Sunday, November 12, 2006

ಬೆಂಗಳೂರಿನ ಪುಸ್ತಕ ಜಾತ್ರೆ

ಸುಮಾರು ಎರಡು ವರ್ಷಗಳ ನಂತರ ನಿನ್ನೆ ಶನಿವಾರ ನಾನು B.M.T.C. busನಲ್ಲಿ ಹೊರಟೆ. ಬೆಂಗಳೂರಿನ traffic problemಗಳಿಗೆ ಒಂದು ದಿನ ನನ್ನ ಕಾರು ಹೊರತಾಗಿದ್ದರೆ ಸ್ವಲ್ಪ ಮಟ್ಟಿಗಾದರೂ ಸಹಾಯವಾಗಬಹುದೇನೊ ಅನ್ನೊ ಒಂದೆ ಒಂದು ಆಸೆ ಹೊತ್ತಿದ್ದೆ. ಒಂದುಥರ ಅನುಭವ ಚೆನ್ನಗಿಯೇ ಇತ್ತು. ನಾನು ಬನ್ನೆರುಘಟ್ಟ ರಸ್ತೆಯಿಂದ ಮೇಖ್ರಿ ಸರ್ಕಲ್ ನಲ್ಲಿ ನಡೆಯುತ್ತಿದ್ದ book fairಗೆ ಹೋಗಬೆಕಿತ್ತು. ಬೆಳಗ್ಗೆ ದಿನಪತ್ರಿಕೆಯಲ್ಲಿ ಅದರ ಜಾಹಿರಾತು ನೋಡಿದಮೇಲೆ ತುಂಬಾ ಆಸೆಯಾಗಿತ್ತು. ನನಗೆ ಸ್ವಲ್ಪ ಪುಸ್ತಕಗಳ ಬಗ್ಗೆ ಆಸಕ್ತಿಯಿದೆ. ಆದರಲ್ಲೂ ಈಚೆಗೆ ಸ್ವಲ್ಪ ಜಾಸ್ತಿಯಾಗಿದೆ. ಸಿಕ್ಕ ಪುಸ್ತಕಗಳನ್ನೆಲ್ಲಾ ಕೊಂಡು ತರುತ್ತಿರುತ್ತೆನೆ... ನನ್ನ ಅರ್ಧಾಂಗಿ 'ಬರೇ ತರ್ತಿರ, ಅದನ್ನಲ್ಲ ಯಾವಾಗ ಓದುತ್ತಿರ; ನಿಮಗೆ ಸಮಯಯೆಲ್ಲಿದೆ? ಮೊದಲು ತಂದಿರೊ ಎಲ್ಲಾ ಪುಸ್ತಕ ಓದಿ ಮುಗಿಸಿ' ಅಂತ ರೇಗಿಸುತ್ತಿರುತ್ತಾಳೆ. ಆದರೂ ಪುಸ್ತಕ ತರೋಬುದ್ಧಿ ಹೋಗಿಲ್ಲ :(

ಸಂಜೆ ನಾಲ್ಕು ಗಂಟೆಗೆ ಮನೆಬಿಟ್ಟವ ನಾನು ಪುಸ್ತಕ ಜಾತ್ರೆ ನಡೀತಿದ್ದ ಜಾಗ ತಲುಪಿದಾಗ 5.50.. ಸ್ವಲ್ಪ ಸುದೀರ್ಘ ಪಯಣ.. ಒಂದೆ ಊರಿನ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ... :) ಅದೆ ರಾತ್ರಿ ಮಾತ್ರ ಒಂದೇ ಗಂಟೆಯಲ್ಲಿ ಮನೆ ತಲುಪಿದ್ದೆ.

