Sunday, October 21, 2007

ಆಯುಧಪೂಜೆಯ ಹಳೆಯ ನೆನಪು

“ಎಲ್ಲಿಹೋಗಿದ್ಯೊ ಇಷ್ಟ್‍ಹೊತ್ತು?”
ಅಮ್ಮನ ಒಳಶುಂಠಿ ಬಿಗಿಯಾಗುತ್ತಿತ್ತು. ಅದರ ನೋವು, ಉರಿ ಕಣ್ಣಲ್ಲಿ ನೀರು ಬರಿಸಿತ್ತು. ನಿಧಾನ ವಾಗಿ ಬಾಯಿಬಿಟ್ಟೆ “ಲಾರಿನಲ್ಲಿ ಹೋಗಿದ್ದೆ”
“ಎಲ್ಲಿಗೆ? ಯಾರ್ಜೊತೆ?”
“ಎದುರುಗಡೆ ಮನೆ ಅಣ್ಣಾಜಿ ಅವರ ಲಾರಿಲಿ, ತಣ್ಣೀರ್ಹಳ್ಳ ತಂಕ. ನಾನು ಮಧು ಇಬ್ಬರೂ ಇದ್ವಿ”
“ನಾವೆಲ್ಲಾ ಎಷ್ಟು ಯೋಚಿಸಿದ್ವಿ ಎಲ್ಲಿ ಹೋಗಿದ್ರಿ ಅಂತ, ಅದರ ಬಗ್ಗೆ ಯೇನಾದ್ರು ಇದ್ಯ ನಿಮ್ಗೆ?
ನನಗೆ ಏನೂ ಹೇಳೋಕೆ ಗೊತ್ತಾಗಲಿಲ್ಲ. ಸುಮ್ಮನಿದ್ದೆ. “ಇನ್ನೊಂದುಸಲ ಹೀಗೆ ಮಾಡಲ್ಲಮ್ಮ!” ಅಂತಷ್ಟೇ ಹೊರಗೆ ಬಂದದ್ದು.

ಅವತ್ತು ವಿಜಯದಶಮಿ. ದಸರ ಹಬ್ಬಕ್ಕೆ ಶಾಲೆಗೆ ರಜ ಬಂದಾಗ ನನ್ನ ತಾತನ ಮನೆ ಹಾಸನಕ್ಕೆ ಯಾವಾಗಲೂ ಹೋಗ್ತಿದ್ವಿ. ಆ ವರ್ಷನೂ ಹೋಗಿದ್ವಿ. ನಮ್ಮ ಮನೆಯ ಮುಂದೆ ಅಣ್ಣಾಜಿ ಅನ್ನುವವರು ತುಂಬಾ ಲಾರಿ ಇಟ್ಟುಕೊಂಡಿದ್ದರು. ವಿಜಯದಶಮಿಯ ದಿನ ಬಂತೆಂದ್ರೆ, ನಮ್ಮ ರಸ್ತೆಯ ಉದ್ದಕ್ಕೂ ಲಾರಿಗಳೇ – ಸುಮಾರು ಹದಿನೈದು ಇರಬಹುದು. ನಾನಾಗ ಎರಡನೆ ಅಥವ ಮೂರನೇ ತರಗತಿಯಲ್ಲಿದ್ದಿರಬಹುದು. ಅಷ್ಟೊಂದು ಲಾರಿಗಳನ್ನ ಒಟ್ಟಿಗೆ ನೋಡೋದೇ ಹಬ್ಬ ನನಗೆ. ಲಾರಿಯ ಮುಂಭಾಗ ಪೂರ ಬಣ್ಣ-ಬಣ್ಣದ ಹೂವುಗಳಿಂದ ಅಲಂಕಾರ ಮಾಡುತ್ತಿದ್ದರು. ಜೊತೆಗೆ ಅವತ್ತು ಅದರಲ್ಲಿ ಎಲ್ಲರನ್ನೂ ಸುಮಾರು ದೂರ ಕರೆದುಕೊಂಡು ಹೋಗುತ್ತಿದ್ದರು. ಸುಮಾರು ಜನ ಅದರಲ್ಲಿ ಹತ್ತಿದ್ದರು. ನಾನು ಮತ್ತು ನನ್ನ cousin ಇಬ್ಬರೂ ಚಿಕ್ಕವರು – ಇವೆಲ್ಲಾನೋದು ಖುಷಿಯಿಂದ ಎಲ್ಲಾ ಜನರಜೊತೆ ಹೊರಟೆವು. ನಾವಿದ್ದ ಲಾರಿಗಳು ಊರ ಹೊರಗಿನ ತಣ್ಣೇರ್ ಹಳ್ಳ ಅನ್ನೋಜಾಗಕ್ಕೆ ಕರೆದು ಕೊಂಡು ಬಂತು. ಅಲ್ಲಿ ಯೇನು ಮಾಡಿದರು ಅನ್ನೋದು ನನಗೆ ಜ್ಞ್ನಾಪಕವಿಲ್ಲ. ಅಲ್ಲಿಂದ ಮನೆಗೆ ಬಂದಾಗ ಸಂಜೆ ಕತ್ತ್ಲಾಗಿತ್ತು. ಮನೆಗೆ ಬಂದತಕ್ಷಣ ಮನೆಯವರಿಂದ ಒಂದು ಸುತ್ತು ಚೆನ್ನಾಗಿ ಪೂಜೆ ನಡೀತು.

