೋದಷ್ಟು ಬಿಟ್ರೆ ಶ್ರೀಸಾಮಾನ್ಯರು ತಮ್ಮ ಪ್ರಯತ್ನ ಮಾಡೇಇಲ್ಲ ಅನ್ನೋದು ನನ್ನಾನಿಸಿಕೆ.. ಹಾಗಿರುವಾಗ, ಈ ವರ್ಷ ಯಾಕೆ ನಾವೆಲ್ಲಾ ಸಂಚಾರಿ ನಿಯಮಗಳನ್ನ ಪಾಲಿಸಬಾರದು? ಸಾಧ್ಯವಾದಷ್ಟು ಬಿ.ಎಂ.ಟಿ.ಸಿ.ನಲ್ಲಿ ಓಡಾಡೋಣ. ನಮ್ಮ personal ವಾಹನಗಳನ್ನ ಕೇವಲ ಅವಶ್ಯಕತೆ ಇರುವಾಗ ಮಾತ್ರ ಉಪಯೋಗಿಸೋಣ.

Monday, October 08, 2007

ಕೋಪ...

ಮೊನ್ನೆ ಮನೆಯಲ್ಲಿ ಯಾವುದೋ ವಿಷಯಕ್ಕೆ ಕೋಪಿಸಿಕೊಂಡು ನನ್ನ ಸ್ನೇಹಿತನಜೊತೆ ಹೊರಗೆ ಹೋಗಿದ್ದೆ. ಅಲ್ಲಿ ಅವನಜೊತೆ ಏನೇನೋ ತಿನ್ನುವಾಗ, ಒಂದೆರಡು ಜೋಡಿಗಳು ಬಂದು ತಿನ್ನುತ್ತಿದ್ದುದು ಕಣ್ಣಿಗೆ ಬಿತ್ತು. ನನ್ನ ಸ್ನೇಹಿತನ ಜೊತೆ ಖುಷಿಯಾಗಿ ತಿನ್ನುತ್ತಿರೋಹಾಗೆ ಸುಳ್ಳು ಸೋಗೆ ಮುಖದಲ್ಲಿ ಹಾಕಿದ್ದರೂ, ಒಳಗಿದ್ದ ನೋವು ನನಗೆ ಮಾತ್ರ ಗೊತ್ತಿತ್ತು. ನಾನಂದುಕೊಂಡೆ - ನಾನೂ ಸಹ ನನ್ನ ಹೆಂಡತಿ ಜೊತೆ ಇಲ್ಲಿ ಅವರಹಾಗೇನೇ ತಿನ್ನುತ್ತಿದ್ದರೆ ಹೇಗಿತ್ತು ಅಂತ. ಖುಷಿಯಾಗಿ ಅವಳಜೊತೆ ತಿನ್ನುವ ಆನಂದವೇ ಬೇರೆ! ಆದ್ರೆ ಇದ್ದ ಕೋಪ?!! ಸರಿ, ಅವನೊಂದಿಗೆ ತಿಂದು ಎಷ್ಟೋ ಆನಂದಿಸಿ ಹೊರಟೆ. ಸ್ವಲ್ಪ ಹೊತ್ತು ಹೊರಗೆ ಸುತ್ತಾಡಿ ನಂತರ ಮನೆ!

ನಾನು ಬಹಳಬಾರಿ ಯೋಚಿಸಿದ್ದೇನೆ. ನಾವೇಕೆ ಕೋಪಿಸಿಕೊಳ್ಳುತ್ತೇವೆ? ಅದರಲ್ಲೂ ನಾವು ಇಷ್ಟಪಡುವವರ ಮೇಲೆಯೇ? ನಾನು ಗಮನಿಸಿರೋ ಹಾಗೆ ಹೆಚ್ಚಾಗಿ ನಾನು ಕೋಪಿಸಿಕೊಳ್ಳೋದು ಅಮ್ಮನಮೇಲೆ. ಯಾಕೇಂದ್ರೆ ಅವರೇ ತಾನೆ ಸುಲಭವಾಗಿ ಮಕ್ಕಳಿಗೆ ಸಿಗೋರು! ಮತ್ತೆ ಅಷ್ಟೇಬೇಗ ಅದು ಹೋಗುತ್ತೆ. ಬೇಜಾರಾಗುತ್ತೆ, ನಂತರ ಪಶ್ಚಾತ್ತಾಪ. ಅದು ಅಮ್ಮಂದಿರಿಗೂ ಗೊತ್ತು ಅನ್ನಿಸುತ್ತೆ. ಅದಕ್ಕೇ ಅವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ಆವರಿಗೂ ಗೊತ್ತು, ನಾನು ಇಷ್ಟವಿಲ್ಲದೆ ಬಯ್ಯುತ್ತಿಲ್ಲ, ಕೇವಲ ಕ್ಷಣಿಕ ಕೋಪ. ಅದೇನೇ ಆಗಲಿ, ಕೋಪ ಕೋಪವೇ ಅಲ್ಲವೇ? ಆದು ಒಳ್ಳೆಯದಲ್ಲ ಅಂತ ನನಗೆ ಗೊತ್ತಿದೆ. ಆದರೂ ಯಾಕೆ ಅದನ್ನ ಸರಿ ಪಡಿಸಿಕೊಂಡಿಲ್ಲ? ಸಂಯಮ ಏಕೆ ಕಂಡು ಬರುತ್ತಿಲ್ಲ? ಅದರಲ್ಲೇ ಗೊತ್ತಾಗುತ್ತೆ ನಾನಿನ್ನೂ ಪಕ್ವವಾಗಿಲ್ಲ ಅಂತ :( ಒಮ್ಮೆ ಕೋಪಿಸಿಕೊಂಡು ಅದರ ಬಗ್ಗೆ ಪಶ್ಚಾತಾಪ ಪಟ್ಟಮೇಲೂ ಅದನ್ನು ಸಂಪೂರ್ಣವಾಗಿ ಬಿಟ್ಟಿಲ್ಲ ಅಂದ್ರೇನರ್ಥ??

