ಕಾಜಾಣ ಹಕ್ಕಿ ಓ ಜಾಣ ಹಕ್ಕಿ, ಎಲ್ಲಿಂದ ಬಂದೆ ಹೇಳೇ?
ಮಲೆನಾಡ ಕಾಡ ಒಳಲಾಳದಿಂದ ಗಂಧದ ಗೂಡಿನಿಂದ
ಮಲೆನಾಡ ಹಕ್ಕಿ ಎಲೆ ನಾಡ ಹಕ್ಕಿ, ಅಲ್ಲೇನು ಕಂಡೆ ಹೇಳೆ?
ಕುಪ್ಪಳ್ಳಿಸುತ್ತ ಕುಪ್ಪಳಿಸುತ್ತ ಹತ್ತಿ ಕವಿಶೈಲದ ಮೇಲೆ
ಸುತ್ತಲು ಕಂಡೆ ಸೂರ್ಯೆಂಬೊ ದೊರೆಯ, ಸಾವಿರ ರಾಜ್ಯದ ಸಿರಿಯ
ಮರ ಮಣ್ಣು ಕಲ್ಲು ಮಾಮನ ಬಿಲ್ಲು, ಹಾಡೆಂದು ನೀಡಿದ ಕರೆಯ
ಕಾಡಿನ ತುಂಬ ದೇವರ ಬಿಂಬ ಸುತ್ತೆಲ್ಲ ಹಸುರಿನ ಹಾಡು
ಹೂವರಳುವ ಸದ್ದು ತುಂಗೆಯ ಮುದ್ದು ತೆರೆದಾವೊ ಹಾಡಿನ ಜಾಡು
ನನಕಾಡುವಕ್ಕಿ ಏ ಹಾಡುವಕ್ಕಿ, ಇಲ್ಲೇಕೆ ಬಂದೆ ಹೇಳು?
ಮೈಸೂರಿನೊಳಗೆ ಶಿವಮೊಗ್ಗೆ ಅದಲಿ (?) ಗಮನಿದ್ದ(?) ಕನಸಾಯ್ತು ಕೇಳು
ಪುಟ್ಟ ಕೊರಲಲ್ಲಿ ಇಷ್ಟೊಂದು ಹಾಡು ಇಟ್ಟವರ್ಯಾರು ಹೇಳೆ?
ಹಾಡಿನ ಕಣಿವೆ ಕೊಳಲಾದಮೇಲೆ ಬಾಳಿಗೆ ರಾಗದ ಲೀಲೆ
ಆಕಾಶ ಅಲೆವ ಹಸ್ತಗಳ ರೆಕ್ಕೆ ಎಲ್ಲಿತ್ತು ಹೇಳೆ ಹಕ್ಕಿ?
ಕಣ್ಣಲ್ಲಿ ಹೊಳೆವ ಕೋಲ್ಮಿಂಚು ಬಳ್ಳಿ ಎಲ್ಲಿತ್ತೆ ಕನ್ನಾಡ ಹಕ್ಕಿ?
ನಾನಾನ ಕಂಡೆ ಬಾಯೆಂದು ಕರೆದೆ ಬಂದಾನೊ ಈ ರೆಕ್ಕೆ ಹಕ್ಕಿ
ರೆಕ್ಕೆಯ ಬಿಚ್ಚಿ ನನ್ನ ಕೊರಳಸುತ್ತಿ ಬಂದೇನೊ ಚಂದ್ರನ ಹುಡುಕಿ
ಕರುನಾಡವಕ್ಕಿ ಇನಿವಾಡ ಹಕ್ಕಿ, ಎಲ್ಲಾಯ್ತೆ ನಿನ್ನೊಂದು ಬೀಡು?