ಪುಸ್ತಕ ಜಾತ್ರೆ ಏನು ಸೊಗಸಾಗಿತ್ತು ಮಾರಾಯರೆ!!... ಬಹಳ ವರ್ಷಗಳ ನಂತರ ಅಷ್ಟೊಂದು ಪುಸ್ತಕಗಳನ್ನ ಒಂದೇ ಸೂರಿನಡಿ ನೊಡಿದ್ದು... ಕನ್ನಡ, ಇಂಗ್ಲಿಷ್, ತಮಿಳು, ಹಿಂದಿ ಎಲ್ಲಾ ಭಾಷೆಯದ್ದೂ ಅಂಗಡಿಗಳು ಇತ್ತು... ಆದರಲ್ಲೂ ನಾನು ನೋಡಲು ಹೋಗಿದ್ದು ಕನ್ನಡ ಪುಸ್ತಕಗಳನ್ನ.. ನಿಜವಾಗಲೂ ಸಂತೋಷವಾಯ್ತು, ಸ್ವಾಮಿ. ನನಗೆ ತಿಳಿದಿದ್ದ ಎಲ್ಲಾ ಪ್ರಕಾಷಕರದೂ ಒಂದೊಂದು ಅಂಗಡಿ ಇತ್ತು. ಬೇಕಾದಷ್ಟು ಕನ್ನಡ ಪುಸ್ತಕಗಳು ಇದ್ದವು. ಆಷ್ಟೊಂದು ಪುಸ್ತಕಗಳನ್ನ ನೋಡಿಯೇ ನನ್ನ ಹೊಟ್ಟೆ ತುಂಬಿತ್ತು. ಎಲಾ ಅಂಗಡಿಗಳನ್ನು ಸಾಧ್ಯವಾದಷ್ಟು scanಮಾಡಿದೆ. ತಕ್ಕಷ್ಟು ಕೊಂಡೆ. ಎಲ್ಲಾ ನೋಡುವಾಗ ನನ್ನ ಹಾಫ಼್ ಶರ್ಟ್ (ಅರ್ಥಾತ್ ಪತ್ನಿ) ನನ್ನ ಜೊತೆಇಲ್ಲವಲ್ಲ ಅನ್ನಿಸಿತು. ಇಷ್ಟೊಂದು ಕನ್ನಡ ಪುಸ್ತಕಗಳನ್ನೆಲ್ಲಾ ತೊರಿಸುವ ನನ್ನ ಹಂಬಲ ಆಗ ನನ್ನಲ್ಲಿಯೇ ಉಳೀತು.. ಆಗ ನನ್ನ ಸ್ನೆಹಿತ, cousin ಮತ್ತು ನನ್ನ ಸೊದರ ಮಾವನವರನ್ನೂ ತುಂಬಾ ಸ್ಮರಿಸಿದೆ. ಆವರೆಲ್ಲರಿಗೂ ಸ್ವಲ್ಪ ಪುಸ್ತಕಗಳ ಹುಚ್ಚು ಇದೆ. ಆವರಷ್ಟೆ ಅಲ್ಲ, ನನ್ನಮ್ಮನಿಗೂ ಇದೆ. ಆದೆ ನನಗೂ ಪುಸ್ತಕದ ಹುಚ್ಚುಹಿಡಿಸಿತೊ ಏನೊ! ಚಿಕ್ಕಂದಿನಿಂದನೊ ಅಮ್ಮ ಓದುತ್ತಿದ್ದುದು ನೊಡಿ ಜೊತೆಗೆ ನನ್ನ ಕೆಲವು ಸಹವರ್ತಿಗಳ ಒಡನಾಟ ನನಗೆ ಕನ್ನಡ ಪುಸ್ತಕಗಳ ಗೀಳನ್ನ ಇನ್ನೂ ಉಳಿಸಿದೆ.