ನನ್ನನ್ನ ಬಹಳವರ್ಷ ನೋಡಿದ ನನ್ನ ಸ್ನೇಹಿತ ಒಮ್ಮೆ ನನ್ನ ಕೋಪ ನೋಡಿ ಹೇಳಿದ - ’ನೀನು ಇಷ್ಟು ಕೋಪ ಮಾಡಿಕೊಂಡಿದು ನಾನು ನೋಡಿಲ್ಲ. controlಮಾಡಿರ್ತಿಯ ಆದ್ರೆ ಈಗೀಗ ಯಾಕೆ ಹೇಗಾಗಿದ್ದೀಯ?’ ಅಂತ. ಅದಕ್ಕೆ ಉತ್ತರ ನನ್ನಲ್ಲಿರಲಿಲ್ಲ. ನಾನು ಕಂಡಂತೆ ನಾನು ಕಿಂಚಿತ್ತು ಸಂಯಮ ಗಳಿಸಿದ್ದೇನೆ (ಪ್ರಯತ್ನಿಸಿದ್ದೇನೆ ಅನೋದು ಸರಿಯಿರಬಹುದು). ಬೇಗ ಕೋಪಿಸಿಕೊಳ್ಳೋದಿಲ್ಲ. ತಕ್ಷಣ ಬಂದ ಕೋಪನ ತಡೆಯುತ್ತೀನಿ. ಕೋಪ ಬಂದಾಗ ಮೂಲ ಯೋಚನೆಗೆ ತದ್ವಿರುದ್ಧವಾಗಿ ಯೋಚಿಸಲು ಪ್ರಾರಂಭಿಸಿತ್ತೀನಿ. ಆಗ ನನಗೆ ಹಿಂದಿನ ಅನಿಸಿಕೆ ತಪ್ಪು ಅನ್ನಿಸೋಕೆ ಶುರುವಾಗತ್ತೆ. ಆಗ ಅಂದುಕೋತಿನಿ - ನಾನು ಯಾರು ತಪ್ಪು ಅಂತ ತಿಳ್ಕೊಂಡು ಕೋಪಮಾಡಿಕೊಂಡಿದ್ದೆ ಅದು ಅವರಕಡೆಯಿಂದ ತಪ್ಪಲ್ಲ. ಹಾಗೇ ಒಂದುವೇಳೆ ಅಲ್ಲದಿದ್ದರೆ, ನನಗನ್ನಿಸಿದುದನ್ನು ಸರಿಯಾದ ರೀತಿಯಲ್ಲಿ ಹೇಳಬೇಕು (ನಾನು ಹಾಗೆ ಅಂದುಕೊಂಡು ಮತ್ತೆ ನನ್ನ ಸೌಮ್ಯಕ್ಕೇಏಟುಬಿದ್ದು ಕೋಪಿಸಿಕೊಂಡ ಸಮಯಗಳಿವೆ). ನನಗೆ ಕೋಪಬಂದಾಗ ಬೇರೇ ರೀತಿಯಲಿ ಯೋಚಿಸಕ್ಕೆ ಪ್ರಯತ್ನ ಪಾಡುತ್ತೇನೆ. ಏನೇಆದ್ರೂ ನಾವು ನಮ್ಮ ಕೋಪ ತಡಿಯದೆ ಏನೇನೋ ಮಾತಾಡಿ ನಂತರ ಪಶ್ಚಾತಾಪಪಟ್ಟರೆ ಅದು ಎಷ್ಟು ಸಮ? ಅದು ಯಾವರೀತಿಯಲ್ಲೂ ಸಹಾಯ ಮಾಡುವುದಿಲ್ಲ. ’ಕೋಪದಲ್ಲಿ ಕುಯ್ದ ಮೂಗು ಮತ್ತೆ ಶಾಂತವಾದಾಗ ಬರುವುದಿಲ್ಲ’ ಅನ್ನೋ ಮಾತು ನಿಜ! ಕೋಪದಲ್ಲಿ ನಾವಾಡುವ ಮಾತು ತುಂಬಾ ನೋವುಂಟುಮಾಡುತ್ತದೆ. ಅದಕ್ಕೇ ಏನೇ ಮಾತಾಡುವಾಗಲೂ ಅದು ಬೇರೆಯವರಿಗೆ ಎಂಥಹ ಪರಿಣಾಮಬೀರಬಹುದು ಅಂತ ಸ್ವಲ್ಪ ಯೋಚಿಸಿದರೆ ಉತ್ತಮ. ಹೀಗೇ ಯೋಚಿಸಲು ಪ್ರಾರಂಭಿಸಿದರೆ, ಆ ಸಮಯದಲ್ಲೀ ಬಹಳಷ್ಟು ವೇಳೆ ನಮ್ಮ ಕೋಪ ತಣ್ಣಾಗಾಗಬಹುದು. ಮುಂದಾಗುವ ಹಾನಿಯನ್ನು ತಡೆಯಬಹುದು. ಇಲ್ಲಾ, ’ಮೌನೇ ಕಲಹಂ ನಾಸ್ತಿ’ ಅನ್ನೋ ಸಂಸ್ಕೃತದ ನುಡಿಯನ್ನ ಪಾಲಿಸಬೇಕು.

ನಾನು ಗಮನಿಸಿರೋ ಮತ್ತೊಂದು ವಿಷಯ ಅಂದ್ರೆ, ಮನೆಯವರ ಮೇಲೆ ಬೇಗ ಕೋಪಿಸಿಕೊಳ್ಳುವ ಎಷ್ಟೋಮಂದಿ ಮನೆಯ ಹೊರಗಿನವರ ಮೇಲೆ ಮಾಡೊದಿಲ್ಲ. ಅಲ್ಲಿ ಬಹಳಷ್ಟು ಸಮಾಧಾನವಾಗಿ ಮಾತಾಡುತ್ತಾರೆ. ಒಂದು t-shirtನ ಮೇಲೆ ಓದಿದ ನೆನಪು: "you always hurt the ones you love" ಅಂತ! :) ಹಾಂ! ಬೇರೆಯವರ ಬಗ್ಗೆ ತಲೆಯಾಕೆ ಕೆಡಿಸಿಕೊಳ್ಳೊಡು ಉಅಂತಿರ್ಬೇಕು ಅಲ್ವೆ? ಅವರು ಏನು ಮಾಡಿದರೆ ನನಗೇನು, ಸರಿಯಾದ್ರೂ ಆಗ್ಲಿ, ತಪ್ಪಾದ್ರು ಆಗ್ಲಿ.. ಅದೇ ಮನೆಯವರಲ್ಲಿ/ಗೊತ್ತಿರುವವರಲ್ಲಿ??? ಇನ್ನೊಂದು ಸಾಲು ನೆನಪಿಗೆ ಬರುತ್ತಿದೆ ’ಪ್ರೀತಿಯಿದ್ದಲ್ಲಿ ಕೋಪವಿರುತ್ತೆ’ ಅಂತ!! ಅಥವ ಇದೊಂದು ಕೇವಲ ಕೋಪಮಾಡಿಕೊಳ್ಳೋದಕ್ಕೆ ಕೊಡೊ excuseಏ?

ನಾವೆಷ್ಟೇ ಓದಿರಲಿ, ಏನೆಲ್ಲಾ ಸಾಧಿಸಿರಬಹುದು, ಆದ್ರೆ ಕೋಪ ನಿಗ್ರಹಮಾಡಿರದೆದ್ದಲ್ಲಿ ಏನು ಪ್ರಯೋಜನ. ಯಾವುದಾದರೊಮ್ಮೆ, ಬಂದ ಕೋಪ ಅದೆಲ್ಲವನ್ನೂ ನೀರಿನ ಮೇಲೆ ಹೋಮ ಮಾಡಿದಂತೆ ಮಾಡುತ್ತದೆ. ನೀವು ಯಾರಿಗೇ ಎಷ್ಟೇ ಸಹಾಯ ಮಾಡಿರಿ, ಒಂದು ಕೋಪದ ಮಾತು ಅದೆಲ್ಲವನ್ನೂ ಬೆಲೆಯಿಲ್ಲದಂತೆ ಮಾಡುತ್ತದೆ. ನಮ್ಮ ಸಮಾಧಾನ ಎಲ್ಲರಲ್ಲಿ ಒಳ್ಳೆಯ ಅಭಿಪ್ರಾಯ ತರುತ್ತೆ.