ಹಾಡಾಡೊವೆದೆಗೆ ಬೀಡಿನ ಹಂಗೆ ಬಾನಬಯಲೇ ನಿನ್ನ ಗೂಡು
ಕನ್ನಡವಕ್ಕಿ ಹೊನ್ನಾಡವಕ್ಕಿ ನೀನೆಲ್ಲಿ ಹಾರಿಹೋದೆ?
ಬಯಲಿಗು ಭುವಿಗೂ ಬೆಳಕಿನ ಗೆರೆಯ ನಿನಹಾಡಿನಲ್ಲೇ ಎಳೆದೆ
ನೀಹೀಗೆ ಎದೆಗೆ ನೀಹಾರಿ ಹೋದೆ ಬಾಯಲ್ಲಿ ಹಾಡಿನ ಎಡೆಗೆ
ನೀನಿಲ್ಲ ನಿನ್ನ ಹಾಡಿನ ಹೆಜ್ಜೆ ನಿಂತಿಲ್ಲ ಈ ಮಣ್ಣಿನಲ್ಲಿ
ಉಸಿರಾಡುವನಕ ಈನಾಡ ಮಂದಿ, ಹೇಗಿರುವೆ ನಮ್ಮ ಜೊತೆಯಲ್ಲಿ
ಕನ್ನಡವಕ್ಕಿ ಹೊನ್ನಾಡವಕ್ಕಿ ನೀನೆಲ್ಲಿ ಹಾರಿಹೋದೆ? ನೀನೆಲ್ಲಿ ಹಾರಿ ಹೋದೆ??
ಇದು ನಾನು ಬರೆದದ್ದಲ್ಲ, ನನಗಷ್ಟೊಂದು ತಾಕತ್ತೂ ಇಲ್ಲ! ಇದು ಕಳೆದ ಶನಿವಾರ ಕಸ್ತೂರಿ ವಾಹಿನಿಯಲ್ಲಿ ಪ್ರೊ. ಕೃಷ್ಣೇಗೌಡ ಅವರು ಪ್ರಸ್ತುತ ಪಡಿಸಿದ ಭಾವಗೀತೆಗಳ ಕಾರ್ಯಕ್ರಮದಲ್ಲಿ ಕು.ವೆಂ.ಪು. ಅವರ ಬಗ್ಗೆ ಅವರು ನಿಧನರಾದಾಗ ಅವರು ಬರೆದ ಒಂದು ಹಾಡು. ಹಾಗೆಂದು ಅವರೇ ಹೆಳಿ, ಹಾಡಿದರು. ನನಗೆ ಅವರ ಹಾಡಿನಲ್ಲಿ ಕು.ವೆಂ.ಪು.ಅವರನ್ನು ಒಂದು ಹಕ್ಕಿಗೆ ಹೋಲಿಸಿ ಬರದಿರುವ ಶೈಲಿ ತುಂಬಾ ಹಿಡಿಸಿತು. ಅದಕ್ಕೆ ಅದನ್ನ ಇಲ್ಲಿ ಇಳಿಸಿದ್ದೇನೆ - ಕೃಷ್ಣೇಗೌಡರ ಒಪ್ಪಿಗೆ ಇಲ್ಲದೆ. ತಪ್ಪುಗಳಿದ್ದಲ್ಲಿ (ಹಲವಾರು ತಪ್ಪುಗಳಿವೆ ಎಂದು ನನಗೆ ಗೊತ್ತು) ದಯವಿಟ್ಟು ನನಗೆ ತಿಳಿಸಿ, ಸರಿಪಡಿಸುತ್ತೇನೆ.
ಇದನ್ನ ಕಳೆದ ವಾರವೇ ಬ್ಲಾಗಿಸಬೇಕೆಂದಿದ್ದೆ ಆದರೆ ಆಗಲಿಲ್ಲ. ಕೊನೆಗೆ ಕನ್ನಡ ರಾಜ್ಯೋತ್ಸವದ ರಜೆಯೇ ಬೇಕಾಯ್ತು. :)
Thursday, November 01, 2007
Subscribe to:
Posts (Atom)