ಮೊನ್ನೆ autoನಲ್ಲಿ ಬರುವಾಗ ನಮ್ಮ ಒಬ್ಬ ಸಹೃದಯಿ ಚಾಲಕ ಕನ್ನಡದ ಸ್ಥಿತಿಗತಿಗಳ ಬಗ್ಗೆ ಚರ್ಚೆ ಶುರುಮಾಡಿದ. ನಾನೂ ಕನ್ನಡದವನೇ ಆದ್ದರಿಂದ ಮಾತನಾಡಲು ಶುರುಮಾಡಿದೆ. 'ಬೇರೆಯವರನ್ನು ನೋಡಿ ಸರ್, ನಾವೆಲ್ಲ ಅವರ ಊರಿಗೆ ಹೋದ್ರೆ, ನಾವು ಅವರ ಭಾಷೆನೆ ಕಲಿತು ಮಾತಾಡೊಹಾಗೆ ಮಾಡುತ್ತರೆ. ಇಲ್ಲಿ ಮಾತ್ರ ಅವರೆಲ್ಲ ಯಾಕೆ ನಮ್ಮ ಭಾಷೆಕಲಿಯಲ್ಲ?' ಅಂತೆಲ್ಲಾ ಎಲ್ಲರೂ ಮಾತಾಡೊದೆಲ್ಲ ನಾವು ಮಾತಾಡಿದೆವು. ಹೌದು, ಸ್ವಾಮಿ. ನಾವು ಮೊದಲು, ಸರಿಹೋಗಬೇಕು. ಬೇರೆಯವರು ಇಲ್ಲಿ ನಮ್ಮ ಭಾಷೆ ಮಾತಡುತ್ತಿಲ್ಲ ಅಂತಷ್ಟೆ ನಾವು ಹೇಳುತ್ತಿರುತ್ತೆವೆ, ಆದರೆ, ನಮ್ಮಲ್ಲಿ ಎಷ್ಟು ಜನ ಕನ್ನಡೇತರ ಭಷೆಯಲ್ಲಿ ಮಾತಾಡಿದಾಗ, ಕನ್ನಡದಲ್ಲಿ ಉತ್ತರಕೊಟ್ಟಿದ್ದೆವೆ? ಅಥವಾ ಕನ್ನಡವನ್ನು ಅವರೆಲ್ಲಾ ಕಲಿಯಬೇಕು ಅನ್ನಿಸೋಹಾಗೆ ಅವರಿಗೆ ತಿಳಿಸಿದ್ದೆವೆ? ಆದೂ ಮುಖ್ಯವಲ್ಲವೆ, ಸ್ವಾಮಿ? ನಾವು ಯಾವಾಗಲೂ ಬೇರೆಯವರು ಕಲೀತಿಲ್ಲ ಅಂತಷ್ಟೇ ಹೇಳಿದರೆ ಸಾಕಾ??
ಒಂದು ಅಂಗಡಿಯಲ್ಲಿ englishಏ ಜೀವಾಳವೇನೊ ಅನ್ನೊಹಾಗೆ ಕಾಣುತ್ತಿದ್ದ ಒಂದಿಬ್ಬರು ಕನ್ನಡ ಪುಸ್ತಕಗಳನ್ನು ವಿಚಾರಿಸುತ್ತಿದ್ದುದ್ದು ತುಂಬಾ ಖುಶಿ ತಂತು. ಆಗ ಅನ್ನಿಸಿತು, 'ಕನ್ನಡವೇ ಸತ್ಯಾ??' ಅನ್ನೊ ಕೆಲವರ ಕೊಂಕಿನ ಪ್ರಶ್ನೆಗೆ ಉತ್ತರ ನಮ್ಮ ಹತ್ತಿರ ಇದೆ, ಬರೆಯ ಹಾಸ್ಯವಲ್ಲ, ಕನ್ನಡ ಇನ್ನೂ ಸತ್ತಿಲ್ಲ, ಎಲ್ಲರಲ್ಲೂ ತುಂಬಿದೆ ಅಂತ. ಅವರು ಎಲ್ಲರೂ ಕಷ್ಟ ಅಂತ ಬಿಡೊ ಭೈರಪ್ಪನವರ ಒಂದು ದೊಡ್ಡ ಪುಸ್ತಕ ತಗೊಂಡ್ರು..
ಅಲ್ಲಿ ನಾನು ಸ್ವಲ್ಪ ದಿನದಿಂದ ಹುಡುಕುತ್ತಿದ್ದ ಅ.ನ.ಕೃ. ಅವರ ಸಂಧ್ಯಾರಾಗ ನೋಡಿದೆ, ತಂದೆ. ಬೀchiಅವರ ಭಯಾಗ್ರಫಿಯಲ್ಲಿ ಅವರ conversionಗೆ ಕಾರಣವಾದ ಪುಸ್ತಕ ಅದು ಅಂತ ಓದಿದಾಗಿನೊಂದನೂ ಸಂಧ್ಯಾರಾಗ ಓದಬೇಕು ಅಂತ ಆಸೆ ಇತ್ತು. ಇವತ್ತು ಅದನ್ನ ಓದಿದೆ. ನಾಲ್ಕು ಗಂಟೆಗಳಲ್ಲಿ ಒಂದೇ ಸಾರಿಗೆ ಯಾವುದೇ ಬ್ರೇಕ್ ಇಲ್ಲದೆ ಓದಿದೆ. ಬೀchi ಹೇಳಿದಂತೆ, ಆ ಪುಸ್ತಕೆ ಯಾರಿಗಾದರೂ ಕನ್ನಡದ ದೀಕ್ಷೆಕೊಡಿಸುತ್ತದೆ. ಓದುವಾಗ ಹಲವು ಬಾರಿ ಕಣ್ಣು ತುಂಬಿಬರುವುದು ಸಹಜ. ಕನ್ನಡಪ್ರಿಯರೆಲರೂ ಓದಲೇಬೇಕು ಅಂತ ನಾನು ಹೇಳುತ್ತೇನೆ.
ಕನ್ನಡ ಅಷ್ಟಾಗಿ ಗೊತ್ತಿಲ್ಲದ ಮಕ್ಕಳಿಗೆ ಈ ಒಂದು ಪುಸ್ತಕ ಜಾತ್ರೆ ನಿಜಕ್ಕೂ ಒಳ್ಳೆಯ weekend trip. ಅಲ್ಪಸ್ವಲ್ಪ ಪ್ರೀತಿಯಿರುವ ಎಲ್ಲಾ ಕನ್ನಡ ತಂದೆ-ತಾಯಿಯರು ಮಕ್ಕಳಿಗೆ ಈ ಜಾತ್ರೆ ಮುಗಿಯೊಕ್ಮುಂಚೆ (೧೯ನವೆಂಬರ್ ಗೆ) ತೊರಿಸಿ ಕನ್ನಡದ ಪುಸ್ತಕಗಳ ಪರಿಚಯನಾದ್ರು ಮಾಡಿಸಬೆಕು ಅಲ್ಲವೆ? :)

Tuesday, May 09, 2006

Bangalore and its developments??