ತುಂಬಾಜನ ’ನಾನು ಅವನನ್ನು ನೋಡಿಲ್ಲ, ಮಾತಾಡಿಸಿಲ್ಲ, ಆದ್ರೂ ಯಾಕೋ ಅವನ್ನ ಕಂಡ್ರೆ ನಂಗೆ ಕೋಪಬರುತ್ತೆ’ ಅಂತ ಹೇಳೋದು ಕೇಳಿದ್ದೀನಿ. ಯಾರೋ ಯಾಕೆ, ನಾನೇ ಹಾಗೆ ಹೇಳಿರೋದು (ಹಲವು ಹರ್ಷಗಳ ಹಿಂದೆ) ನೆನಪಿದೆ. ಅದಕ್ಕೆ ಕಾರಣ, ನಾವು ಅವರ ಬಗ್ಗೆ ನಮಗಿಷ್ಟವಿಲ್ಲದ, ಕೋಪಬರಿಸುವ ಗುಣಹೋದಿರೋರು ಅಂತಷ್ಟೇ ನಮ್ಮ ಮನಸ್ಸಿನಲ್ಲಿ ಯೋಚಿಸಿ ನಮ್ಮದೇ ಆದ ಕಲ್ಪನೆಯಲ್ಲಿ ಅವರನ್ನು ಕೆಟ್ಟವರನ್ನಾಗಿ ಮಾಡಿ ಕೋಪಿಸಿಕೊಳ್ಳುತ್ತೇವೆ. ಅಲ್ರೀ, ಅವರು ಗೊತ್ತೇಇಲ್ಲ ಅಂದಮೇಲೆ ಅವರು ಕೆಟ್ಟವರು ಹೇಗೆ ಆಗ್ತಾರೆ ಸ್ವಾಮಿ? ವಿಚಿತ್ರ ಅಲ್ವೆ? ಯಾರೇ ಆಗಲಿ, ಅವರಲ್ಲಿ ಒಳ್ಳೆಯದನ್ನು ಹುಡುಕಬೇಕು. ಅವರಲ್ಲಿ ಓಳ್ಳೆಯ ಗುಣಗಳನ್ನಷ್ಟೇ ಗಮನಿಸಬೇಕು. ಆಗಷ್ಟೇ ನಾವು ಎಲ್ಲರಲ್ಲೂ ಚೆನ್ನಾಗಿರಲು ಸಾಧ್ಯ. ಬೇರೆಯವರನ್ನು ಹೊಗಳೋದು ಬೇಡ, ತೆಗಳೋದುಕೂಡ ಯಾಕೆ? ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಒಳ್ಳೆಯ ಗುಣ ಇದ್ದೇ ಇರುತ್ತೆ, ಅದು ಎಲ್ಲರಿಗೂ ಗೊತ್ತಿರಲೇಬೇಕಿಲ್ಲ. ಹಾಗಾಗಿ, ನನಗಿಷ್ಟವಿಲ್ಲದಿದ್ದರೆ ನಾನು ಸುಮ್ಮನಿರಬೇಕೇ ಹೊರತು ಅವರಬಗ್ಗೆ ಕೋಪದಲ್ಲಿ ಏನೋ ಹೇಳುವುದು ಎಷ್ಟು ಸರಿ?

ಸರಿ. ಮತ್ತೆ ಏನೇನೋ ಬರಿಯುತ್ತಿದ್ದೆನಿ ಅನ್ನಿಸ್ತಿದೆ... ನಾನು ಈಥದ ಮಾತಾಡೋವಾಗೆಲ್ಲಾ ನನ್ನ ಹೆಂಡತಿ ’ನೀವು ತೊಂಬತ್ತು ವರ್ಷದವರಂತೆ ಮಾತಾಡ್ತಿರ ಈಗ್ಲೆ, ಮುಂದೆ ನನ್ನ ಗತಿಯೇನು’ ಅಂತ ಅವಳ ಮುದ್ದಾದ ಮುಖದಲ್ಲಿ ಆತಂಕತುಂಬಿ ಹೇಳೋದು ನೋಡಿ ತುಂಬಾಸಲ (ಒಳಗೊಳಗೇ) ನಕ್ಕಿದ್ದೇನೆ. ನಿಜವಾಗ್ಲೂ ನಂಗೆ ತೊಂಬತ್ತು ಅಲ್ಲಾರಿ... :(

Tuesday, August 21, 2007

ಇದು ನಮ್ಮ...

ಅದೊಂದು ೧೫ರಿಂದ ೨೦ ಅಡಿ ಎತ್ತರದ ಕಟ್ಟಡ. ಸುಮಾರು ೪೦ ಅಡಿ ಉದ್ದ ಮತ್ತೆ ೩೦ ಅಡಿ ಅಗಲದ ಕೋಣೆಯನ್ನ ಆ ಕಟ್ಟಡದಲ್ಲಿ ಮಾಡಿದ್ದಾರೆ. ಕೋಣೆಯ ಒಳಗೆ ಹೋಗಲು ಎರಡು ಮೆಟ್ಟಿಲುಗಳಿವೆ – ಕಟ್ಟಡದ ಎಡಭಾಗಕ್ಕೆ. ಮೆಟ್ಟಿಲು ಹತ್ತಿದ ತಕ್ಷಣ ಕಟ್ಟಡದ ಉದ್ದಕ್ಕೂ ಇರೋ ಜಗಲಿ ಬರುತ್ತೆ. ಅದನ್ನ ಧಾಟಿದರೆ ಕೋಣೆಗೆ ಪ್ರವೇಶ. ಆ ಕೋಣೆಯ ಪ್ರವೇಶವಾದ ಕೂಡಲೆ ಎದುರಿಗೋದು ಮೇಜು ಮತ್ತೆ ಕುರ್ಚಿ ಇದೆ. ಹಾಗೇ ಅಲ್ಲೇ ನಿಂತು ಬಲಕ್ಕೆ ತಿರುಗಿದರೆ ಸಾಲಾಗಿ ನಾಲ್ಕೈದು ಮಣೆಗಳಿವೆ. ಪ್ರತಿಯೊಂದು ಸಾಲಿನಲ್ಲೊ ಮಧ್ಯ ಸ್ವಲ್ಪ ಜಾಗ ಬಿಟ್ಟಿದ್ದಾರೆ – ಮಣೆಗಳ ಮಧ್ಯ – ಮುಂದಿನಿಂದ ಹಿಂದಿನವರೆಗೆ ಓಡಾಡೋಕೆ. ಬಲಭಾಗದ ಗೋಡೆಗೆ ಅವುಚಿಕೊಂಡಂತೆ ಎರಡು ಬೆಂಚು ಹಾಕಿದೆ. ಗಿಜಿ-ಗಿಜಿ ಅಂತ ಮಾತಾಡೋ ಶಬ್ಧ ಯಾವಾಗಲೂ. ಮಧ್ಯೆ ಮಧ್ಯೆ “ಏಯ್! ಏಯ್!!” ಅನ್ನೋ ಮಾತುಗಳು ಒಂದ್ ಕಡ್ಡಿಯನ್ನು ಆ ಮೇಜಿನಮೇಲೆ ಹೊಡೆದಾಗ ಬರೋ ’ಠಪ್’ ಅನ್ನೋದರಜೊತೆಗೆ ಕೇಳುತ್ತೆ. ಆಗ ಗಿಜಿ-ಗಿಜಿ ಸ್ವಲ್ಪ ಕಡಿಮೆ ಯಾಗುತ್ತೆ. ಒಂದೆರಡು ನಿಮಿಷಗಳಷ್ಟೆ! ಮತ್ತೆ ಗಿಜಿ-ಗಿಜಿ ಶುರು!