ನಮಗೆ ದೊಡ್ಡವರ ಗಾಬರಿ ಹೇಗೆ ಅರ್ಥವಾಗುತ್ತೆ ಹೇಳಿ. ಆದರೆ ತುಂಬಾ ನಿಧಾನವಾದಾಗ ಮನೆಯಲ್ಲಿ ಬೈಗುಳ ನೆನಪಿಸಿಕೊಂಡು ಇಬ್ಬರೂ ಹೆದರಿದ್ದೇನೊ ಹೌದು!

***

ನಮ್ಮ ತಾತ ಸತ್ತ ಮೇಲೆ ನಾನು ನನ್ನ ಮಾವನ ಮನೆಗೆ ದಸರ ರಜೆಯಲ್ಲಿ ಹೋಗೋದು ವಾಡಿಕೆಯಾಯ್ತು. ಪ್ರತೀ ವರ್ಷವೂ ನನ್ನ ಮಾವನಮನೆಗೇ ರಜ ಬಂದ ಒಂದೆರಡು ದಿನದಲ್ಲಿ ಹಾಜರ್! ನನ್ನ ಮಾವನ ಹತ್ರ Bajaj Super ಸ್ಕೂಟರ್ ಇತ್ತು. ಆಯುಧಪೂಜೆಯಂದು ಅದಕ್ಕೆ ಪೂಜೆ! ಅದಾದಮೇಲೆ ನನ್ನ ಮಾವ ಅದರಲ್ಲಿ ಒಂದು round ಕರೆದು ಕೊಂಡು ಹೋಗುತ್ತಿದ್ದರು. ನನ್ನ ಹಳ್ಳಿಯಲ್ಲಿ ಯಾವ ವಾಹನ ಲಾಭವೂ ನನಗಾಗುತ್ತಿರಲಿಲ್ಲ ವಾದ್ದರಿಂದ ಅದಕ್ಕೆ ಕಾಯ್ದು ಕೂತಿರ್ತಿದ್ದೆ. ಸ್ಕೂಟರ್ಗೆ ಮಂಗಳಾರತಿ ಆದತಕ್ಷಣ ಯಾವಾಗ ನನ್ನ ಮಾವ ’ಕೂತ್ಕೊ’ ಅಂತ ಹೇಳ್ತಾರೋ ಅಂತ ಒಂಟಿಕಾಲಲ್ಲಿ ಕಾಯ್ತಿರ್ತಿದ್ದೆ. ಅವರು ಕರೆದು ಕೊಂಡು ಹೊರತಾಗ ನಾನೇ ರಾಜ ಅನ್ನೋಥರ ಅನುಭವ! ಕಾದದ್ದಕ್ಕೊ ಒಳ್ಳೆ ಫಲಿತಾಂಶ! ಆದ್ರೆ ಒಂದುಬಾರಿ ಮಾತ್ರ ಪೂಜೆ ಯಾದ ತಕ್ಷಣ ಮಾವ ಸ್ಕೂಟರ್ ಹೊರಗೆ ತೆಗೆಯಲಿಲ್ಲ. ಆದ್ರೆ ಕೇಳೋ ಧೈಯನೂ ಇಲ್ಲ. ಒಳಗೊಳಗೇ ’ಯಾಕೆ ನಮ್ಮನ್ನ ಕರೆದುಕೊಂಡು ಹೋಗ್ತಿಲ್ಲ. ಕರೆದುಕೊಂಡು ಯೋಗಕ್ಕೇನು?’ ಅನ್ನಿಸಿತ್ತು. ಮತ್ತೆ ಹೋಗಿ ಅಮ್ಮನಹತ್ರ ಪಿಸಿಮಾತಲ್ಲಿ ’ಮಾವಂಗೆ ಸ್ಕೂಟರ್ನಲ್ಲಿ ಕರೆದುಕೊಂಡು ಹೋಗಕ್ಕೇಳಮ್ಮ’ ಅಂತ ಬೇರೆ ಶಿಫಾರಸ್ ಮಾಡೋಕೂ ಪ್ರಯತ್ನ ಮಾಡಿದ್ದೆ. ಆದರೆ ಅದು ಸಂಜೆ ವರೆಗೂ ನಡೆದಿರಲಿಲ್ಲ! ಕೊನೆಗೆ ಸಂಜೆ ದೊಡ್ಡ round ಸಿಕ್ಕಿತ್ತು. ಅದರ ಖುಷಿ ಈಗ ನನ್ನ ಲಕ್ಷಗಟ್ಟಲೆ ಕೊಟ್ಟು ತಗೊಂಡಿರೋ carನಲ್ಲಿ ಹೋದಾಗ್ಲೂ ಇಲ್ಲರಿ!!