ಬೆಂಗಳೂರಿನ ಬೆಳವಣಿಗೆಯ ಬಗ್ಗೆ ತುಂಬಾ ಜನ ಮಾತಾಡ್ತಿದ್ದಾರೆ. ಅದರಲ್ಲೂ ದೈನಂದಿಕಗಳಂತೂ ಅದರ ಸುರಿಮಳೇನೆ ಹರಿಸ್ತಿವೆ. ತುಂಬಾ ಬೆಳಿತಿದೆ; ಉದ್ಯಾನ ನಗರ ಅಂತ ಕರೀತಿದ್ದ ಊರು ಈಗ ಕಾಂಕ್ರೀಟ್ ಉದ್ಯಾನಗಳ ನಗರವಾಗಿದೆ!

ಇದೇ ವಿಶಯವಾಗಿ ಮೊನ್ನೆ ನಮ್ಮ ಮನೇಲಿ ಎಲ್ಲಾ ಸೇರಿದ್ದಾಗ ಮಾತು ಶುರುವಾಯ್ತು. ಒಬ್ಬರು 'ನಮಗೆ ಈಗಾಗಿರುವ developments ಗಳು ಸಾಕು. ಬೇರೆಯವರು ಬಂದು ಇಲ್ಲಿ ಸೇರಿ ಆಗ್ತಿರೊ ಸಮಸ್ಯೆಗಳು ಸಾಕಾಗಿದೆ. ಈ trafficಉ, ಪರಕೀಯರ ಹಾವಳಿ ಬೇಡಪ್ಪ! ನಮಗೆ ಈ ಗ್ರೌತ್ ಆಗದಿದ್ರೂ ಪರವಾಗಿಲ್ಲ ಸಾಕು ಅಂತ ನಿಲ್ಲಿಸಬೇಕು. ನಮ್ಮ ಬೆಂಗಳೂರು ನಮಗಿರಲಿ’ ಅಂತ ಹೆಳಿದ್ರು. ಇದು ಒಂದು ರೀತಿಯಲ್ಲಿ ಸರಿಯಿರಬಹುದು, ಆದರೆ ನಮಗೆ ಈಗಾಗಿರೋ ಬೆಳವಣಿಗೆ ಸಾಕೆ? ಬೇರೆಯವರು ಬಂದಿರೋದರಿಂದ ನಮಗೆ ಉಪಯೋಗವಾಗಿದೆಯೆ ಅಥವ ಸಮಸ್ಯೆಯಾಗಿದೆಯೆ? ನಿಜವಾಗಿ ಈಗಿನ ಬೆಂಗಳೂರಿಂದ ಹಳೆಯ ಬೆಂಗಳೂರನ್ನು ಹುಡುಕುವ ಪ್ರಯತ್ನ ಮಾಡಬೇಕಿದೆಯ?

ಈ ITಯವರಿಂದಲೇ ನಮ್ಮ real-estate ಇಷ್ಟು ದುಬಾರಿಯಾಗಿರೋದು ಅನ್ನೊ allegation ನಿಜಾನ? ಅದರಿಂದ ನಮ್ಮೆಲ್ಲರಿಗೆ/ಕನ್ನಡಿಗರಿಗೆ ಏನೂ ಸಹಾಯ ಆಗಿಲ್ಲವೆ? IT ಬಂದದ್ದು ಒಳ್ಳೆಯದೊ ಅಲ್ಲವೊ? ಯೋಚಿಸಬೇಕಾದ ಸಂಗತಿ!!

Monday, May 08, 2006

ಹಳ್ಳ

"ಬಾಯಿಲ್ಲಿ" ಎಂದ ನನ್ನ ಸಹೋದ್ಯೋಗಿಯ monitor ಕಡೆ ನೊಡಿದೆ. ಆವನು Reliance Industries' shares ತೋರಿಸಿ, 'ಎರಡು ಸಾವಿರ ಬಂದತಕ್ಷಣ ಖುಷಿಪಟ್ಟು ಮಾರಿದೆಯಲ್ಲ, ಈಗ ನೊಡು' ಎಂದ. ಈಗ ಅದು ರೂ. 1161 ರಲ್ಲಿ ನಡಿತಿದೆ. ಅವನು ಹೇಳೊ ಪ್ರಕಾರ ನನಗೆ ಪ್ರತಿ ಶೇರಿಗೆ ರೂ. 4೦೦ ಸಿಗುತ್ತಿತ್ತು if I had not sold those shares. 'ತೋರಿಸಿ ನಂಗೆ ಹೊಟ್ಟೆ ಉರಿಸಬೇಡವೊ... ನಾವೆಲ್ಲ ಅಲ್ಪತೃಪ್ತರು ಕಣೊ' ಅಂದೆ!! ಹೇಗೊ ಮಾಡಿದ ತಪ್ಪನ್ನ ಸಾರಿಸಿಕೋಂಡೆ!! :)