ಸರಿ, ಮೇಜಿನ ಹಿಂದಿದ್ದ ಕುರ್ಚಿಯಮೇಲೆ ಕುಳಿತಿದ್ದ ಮಧ್ಯವಯಸ್ಕ ಈಗ ಎದ್ದ. ಮೇಜಿನ ಹಿಂದಿದ್ದ ಸಣ್ಣ ಸಣ್ಣ ಮಕ್ಕಳನ್ನು ನೋಡಿ, “ಏಯ್! ಎಲ್ಲಾರೂ ಅ, ಆ, ಇ, ಈ ಬರೀರಿ. ಬಂದು ನೋಡ್ತಿನಿ ಈಗ” ಅಂದ್ರು. ಆ ಪಿಳ್ಳೆಗಳು ಮಣೆಯ ಕೆಳಗೆ ಇಟ್ಟ ಹಳೆಯ ಮಾಸಿದ ಕೆಂಪು-ನೀಲಿ, ಹಸಿರು-ಬಿಳಿ, ಹೀಗೆ ಹಲವಾರು ಬಣ್ಣ-ಬಣ್ಣದ ಕೈ ಚೀಲಗಳನ್ನ ಎಳೆದು ಅದರೊಳಗಿದ್ದ ಒಂದು ಕಪ್ಪಗಿನ ಸ್ಲೇಟು ತಗೋಳತ್ವೆ. ಕೆಲವು ತಗಡಿನಿಂದ ಮಾಡಿ ಮರದ ಕಟ್ಟು ಹಾಕಿದಾವಾದ್ರೆ, ಇನ್ನು ಕೆಲವು ಬಳಪದ ಕಲ್ಲಿನಿಂದ ಮಾಡಿದವು. ಕೆಲವಕ್ಕೆ ಕಟ್ಟೇ ಇಲ್ಲ. ಹೊಡೆತ ತಪ್ಪಿಸಿಕೊಳ್ಳಕ್ಕೆ ಬರೀಲೇ ಬೇಕು.

ಈ ಪಿಳ್ಳೆಗಳು ಇಷ್ಟೆಲ್ಲಾ ಮಾಡೊಹೊತ್ಗೆ, ಆ ಮಧ್ಯ ವಯಸ್ಕ ಎರಡನೇ ಮಣೆಯಲ್ಲಿದ್ದವರ ಬಳಿ ಹೋಗಾಗಿತ್ತು. ಅವರಿಗೆ “ಪುಸ್ತಕ ತಂದಿದೇರೇನ್ರೋ ಎಲ್ಲಾ?” ಅಂತ ಗದರಿಸಿದ್ರು. ಎಲ್ಲಾರೂ ಮತ್ತೆ ಅದೇ ಮಾಸಿದ ಕೈ ಚೀಲಗಳಿಂದ ಇದ್ದ ಎರಡೇ ಪುಸ್ತಕಗಳಿಂದ ಒಂದನ್ನು ತೆಗೆದರು. ಹೆಚ್ಚೂಕಡಿಮೆ ಎಲ್ಲರ ಪುಸ್ತಕಗಳೂ ಹರಿದಿವೆ. ಮೊದಲೆರಡು ಮತ್ತೂ ಕೊನೆಯ ಹಲವಾರು ಪುಟಗಳೇ ಕಾಣೆಯಾಗಿವೆಯಾದರೂ ಪುಸ್ತಕವಂತೂ ಇದೆ! ಸರಿ, ’ಈತ ಗಣಪ. ಈಶನ ಮಗ ಗಣಪ’ ಓದಿಸಿಯಾಯ್ತು. ಇದು ಒಂದನೇ ತರಗತಿಯ ಮೊದಲನೇ ಪಾಠ!

ಮುಂದಿನವು ಅಕ್ಷರಮಾಲೆ ಬೆರೆಯುವಾಗ, ಅವರ ಹಿಂದಿನವು ಗಣಪ-ಈಶನ ಪಾಠ ಒಪ್ಪಿಸುವಾಗ ಅವರ ಹಿಂದೆ ಕೂತಿದ್ದ ಮಕ್ಕಳು ಎರಡನೇ ತರಗತಿಯ ಕನ್ನಡ ಮತ್ತು ಜೊತೆಗಿನದ್ದು ಓದುತ್ತಿದ್ದವು. ಓದುತ್ತಿದ್ದರೋ ಅಥವಾ ಹಾಗೆ ನಟಿಸುತ್ತಿದ್ದರೋ ಗೊತ್ತಿಲ್ಲ ಯಾಕೇಂದ್ರೆ ಸ್ವಲ್ಪ ಮಟ್ಟಿಗೆ ಗಿಜಿ-ಗಿಜಿ ಇತ್ತು! ಕೆಲವು ಮಗ್ಗಿ ಬಾಯಿ ಪಾಠ ಮಾಡುತ್ತಿದ್ದವು.

ಇನ್ನೊಂದು ಮೂಲೆಯಲ್ಲಿ ಒಂದು ಕಬ್ಬಿಣದ ಪೆಟ್ಟಿಗೆಯಿದೆ. ಆದರ ಪಕ್ಕದಲ್ಲಿ ಒಂದು ನೈಲಾನ್ ಚೀಲ. ಇವೆರಡೂ ನಾಲ್ಕೈದು ಇಟ್ಟಿಗೆಗಳ ಮೇಲೆ ಇಟ್ಟಿದ್ದಾರೆ. ಇಟ್ಟಿಗೆಗಳನ್ನ ಎರಡು ಅಂಗುಲದಷ್ಟು ಎತ್ತರದ ಮರಳಿನ ಕಟ್ಟೆ ಕಟ್ಟಿ ನೀರು ಹಾಕಿದ್ದಾರೆ – ಇರುವೆಗಳು ಚೀಲದಲ್ಲಿರುವ ತಿಂಡಿಗೆ ಹತ್ತಬಾರದು ಅಂತ.

ನಿಮಗೆ ಇಷ್ಟು ಹೊತ್ತಿಗೆ ಗೊತ್ತಾಗಿರಬೇಕು ನಾನು ಏನು ಹೇಳುತ್ತಿದ್ದೇನೆ ಅಂತ. ಇದು ನಮ್ಮ ಹಳ್ಳಿಗಳ ಏಕೋಪಾಧ್ಯಾಯ “ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗಳ” ಪರಿಸ್ಥಿತಿ. ಒಂದರಿಂದ ನಾಲ್ಕನೇ ತರಗತಿಯ ಮಕ್ಕಳು ಒಂದೇ ಕೋಣೆಯಲ್ಲಿ ಓದಬೇಕು. ಉಪಾಧ್ಯಾರಯೂ ಒಬ್ಬರೆ. ಅವರು ಒಂದು ತರಗತಿಯ ಒಂದು ಪಾಠ ಮುಗಿಸಿ ಮತ್ತೊಂದಕ್ಕೆ ಹೋಗಬೇಕು. ಇಂಥಾ ಶಾಲೆಗಳು ನೂರಾರು-ಸಾವಿರಾರು. ನಾನು ಓದುವಾಗ ನನ್ನ ಊರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿದ್ದ ಶಾಲೆಗಳೆಲ್ಲಾ ಇವೇ. ಕೆಲವರು ಸ್ವಲ್ಪ ಭಾಗ್ಯಶಾಲಿಗಳು. ಯಾಕೆಂತಿರ? ಅವರೇನಾದರೂ ’ಗ್ರಾಮ’ ಅಂತ ಕರೆಸಿಕೊಳ್ಳೊ ಊರಿನಲ್ಲಿದ್ದರೆ ಅವರಿಗೆ ’ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ’ ನಲ್ಲಿ ಓದೋ ಅವಕಾಶ ಇರುತ್ತೆ. ಏಳನೇ ತರಗತಿಯವರೆಗೆ ಇರತ್ತೆ ಆ ಶಾಲೆಯಲ್ಲಿ. ಅಲ್ಲಿಯ ಪರಿಸ್ಥಿತಿ ಸ್ವಮ್ಪ ಉತ್ತಮ. ನಾನು ನೋಡಿದ ಇಂಥಹ ಒಂದು ಶಾಲೆಯಲ್ಲಿ ಐದು ಕೋಣೆಗಳು. ಒಂದು “office room” ಅಂತ ಆಗಿತ್ತು. ಇನ್ನುಳಿದ ನಾಲ್ಕು ಕೋಣೆಗಳು: ಒಂದರಲ್ಲಿ ಒಂದು ಮತ್ತು ಎರಡನೇ ತರಗತಿ, ಇದೇ ಕೋಣೆಯ ಜಗುಲಿಯಲ್ಲಿ ಶಿಶುವಿಹಾರದ ಚಿಳ್ಳೆಗಳು; ಮತ್ತೊಂದರಲ್ಲಿ ಮೂರನೆ ಮತ್ತು ನಾಲ್ಕನೇ ತರಗತಿ, ಮತ್ತೊಂದರಲ್ಲಿ ಐದನೇ ತರಗತಿ – ಇದು ಸ್ವಲ್ಪ ದೊಡ್ಡದು ಯಾಕೇಂದ್ರೆ ನಮ್ಮಾರಿನ ಸುತ್ತಲಿನಿಂದೆಲ್ಲಾ ಉತ್ತೀರ್ಣರಾದ ಹುಡುಗರು ಇಲ್ಲಿಗೇ ಐದನೆ ತರಗತಿಗೆ ಬರೋದು; ಆರನೇ ಮತ್ತು ಏಳನೇ ತರಗತಿಗಳು ಅವರದೇ ಕೊಠಡಿಗಳು. ಏಳನೇ ತರಗತಿ ಹಿಡುಗರಿಗೆ ಮಾತ್ರ ಸಂಪೂರ್ಣವಾಗ್ ಬೆಂಚುಗಳು! ಉಳಿದೆಲ್ಲಾ ಹುಡುಗರು ಮಣೆಯ ಮೇಲೆಯೇ ಕೂರಬೇಕು. ಒಟ್ಟು ಸುಮಾರು ೫೦೦-೬೦೦ ಮಕ್ಕಳು ಇಲ್ಲಿ ಓದುತ್ತಾರೆ. ಉಪಾಧ್ಯಾರರು ಮಾತ್ರ ೫ ಅಥವಾ ೬ ಮಂದಿ. ಏನಿದು ಯಾವುದೋ News channel ನಲ್ಲಿ ಬರ್ಬೇಕಿರೋ ವರದಿ ಇಲ್ಲಿ ಅಪ್ಪಿತಪ್ಪಿ ಬಂತೇ ಅನ್ಕೋತಿದೀರ? ಇಲ್ಲ. ಇದು ನಿಜ. ಎಲ್ಲಿ ಬಂದರೇನು ಸ್ವಾಮಿ?

ಇದು ಯಾವುದೋ ಓಬೀರಾಯನ ಕಾಲದ ಕಥೆ ಅಂತಿದ್ದೀರ? ಅಲ್ಲ. ಈಗಕೂಡ ನಮ್ಮ ಹಳ್ಳಿಗಳ ಶಾಲೆಗಳ ಪರಿಸ್ಥಿತಿ ಇದೇ. ಸ್ವಲ್ಪ ಚೆನ್ನಾಗಿದೆ ಅಂತ ಕೇಳುತ್ತಿದ್ದೀನಿ – ಹಲವಾರು ಏಕೋಪಾಧ್ಯಾಯ ಪ್ರಾಥಮಿಕ ಶಾಲೆಗಳನ್ನ ಹಿರಿಯ ಪ್ರಾಥಮಿಕ (ಅಂದರೆ middle school) ಶಾಲೆಗಳನ್ನಾಗಿ ಮಾಡಿದ್ದಾರಂತೆ.

ಇಂಥಾ ಶಾಲೆಗಳಲ್ಲಿ ಓದುತ್ತಿರುವ ಹುಡುಗರಿಗೆ ಇಷ್ಟು ಕಷ್ಟ ಇದೆ ಅಂತ ಬೆಂಗಳೂರಿನಲ್ಲಿರುವ ಮಂದಿಗೆ ಹೇಗೆ ಗೊತ್ತಾಗಬೇಕು? ಐದನೇ ತರಗತಿಯಲ್ಲಿ ಮೊದಲಬಾರಿಗೆ ಆಂಗ್ಲ ಭಾಷೆ ಪ್ರಾರಂಭ. ಅಲ್ಲಿನ ಹುಡುಗರಿಗೆ ಐದನೇ ತರಗತಿಯಲ್ಲೇ A, B,C, D ಕಲಿತು ಅದೇ ವರ್ಷ ತಥೆಗಳನ್ನೆಲ್ಲಾ ಓದಬೇಕು. ಇದೊಂಥರಾ ಮುದ್ದಣ ಹೇಳಿದಂತೆ ನೀರಿಳಿಯದ ಗಂಟಲಲ್ಲಿ ಕಡುಬುತುರುಕಿದಂತಾಯ್ತು. ಅಲ್ಲಿನ ಉಪಾಧ್ಯಾಯರು ಆಂಗ್ಲ ಭಾಷೆಯನ್ನ ಕೇವಲ ಒಂದುಬಾರಿ ಓದಿ ಅದನ್ನ ಕನ್ನಡಕ್ಕೆ ತರ್ಜಿಮೆ ಮಾಡುತ್ತಾರೆ. ಮಾತು-ಕಥೆಗಳೆಲ್ಲಾ ಕನ್ನಡವೇ. ಆದು ನಮ್ಮ ಆಡು ಭಾಷೆ. ಸಹಜವಾಗಿ ಕನ್ನಡವೇ ಮುಂದು. ಇದೆಲ್ಲಾ ಮುಗಿಸಿ ಯಾರಾದರೂ ಹುಡುಗರು ಮುಂದೆ ಪ್ರೌಢಶಾಲೆಗೋ ಅಥವಾ pre-universityಗೋ ಆಂಗ್ಲ ಮಾಧ್ಯಮಕ್ಕೆ ಸೇರಿದರೆಂದರೆ ಮುಗಿಯಿತು. ಮೊದಲು ಅವರ ಕಣ್ಣುಗಳಲ್ಲಿ ಧಾರಾಕಾರವಾಗಿ ಗಂಗೆ ಹರಿಯುತ್ತಿರುತ್ತಾಳೆ – “ನಾನೇಕೆ ಇಂಥಾ ತಪ್ಪು ಮಾಡಿದೆ” ಅಂತ. ಅದು ಎರಡೂ ಆಗಬಹುದು, ಮೊದಲಿಂದ ಯಾಕೆ ಆಂಗ್ಲ ಭಾಷೆಯಲ್ಲಿ ಓದಲಿಲ್ಲ ಅಂತ, ಹಾಗೂ ಈಗೇಕೆ ಆಂಗ್ಲ ಮಾಧ್ಯಮಕ್ಕೆ ಸೇರಿದೆ ಅಂತ. ಅವರು ಆಂಗ್ಲ ಮಾಧ್ಯಮಕ್ಕೆ ಹೋಗದಿದ್ದರೆ ಅವರ ಆಂಗ್ಲ ಭಾಷೆಯ ಮೇಲಿನ ಹಿಡಿತ ಚೆನ್ನಾಗುವುದೇ ಇಲ್ಲ. ಅದಿಲ್ಲದಿದ್ದರೆ ಮುಂದೆ ಓದಬೇಕೆನ್ನುವ ಹಂಬಲ??! ಅದನ್ನು ಹೇಗೆ ಪರಿಹರಿಸಿಕೊಳ್ಳೋದು? ಅದಕ್ಕೆ ಈಗ ಪರಿಶ್ರಮ ಪಡಲೇ ಬೇಕು. ಕಾಲೇಜಿಗೆ ಪಟ್ಟಣಗಳಿಗೆ ಓದಲು ಬರೋ ಇದೇ ಹುಡುಗರು ಅಲ್ಲಿನ ಆಂಗ್ಲಭಾಷಾ ಪರಿಣತ ಹುಡುಗರ ಜೊತೆ ಪ್ರತಿಸ್ಪರ್ಧಿಯಾಗಿ ಇಳಿಯಲೇಬೇಕು. ಹಳ್ಳಿಗಳಿಂದ ಬಂದ ಹುಡುಗರು ಯಾಕೆ ಸ್ವಲ್ಪ ಹಿಂದೆ ಉನ್ನತ (ಆಂಗ್ಲವನ್ನೊಳಗೊಂಡ) ಶಿಕ್ಷಣದಲ್ಲಿ ಅಂದರೆ ಇದೇ ಕಾರಣಕ್ಕಾಗಿ. ಆದರೆ ಈ ಸ್ಪರ್ಧೆ ಸುಲಭವಾಗಿ ಎದುರಿಸಲು ಈ ಹಳ್ಳಿ ಮಕ್ಕಳಿಗೆ ಸಾಧ್ಯವೇ ಅಂತಿರಾ? ಇಲ್ಲ! ಸಾಧ್ಯವೇ ಇಲ್ಲ. ಒಂದು ಪಟ್ಟಣದ ಹುಡುಗರ ಆಡುಕೊಳ್ಳುವ ಹಾಗು ಅವಮಾನವನ್ನ ಮೊದಲು ಎದುರಿಸಬೇಕು. ಆಮೇಲೆ ಪಠ್ಯಕ್ರಮಕ್ಕೆ!