ಜೊತೆಗೆ ಅವನನ್ನು ನೋಡಿ 'ಹಳ್ಳದ ಕಡೆಗೆ ನೀರು ಹರಿವುದು...' ಅಂತ ಹೇಳಿದ ಮಾತು ನೆನಪಿಗೆ ಬಂತು :)

Friday, April 21, 2006

My short musing on MM

ನಾನು ಮೊದಲ ಬಾರಿ 'ಮೈಸೂರು ಮಲ್ಲಿಗೆ' ಧ್ವನಿ ಸುರಳಿ ಕೇಳಿದಾಗಿನಿಂದ ಅದರ ಸಂಗೀತಕ್ಕೆ ಮಾತ್ರವಲ್ಲ, ಅದರ ಒಳಗಿನ ಕಾವ್ಯ ಸಂಪತ್ತಿಗೂ ಮಾರುಹೋದೆ. ಆಗ ನಾನು ತುಂಬಾ ಚಿಕ್ಕವನು. ಆದರೂ ಕಾವ್ಯ, ಕನ್ನಡದ ಕವಿಗಳ ಬಗ್ಗೆ ಒಲವು/ಅರಿವು ಅಲ್ಪ-ಸ್ವಲ್ಪವಿತ್ತು - ನಾ ಓದಿದ ಕನ್ನಡ ಮಾಧ್ಯಮದ ಶಾಲೆಗೆ ಧನ್ಯವಾದ. ಮೈಸೂರು ಮಲ್ಲಿಗೆಯಲ್ಲಿದ್ದ ೯ ಹಾಡುಗಳನ್ನು ಕೇಳಿದಮೇಲೆ ಆ ಕವನ ಸಂಕಲನವನ್ನು ಓದುವ ಆಸೆ ಜಾಸ್ತಿಯಾಯ್ತು. ಅಲ್ಲಿ, ಇಲ್ಲಿ ಹುಡುಕಿ, ನಂತರ ಅವರ ಸಂಪೂರ್ಣ ಸಂಕಲನ 'ಮಲ್ಲಿಗೆಯ ಮಾಲೆ' ಕೊಂಡೆ. ಈಗಾಗಲೇ ನನ್ನ ಕನ್ನಡದ ಸಾಹಿತ್ಯದ ಹವ್ಯಾಸ ಕಡಿಮೆಯಾಗಿದೆ; ಹಲವಾರು ವರ್ಷಗಳೇ ಕಳೆದಿವೆ. ಆದರೂ 'ಮೈಸೂರು ಮಲ್ಲಿಗೆ' ಬಗೆಗಿನ ನನ್ನ ಅನಿಸಿಕೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಪ್ರಯತ್ನವೇ ಇದು.

ಮೈಸೂರು ಮಲ್ಲಿಗೆಬಗ್ಗೆ ಎಚ್. ಎಸ್. ರಾಘವೆಂದ್ರರಾವ್ ಅವರು ಅದಕ್ಕೆ ಪಾಶ್ಚಿಮಾತ್ಯದ ಪ್ರಭಾವವಿದೆ ಎಂದು ಒಂದೆಡೆ ಬರೆದಿದ್ದಾರೆ. ಅಂತೆಯೆ, ಅದರಲ್ಲಿ 'ಹಳಗನ್ನಡಗಳ ಕಾಮಸೀಮಿತ ಪ್ರಣಯಕ್ಕೆ ಇಲ್ಲಿ ಪಾರಸ್ಪರಿಕ ಭಾವನೆಗಳ ಉಡುಗೆ ಸಿಕ್ಕಿದೆ' ಎಂದಿದ್ದಾರೆ. ಅಂದಿನ ಕಾಲಕ್ಕೆ ಆ ಮಾತು ಸೂಕ್ತವಿರಬಹುದು ಆದರೆ ಅದೇ ಮೈಸೂರು ಮಲ್ಲಿಗೆಯ ಕವನಗಳನ್ನು ಇಂದಿನ ಯುವಕ-ಯುವತಿಯರು ಓದಿದಲ್ಲಿ, ಹಲವು ವಿಷಯಗಳು ಇಂದಿಗೂ ಸಮಂಜಸ ಎಂದೆನಿಸುತ್ತದೆ. ಅವರೂ ಕೂಡ ಅದನ್ನೇ ಬಯಸುತ್ತಿದ್ದರೆಂಬುದು ಸ್ಪಷ್ಟವಾಗುತ್ತದೆ. ಅದರಲ್ಲೂ ಕೆ.ಎಸ್.ನ. ಅವರು ಹೆಣ್ಣನ್ನು ಬಣ್ಣಿಸಿರುವ ರೀತಿಯಂತೂ ಇಂದಿಗೂ ಸಲ್ಲುತ್ತದೆ. ಅದನ್ನೇ ಇಂದಿನ ಯುವಕ (ಕನ್ನಡ ಬಲ್ಲ ಯುವತಿಗೆ) ಹೇಳಿದಲ್ಲಿ ಅವಳ ಪ್ರೀತಿ ಗಿಟ್ಟಿಸುವುದರಲ್ಲಿ ಸಂಶಯವೇಯಿಲ್ಲ. 'ಹಳ್ಳಿಯ ಚಲುವೆಗೆ'ಯಲ್ಲಿ ಹೇಳಿರುವ ಈ ಸಾಲುಗಳನ್ನು ನೋಡಿ:

"ಬೆಳ್ಳಬೆಳ್ಳಗೆ ತೆಳ್ಳತೆಳ್ಳಗಿಹೆ ನೀನು;
ಬೇಟೆಗಾರನ ಬಿಲ್ಲಿನಂತಿರುವೆ ನೀನು.
ಒತ್ತಾಗಿ ಕಪ್ಪಾಗಿ ಬೆಳೆದಿರುವ ಹುಬ್ಬು,
ಪಾರಿವಾಳದ ಕಣ್ಗೆ ನೆರಳನಿತ್ತಿಹುದು.
ಉಟ್ಟ ರೇಸಿಮೆಗಿಂತ ನಿನ್ನ ಮೈ ನುಣುಪು;
ಬೆಟ್ಟದರಗಿಳಿಗಿಂತ ನಿನ್ನ ನುಡಿ ಇಂಪು;
ತುಂಬು ಹರೆಯದ ಹುಡುಗಿ ನೀನೊಲುಮೆಗೀಡು;
ನಂಬಿ ನನ್ನನು ವರಿಸಿ ಸಂತಸದಿ ಬಾಳು."

ಇದನ್ನು ಕೇಳಿ ಯಾರು ತಾನೇ ಸೋಲುವುದಿಲ್ಲ ಹೇಳಿ? ಅವಳನ್ನು ಹೊಗಳುವುದರ ಜೊತೆಗೆ ಅವನು ಅವಳ ಕೈಬಿಡನೆಂಬ ಆಶ್ವಾಸನೆ ಕೂಡ ನೀಡುತ್ತನೆ. ಪ್ರೀತಿಯಿರುವ ಯಾವ ಹುಡುಗಿಗೆ ಅವಳ ಪ್ರಿಯತಮನ ಇಂತಹ ನಂಬಿಕೆ ಬೇಡ ಹೇಳಿ? ಇಂದಿಗೂ - ಎಂದೆಂದಿಗೂ ಕೂಡ - ಪ್ರೀತಿ, ದಾಂಪತ್ಯಗಳು ನಿಂತಿರುವುದೇ ಈ ನಂಬಿಕೆಯ ಮೇಲಲ್ಲವೆ?

'ಗೃಹಲಕ್ಷ್ಮಿ'ಯ ಕೊನೆಯಲ್ಲಿ ಕೆ.ಎಸ್.ನ. ಹೇಳುತ್ತಾರೆ: '... ತಾರೆಗಳ ಮೀಟುವೆವು, ಚಂದಿರನ ದಾಟುವೆವು; ಒಲುಮೆಯೊಳಗೊಂದು ನಾವು; ನಮಗಿಲ್ಲ ನೋವು, ಸಾವು'. ಎಂತಹ ಸುಂದರ ಕಲ್ಪನೆ! ಅಲ್ಲವೆ? ಯಾವ ದಂಪತಿಗಳಿಗೆ ಇದು ಬೇಡ? ಹೇಳುವ ರೀತಿ ಕೊಂಚ ಬೇರೆಯಾಗಿರಬಹುದು ಆದರೆ ಅರ್ಥ ಇದೇ ಅಲ್ಲವೆ?

ಈ ಸಾಲುಗಳು ನೆನಪಿದೆಯೆ? 'ಯಾರು ಕದ್ದು ನೋಡಿದರೇನು? ಊರೆ ಎದ್ದು ಕುಣಿದರೇನು? ಜನರ ಬಾಯಿಗಿಲ್ಲ ಬೀಗ, ಹೃದಯದೋಳಗೆ ಪ್ರೇಮರಾಗ ಇಂಥಕೂಗನಳಿಸಿದೆ, ಬೆಳಗಿ ಬದುಕ ಹರಸಿದೆ'. ಅಬ್ಬ! ನಮ್ಮಲ್ಲೊಂದು ಗಾದೆಯಿದೆ - 'ಜನರನ್ನು ಮೆಚ್ಚಿಸಲು ಜನಾರ್ಧನನಿಂದಲೂ ಸಾಧ್ಯವಿಲ್ಲ' ಎಂದು. ಎಷ್ಟೋಜನ ಜನಕ್ಕಂಜಿ ತಮಗೆ ಪ್ರೀತಿಯವರ ಜೊತೆ ಹೋಗದೆ ಮನಸ್ಸಿನಲ್ಲೇ ಮಣೆಹಾಕುವುದನ್ನು ಕೇಳಿದ್ದೇನೆ, ನೋಡಿದ್ದೇನೆ - ಅದು ಮದುವೆಯ ಮೊದಲು. ಆದರೆ ಮದುವೆಯ ಮೊದಲ ದಿನಗಳು ಹೇಗಿದ್ದವು ಎಂದು ಹೇಳಿರುವ ಈ ಸಾಲುಗಳು ಪ್ರಸ್ತುತ ದಿನಗಳಲ್ಲಿ ಪ್ರೀತಿಸಿದವನೊಂದಿಗೆ ಹೋಗಲು ತಪ್ಪಿಲ್ಲ ಎಂದು ಸಾರಿ ಸಾರಿ ಹೆಳಿದಂತಿದೆ ನನಗೆ. ಆದರೂ ಕೆಲವು ಸಮಾಜವಾದಿಗಳು ಇದನ್ನು ತಪ್ಪು ಎಂದು ವಾದಿಸುವರೆಂದು ನಾನು ಬಲ್ಲೆ. ಆವರಿಗೊಂದು ನನ್ನ ಪ್ರಶ್ನೆ. ಪ್ರೀತಿಯಲ್ಲಿ ತಪ್ಪಿಲ್ಲವೆಂದವರು ಅದನ್ನು ವ್ಯಕ್ತಪಡಿಸುವ ರೀತಿಯಲ್ಲಿ ತಪ್ಪೇಕೆ ನೋಡುತ್ತರೆ? ನಿಜವಾದ ಪ್ರೀತಿಯಲ್ಲಿ ಕಾಮಕ್ಕೆ ಎಷ್ಟರಮಟ್ಟಿಗೆ ಪ್ರಾಮುಖ್ಯತೆಯಿದೆ?

ಕೆ.ಎಸ್.ನ. ಅವರ ಪ್ರಿಯತಮ ತನ್ನ ಪ್ರೇಯಸಿಯ ಪ್ರೀತಿಯನ್ನು ವ್ಯಕ್ತಪಡಿಸಿರುವ ರೀತಿ ನನಗೆ ತುಂಬ ಇಷ್ಟವಾಯಿತು. ಅವನಿಗೆ ತನ್ನ ಪ್ರೇಯಸಿಯ ಪ್ರೀತಿ 'ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ, ನಿನ್ನೊಲುಮೆ ನನ್ನಕಂಡು' ಎನ್ನಿಸುತ್ತದೆ. ಸಾಗರದ ಹುಣ್ಣಿಮೆ ಉಬ್ಬರಕ್ಕೆ ಎಲ್ಲರೂ ಭಯಪಡುವುದರಲ್ಲಿ ಸಂಶಯವಿಲ್ಲ, ಆದರೆ ಈ ಉಬ್ಬರಕ್ಕೆ ಭಯವುಂತೆ!? ಮಿಥ್ಯಪ್ರೇಮಿಗಳಲ್ಲಿ ಇರಬಹುದು, ಆದರೆ ನಿಜ ಪ್ರೇಮಿಗೆ ಅವಳ ಪ್ರೀತಿ 'ತೀರದಲಿ ಬಳುಕುವಲೆ ಕಣ್ಣಚುಂಬಿಸಿ ಮತ್ತೆ ಸಾಗುವುದು ಕನಸಿನಂತೆ'. ಇದು ಕಲ್ಪನೆಯ? ಕಲ್ಪನೆ ಎನ್ನುವುದಕ್ಕಿಂತ ಅದನ್ನು ಅನುಭವಿಸಿ ನೋದುವುದರಲ್ಲಿ ಹೆಚ್ಚಿನ ಅರ್ಥವಿದೆ ಎನ್ನುವುದು ನನ್ನ ಅನಿಸಿಕೆ. ಎಷ್ಟೋ ಪ್ರೇಮಿಗಳಿಗೆ ಇದು ಸತ್ಯ ಅಲ್ಲವೆ? ನೀವೂ ಅನುಭವಿಸಿ.