ಪ್ರಾಥಮಿಕ ಮಟ್ಟದಲ್ಲಿ ಮಕ್ಕಳಿಗೆ ಅಂಗ್ಲ ಭಾಷೆ ಬೇಕು ಅಂತ ಒಂದೆರಡು ವರ್ಷಗಳ ಹಿಂದೆ ವಾದ ವಿವಾದಗಳು ನಡೆದು ಅಂಗ್ಲ ಭಾಷೆ ಸೇರ್ಪಡೆ ಆಗುತ್ತದೆಂಬ ಆಶಯ ದಿನಪತ್ರಿಕೆಗಳಲ್ಲಿ ಬಂದಾಗ ನಾನು ಖುಷಿಪಟ್ಟೆ. ಈಗ ನಮ್ಮ ಹಳ್ಳಿಯ ಮಕ್ಕಳೂ ಕೂಡ ದಿಳ್ಳಿಯ ಮಕ್ಕಳೊಂದಿಗೆ ಸರಿಸಮವಾಗಿ ನಿಲ್ಲಲು ಅಷ್ಟೇನೂ ಕಷ್ಟವಾಗಲಿಕ್ಕಿಲ್ಲ ಅಂತ. ಆದರೆ ಅದಿನ್ನೂ ಆಗಿಲ್ಲ. ನಾನಿಲ್ಲಿ ಕನ್ನಡಾಭಿಮಾನಿಗಳ ವಿರೋಧವಾಗಿ ಮಾತಾಡುತ್ತಿಲ್ಲ. ಕನ್ನಡವೇ ಮಾಧ್ಯಮವಾಗಲಿ ಆದ್ರೆ ಅಂಗ್ಲ ಭಾಷೆ ಕೂಡ ಮಕ್ಕಳು ಓದಬೇಕು. ಅವರ ಭಾಷಾಕೋಶಗಳು ವಿಕಾಸವಾಗಬೇಕು. ಆಂಗ್ಲಭಾಷೆ ನಮಗೇಕೆ ಬೇಕು ಅಂತ ಅದನ್ನ ಚೆನ್ನಾಗಿ ಬಲ್ಲವ ಕೆಲವರು ಹೇಳಿದರೆ – ಕೆಲ ಹೊರದೇಶಗಳು ಅವುಗಳ ಭಾಷೆಯಷ್ಟೆಯೇ ಕಲಿಯುವುದಿಲ್ಲವೇ ಅಂತ ವಾದ ಮಾಡಬಹುದು. ಆವೆಲ್ಲ ನನ್ನ ಮಟ್ಟಿಗೆ ನಿಷ್ಪ್ರಯೋಜಕ ಮಾತುಗಳು. ಪ್ರತಿಯೊಬ್ಬ ಮಗುವಿಗೂ ಮುಂದೆ ಬರಬೇಕು ಅನ್ನೊ ಹಂಬಲವಿರುತ್ತೆ. ಅದಕ್ಕೆ ಅನುಗುಣವಾದ ವಿಧ್ಯಾಭ್ಯಾಸ ಸಿಗಬೇಕು.

ಒಂದುಕಡೆ ಓದಿದೆ, ಎಲ್ಲಾ ಉನ್ನತ ಶಿಕ್ಷಣ, IT ಮೊದಲುಗೊಂಡು ಅಲ್ಲವೂ ಕನ್ನಡದಲ್ಲೇ ಇರಬೇಕು ಅಂತ. ಅದು ತುಂಬಾ ಒಳ್ಳೆಯದೇ. ಆದರೆ ಈ IT ಅನ್ನೋದನ್ನ ಪ್ರಾರಭಿಸಿದವರು ಅಂಗ್ಲರು. ಆದು ಎಲ್ಲಾಇರೋದು ಅಂಗ್ಲಭಾಷೆಯಲ್ಲಿ. ಅದು ಕನ್ನಡದಲ್ಲಿ ಈಗ ಆಗಬೇಕೆಂದರೆ ಅದನ್ನ ಕನ್ನಡಕ್ಕೆ ತರ್ಜಿಮೆ ಮಾಡಬೇಕು. ಅದನ್ನ ಕನ್ನಡಕ್ಕೆ ತರ್ಜಿಮೆ ಮಾಡೋಕೆ ಕನ್ನಡ ಹಾಗೂ ಅಂಗ್ಲಭಾಷೆ ಎರಡನ್ನೂ ಚೆನ್ನಾಗಿಬಲ್ಲವರು ಬೇಕು. ಹೌದಲ್ಲವೆ?? ಇಲ್ಲಿ ಅಂಗ್ಲಭಾಷೆಯ ಕೊರತೆ ಕಾಣುತ್ತಿಲ್ಲವೇ? ನಮ್ಮದೇ ಭಾಷೆಯಲ್ಲಿ ಕಲಿತ ಮಕ್ಕಳು ಅದನ್ನ ತಮ್ಮ ಭಾಷೆಗಷ್ಟೇ ಅಳವಡಿಸಲು ಸಾಧ್ಯ. ಅಷ್ಟಕ್ಕೇ ಸೀಮಿತವಾಗಲಿಲ್ಲವೇ ಅವರು ಕಲಿತದ್ದು? ಅಲ್ಲಿ ಮತ್ತೆ ಅವರ ಅನುಭವ ಹಾಗೂ ಬುದ್ಧಿಯನ್ನ ಹೊರಗೆ ಹಾಕಲು ಮತ್ತೆ ಈ ಭಾಷೆ ಅಡ್ಡವಾಗಿನಿಂತಿತೇ? ಅದು ಬೇಡ. ನಮ್ಮವರು ಕನ್ನಡ ಕಲಿಯಲಿ, ಬೆಳೆಸಲಿ.. ಅದೇ ಸಮಯದಲ್ಲಿ ಪ್ರತಿಯೊಬ್ಬನಿಗೂ ಅವರದೇ ಕ್ಷೇತ್ರದಲ್ಲಿ ಬೆಳೆಯಲು ಬೇಕಾದ ಅಂಗ್ಲವೂ ಸಿಗಲಿ ಅನ್ನೋದೇ ನನ್ನ ಅಶಯ. ಸುಮ್ಮನೆ ಇಂಥಾ ದೊಡ್ಡ ದೊಡ್ಡ ಮಾತುಗಳನ್ನ ಆಡುವುದು ಸುಲಭ; ಅದನ್ನ ಬೇರೆ ದೃಷ್ಟಿಯಲ್ಲೊ ನೋಡ್ಬೇಕು. ನಮ್ಮ ಮಕ್ಕಳು ಬೆಳೆಯೋಕೆ ಬೇಕಾದ್ದರ ಬಗ್ಗೆ ಯೋಚಿಸಬೇಕು. ಕೇವಲ ಭಾಷಾವಾದಿಗಳ ಕೈಲಿ ಸಿಕ್ಕಿ ಮಕ್ಕಳ ಭವಿಷ್ಯ ಹಾಳಾಗಬರದು ಅಲ್ಲವೆ?