[I wrote this a year ago when I bought 'malligeya maale'. Now I feel I could have added or modified this, but didn't want to change the original script. Sharing the same]

Wednesday, April 19, 2006

ಜೀವನ

ಮೊನ್ನೆ ಜಯನಗರದ ದೇವಸ್ಥಾನವೊಂದರಲ್ಲಿ ನನ್ನ ಚಪ್ಪಲಿ ಹಾಕಲು ಬಗ್ಗಿದಾಗ, "ನಾನು Insurance agentಉ" ಎಂದ ಒಂದು ಧ್ವನಿ ಕೇಳಿತು. ಕತ್ತು ಮೇಲೆತ್ತಿ ನೋಡಿದೆ. ೪೦ರ ಪ್ರಾಯದ ಒಬ್ಬರು ತಮ್ಮ ಕೈ ಹಿಂದೆ ಕಟ್ಟಿ ನಿಂತಿದ್ದರು: ಉಬ್ಬು ಹಲ್ಲು, ಅರ್ಧ ತೆರೆದ ಕಣ್ಣುಗಳು, summer cut ಗಿಂತಲೂ ಚಿಕ್ಕದಾದ ಕೂದಲುಗಳು, ಸಾಧಾರಣವಾದ ಬಟ್ಟೆ. ನನ್ನನ್ನು ನೋಡಿ, "ನಾನು Insurance agentಉ. ನಿಮ್ಮದು ಏನಾದ್ರು ಇದ್ರೆ ಮಾಡಿಸಿಕೊಡುತ್ತೀನಿ. ಮಾಡಿಸ್ತಿರ?" ಅಂದ್ರು. ತುಂಬ ದೀನ ಭಾವದಲ್ಲಿದ್ದವರನ್ನು ಕಂಡು ಒಂದು ಕ್ಷಣ ನನ್ನ ಮನಸ್ಸು ಅಯ್ಯೊ ಅಂತು. ಆದರೂ ನಾನು ಏನೂ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ. "ನಾನು ಎಲ್ಲ ಮುಗಿಸಿಬಿಟ್ಟೆನಲ್ಲ, ಸ್ವಾಮಿ" ಅಂದೆ. ಅದಕ್ಕವರು, "ಹೌದೇ..." ಎಂದು ರಾಗ ಎಳೆದು "Post office RDನೂ ಮಾಡಿಸ್ತಿನಿ. ಬೇರೆ ಯಾರಿಗಾದರೂ ಬೇಕಿದ್ದರೆ ನಂಗೇ ಹೇಳಿ. ದೇವಸ್ಥಾನಕ್ಕೆ ಬರ್ತಿರ್ತೀರ ಅಲ್ವ?" ಎಂದರು. ಆಯಿತು ಎಂದು ಹೇಳಿ ನಾನು ಹೊರಬಿದ್ದೆ.

Insurance ಮಾಡಿಸಿ ಅಂತ ಬರೋರು ಸರ್ವೇ ಸಾಮಾನ್ಯ. ಆದರೆ ಇವರ ದೀನಸ್ಥಿತಿ ನೋಡಿ ನನ್ನ ಮನಸ್ಸು ಚುರುಕ್ ಅಂತು. ನಾವೇನೆ ಆದರೂ ಪರಿಸ್ಥಿತಿ ಮನುಷ್ಯನನ್ನು ಏನೆಲ್ಲ ಮಾಡಿಸುತ್ತದೆ ಅಲ್ಲವೆ? ಸ್ವಾಭಿಮಾನ ಅಡ್ಡಬರುವುದೇ ಇಲ್ಲವೆ ಇವರಿಗೆ? ಅವರ ವೃತ್ತಿ ಎಲ್ಲರನ್ನು ಕೇಳುವುದೇ ಇರಬಹುದು, ಆದರೆ ಈಗಿನ ಖಾಸಗಿ ಸಂಸ್ಥೆಗಳು ಇಂಥವರ ಹೊಟ್ಟೆಗೆ ಹೊಡೆಯುತ್ತಿದ್ದಾರೇನೊ ಅನ್ನಿಸುತ್ತದೆ. ಇಂಥ ಮನುಷ್ಯರನ್ನು ನೋಡಿ ನಗುವವರೆಷ್ಟೊ - ಆಡಿಕೊಳ್ಳುವವರೆಷ್ಟೊ. ಏನೇ ಆಗಲಿ ಜೀವನ ನಡೆಯಲೇ ಬೇಕಲ್ಲವೆ?

"ಉದರನಿಮಿತ್ತಂ ಬಹುಕೃತ ವೇಷಂ" - ಎಷ್ಟು ನಿಜ!