Thursday, August 09, 2007

ನನಗೇಕೆ ಬರೆಯೋ ಹುಚ್ಚು?

ಹೌದು, ನಾನಗೆ ಯಾಕೆ ಬರೆಯಬೇಕು ಅನ್ನಿಸ್ತಿದೆ?

ನಾನೇನೂ ಸಾಹಿತ್ಯದ ಅಸಾಮಾನ್ಯ ವಿಧ್ಯಾರ್ಥಿಯಲ್ಲ. ನನ್ನಲ್ಲಿ ನನ್ನ ಮನಸ್ಸಿನಲ್ಲಿರುವ ಎಲ್ಲಾಭಾವನೆಗಳಿಗೂ ರಂಗು ಕೊಟ್ಟು ಬರೆಯಲು ಗೊತ್ತಿಲ್ಲ. ಕಥೆ ಸೃಸ್ಟಿ ಮಾಡಿ ಅಭ್ಯಾಸವಿಲ್ಲ. ನಾನು ಎಂದೋ ಓದಿದ್ದ ಸುಂದರ ಕನ್ನಡದ ಬಳಕೆ ನನ್ನಿಂದ ಬರವಣಿಗೆಯಲ್ಲಿ ಬಹಳಷ್ಟು ದಿನಗಳಿಂದ ಮೂಡಿಯೇಯಿಲ್ಲ. ನನಗೆ ನನ್ನ ಮೇಲೆಯೇ ಕೋಪ ಬರುವುದುಂಟು. ಯಾಕೇ ನಾನು ನನ್ನದೇ ಒಂದು ಅಂಕಣ ಪ್ರಾರಂಭಿಸಿದೆ ಅಂತ. ನಾನು ಅಂತರ್ಮುಖಿ ಅಂತ ನನಗೆ ಗೊತ್ತು ಆದ್ರೂ ಈ ಸಾಹಸ ಯಾಕೆ ಮಾಡಿದೆ? ನನ್ನ ಕೈಲಿ ನಿಜವಾಗಿ ನನ್ನ ಮನಸ್ಸಿನಲ್ಲಿರುವುದೆಲ್ಲವನ್ನೂ ಇಲ್ಲಿ ಕೆಡುಹಲು ಸಾಧ್ಯವ? ಅಥವಾ ಕೇವಲ ನನ್ನ ಮನಸ್ಸಿನಲ್ಲಿರುವುದನ್ನೆಲ್ಲಾ ಇಲ್ಲಿ ಬರೆದು ನಾನು ಗಳಿಸಿದ್ದಾದರೂ ಏನು? ನಾನು ಬರೆದದ್ದು ನನ್ನಂಥ ಬೇರೆ ಜನರೂ ಓದಲಿ ಅಂತ್ಲ? ಹಾಗಾದರೆ ನನ್ನ ಮನಸ್ಸಿನಲ್ಲಿರುವುದು ಅವರಿಗೆಲ್ಲಾ ಹಿಡಿಸೀತ? ಹಾಗೆ ಬರೆಯಲು ನನ್ನಿಂದ ಸಾಧ್ಯನ? ನನಗೆ ಎಲ್ಲರನೂ ಮೆಚ್ಚಿಸುವಂತೆ ಬರೆಯಬಲ್ಲ ಶಕ್ತಿಯಿಲ್ಲ ಅನ್ನೋದು ಚೆನ್ನಾಗಿ ಬಲ್ಲೆ. ಏನೋ ಬರೆದರೂ ಕೂಡ ಅನನ್ನ ಯಾರಾದರೂ ಇಷ್ಟಪಡುತ್ತಾರೆ ಅನ್ನೋದು ಕೂಡ ಖಾತ್ರಿಯಿಲ್ಲ. ಆದ್ರೂ ಬರೆಯಬೇಕು ಅನ್ನೊ ಹಂಬಲ ಯಾಕೆ ನನ್ನ ಬಿಡುತ್ತಿಲ್ಲ? ನಾನು ಇದೇ ಪ್ರಶ್ಣೆಯನ್ನ ಹಲವು ಬಾರಿ ನನಗೆ ನಾನೇ ಹಾಕಿಕೊಂಡಿದ್ದೇನೆ. ಆದರೆ ಸಮಂಜಸವಾದ ಉತ್ತರ ಮಾತ್ರ ಸಿಕ್ಕಿಲ್ಲ ನನಗೆ.

ಹೋಗಲಿ. ನನಗನ್ನಿಸಿದೆ ಏನನ್ನಿಸುತ್ತೋ ಅದನ್ನ ಇಲ್ಲಿ ಬರೆಯೋಣ ಅಂತ. ಸರಿ. ಹಾಗಂತ ಯಾರೂ ಓದದಿದ್ರೆ? ಹೌದಲ್ಲ, ಯಾರೂ ಓದದಿದ್ದಮೇಲೆ ನಾನು ಬರೆದು ಏನು ಪ್ರಯೋಜನ? ಛೆ! ನಾನು ನನಗನಿಸಿದ್ದನ್ನ ಮಾತ್ರ ಬರೆಯಬೇಕು. ನಾನು ಯಾರಿಗೂ ಬೇಜಾರು ಮಾಡದಿದ್ದರೆ ಅದು ಸರಿ. ಎಲ್ಲದನ್ನೂ ನಾನು ಇಲ್ಲಿ ಬರೆದಿಡಬಹುದು ಆಗ. ಆಲ್ಲವೆ? ಹುಂ. ಅಷ್ಟಿದ್ದರೆ ಸಾಕು ನನ್ನ ಬರವಣಿಗೆಯಲ್ಲಿ. ಹಾಗದರೆ ನಾನು ನನ್ನ ಮನಸ್ಸಿನಲ್ಲಿರುವುದನ್ನ ಬರೀತಿಲ್ಲ. ನಾನು ಬೇರೆಯವರನ್ನು ಒಲಿಸಲು ಬರೀತಿದ್ದೀನಾ? ನನಗೋಸ್ಕರ ಅಲ್ಲ? ಮತ್ತೆ ನಾನು ಬರೆದದ್ದು ಬೇರೆಯವರಿಗೆ ಹಿಡಿಸದಿದ್ದರೆ? ಮತ್ತೆ ನಾನು ಈ ಅಂಕಣ ನನಗಲ್ಲ... ಬೇರೆಯವರಿಗೆ ಪ್ರಾರಂಭಿಸಿದ್ದು? ಹಾಗಾದ್ರೆ ಇದು ನನ್ನದು ಹೇಗಾಗುತ್ತೆ? ಸರಿ. ನನಗೆ ನನ್ನ ಭಾವನೆಗಳನ್ನಷ್ಟೂ ಬರೆಯುವ ಹಕ್ಕಿದೆ. ನಾನೂ ಬರೆಯುತ್ತೇನೆ. ಯಾರು ನೋಡಲಿ ಬಿಡಲಿ. ಶಿವರುದ್ರಪ್ಪನವರು ಹೇಳಿದಂತೆ:

ಯಾರು ಕಿವಿಮುಚ್ಚಿದರೂ ನನಗಿಲ್ಲ ಚಿಂತೆ...

ನಾನೂ ಹಾಗೇನೆ ಇದ್ದುಬಿಡಬೇಕು ನನಗನ್ನಿಸಿದ್ದು ಬರೆದು ಅಂದ್ಕೊತೀನಿ. ಅದನ್ನೇ ನನ್ನ ಜೀವನದಲ್ಲಿ ಅವಳವಡಿಸಿಕೊಳ್ಳುತ್ತಿದ್ದೀನಿ. ಹಾಂ, ನಾನು ನನಗನ್ನಿಸಿಸ್ಸು ತಪ್ಪೋ ಸರಿಯೋ ಮಾಡೇ ಮಾಡುತ್ತೇನೆ ಅಂತಲ್ಲ. ಸ್ವಲ್ಪ ನನ್ನ ಅನಿಸಿಕೆಗಳನ್ನ ಪರಾಂಬರಿಸಿ, ನಾನು ನಾಲ್ಕಾರು ದೃಷ್ಟಿಯಿಂದ ನೋಡಿ ಅದು ತಪ್ಪಲ್ಲ ಅನ್ನಿಸಿದಮೇಲೇನೇ ಮಾಡೋಕೆ ಪ್ರಯತ್ನ ಮಾಡುತ್ತಿದ್ದೇನೆ. ನಮಗೆಲ್ಲಾ ಚಿಕ್ಕವಯಸ್ಸಿನಿಂದ ’ಬೇರೆಯವರು ಏನನ್ನುತ್ತಾರೆ, ನಮ್ಮ ಬಗ್ಗೆ ಏನಂದುಕೊಳ್ಳುತ್ತಾರೆ’ ಅನ್ನೋದನ್ನ ನಮ್ಮ ತಲೆಯಲ್ಲಿ ತುಂಬಿರುತ್ತಾರೆ ದೊಡ್ಡವರು. ಹಾಗಾಗಿ ನಾವು ಏನೇ ಮಾಡಿದರೂ ಬೆರೆಯವರನ್ನು ಮನಸ್ಸಿನಲ್ಲಿಟ್ಟುಕೊಂಡೇ ಕೆಸಲ ಪ್ರಾರಂಭಿಸುತ್ತೀವಿ, ಯೋಚಿಸುತ್ತೀವಿ, ಎಲ್ಲಾ. ಅದಕ್ಕೇ ಶಿವರುದ್ರಪ್ಪನವರು ’ಎದೆತುಂಬಿ ಹಾಡಿದೆನು...’ ಕವಿತೆಯಲ್ಲಿ ನಮಗೋಸ್ಕರ ಬದುಕೋಣ, ನಮಗೋಸ್ಕರ ಬಾಳೋಣ ಅಂತ ತಿಳಿಹೇಳಿದ್ದಾರೆ. ಜೊತೆಗೆ ಅವರು ಸುತ್ತಲಿನವರನ್ನು ಕಡೆಗಣಿಸಿಲ್ಲ - ಅಥವ ಪರಿವೆ ನನಗೆ ಬೇಡ ಅಂದಿಲ್ಲ.

ಇವನು ತುಂಬಾ ಉದ್ಧಟನಾಗಿ ಬರೀತಾಯಿದ್ದಾನೆ ಅನ್ನಿಸುತ್ತಿರಬಹುದು ಎಷ್ಟೋಜನಕ್ಕೆ. ಸುಮ್ಮನೆ ಮನಸ್ಸಿಗೆ ಬಂದಂತೆ ಕೆಲಸಕ್ಕೆ ಬಾರದ್ದು ಗೀಚುತ್ತಿದ್ದಾನೆ ಅಂತ. ನಿಜ! ಹಾಗನಿಸುವುದು ಸಾಮಾನ್ಯ ಯಾಕೆಂದ್ರೆ ’ನೀನೇ ಅಂದ್ರೂ ನನಗೆ ಏನೂ ಆಗಲ್ಲ’ ಅಂದ್ರೆ ಅವನನ್ನು ’ಮನುಷ್ಯ ಮುಟ್ಟಿದ ಗುಬ್ಬಿ’ ರೀತಿ ನೋಡೋದೇ ಬಂದಿದೆ ನಮಗೆ. ನನಗೆ ಹಿಡಿಸದ್ದನ್ನ ಯಾರಾದರೂ ನಮಗೆ ಹೇಳಿದರೆ ಅದನ್ನ ತಳ್ಳಿಹಾಕಬಹುದು ಆದರೆ ಸಂಪೂರ್ಣವಾಗಿ ಎಲ್ಲರೂ ಹೇಳಿದ್ದನ್ನಲ್ಲ.. ಯಾಕಂದ್ರೆ ನಾವೆಲ್ಲ ಸಂಘಜೀವಿಗಳು

ಹೂಂ! ಅಂತೂ ನಾನು ಯಾಕೆ ಬೆರೆಯೋಕೆ ತೀರ್ಮಾನಿಸಿದೆ ಅಂತ ನನಗೆ ಗೊತ್ತಗ್ತಿರೋ ಹಾಗಿದೆ... ನಾನು ನನಗೋಸ್ಕರ ಬರೀತೀನಿ ಅಂದ್ಕೋಂಡಮೇಲೆ ನನಗೋಸ್ಕರ ಬರೀಬೇಕು. ಬೇರೆಯವರು ಅದಕ್ಕೆ ಸ್ಪಂದಿಸುತ್ತಾರೋ ಇಲ್ಲವೊ ಅದರ ಗೋಜಿಗೆ ನಾನು ಹೋಗಬಾರದು. ಆದರೂ, ನನಗೆ, ನನ್ನ ಅನಿಸಿಕೆಗಳಿಗೆ ಸುತ್ತಮುತ್ತಲಿನವರು ಅದಕ್ಕೆ ಪ್ರತಿಕ್ರಯಿಸಿದರೆ ನಾನೇ ಧನ್ಯ!