***

ಪ್ರತೀ ವಿಜಯದಶಮಿಯಂದು ನನಗೆ ರಾಮ-ರಾವಣ, ಮಹಿಷಾಸುರ-ಚಾಮುಂಡೇಶ್ವರಿ, ಪಾಂಡವರು-ಕೌರವರು ನೆನಪಿಗೆ ಬರುತ್ತಾರೋ ಇಲ್ಲವೊ, ಈ ಎರಡೂ ಘಟನೆಗಳು ನೆನಪಿಗೆ ಬರುತ್ತೆ. ನೆನಪಿಸಿಕೊಳ್ಳದ ವರ್ಷವೇ ಇಲ್ಲ! ಮುಂಚೆ ಕಾರಣ ಯಾವುದೇ ಇರಲಿ, ಇರುತ್ತಿದ್ದ ಆಸೆ, ಆ ಸಂಭ್ರಮ ಈಗ ಇಲ್ಲ. ಪೂಜೆ ಮಾಡಬೇಕು ಅಂತ ದೊಡ್ಡವರು ಹೇಳಿದ್ದಾರೆ. ನವಮಿಯಲ್ಲಿ ಆಯುಧಪೂಜೆ ಮಾಡಬೇಕು, ಮಾಡುತ್ತೇವೆ. ಆದ್ರೆ, ನನಗೇಕೋ ಹಿಂದಿದ್ದ ಖುಶಿ ಕಾಣುತ್ತಿಲ್ಲ. :(

ಏನೇ ಆಗಲಿ, ವಾಹನಗಳ ಪೂಜೆ, ಕಡ್ಲೆಪುರಿ, ಅದಾದಮೇಲೆ ಹೊರಗೆ ಹೋಗೋದು ಇವೆಲ್ಲಾ ಈಗಿನ ಚಿಕ್ಕಮಕ್ಕಳಿಗೂ ಅದೇ ಸಂಭ್ರಮ ತರುತ್ತೆ ಅಂತ ಅಂದ್ಕೊತೀನಿ.
ಬನ್ನಿ, ಈ ನವರಾತ್ರಿಯ ಸಂದರ್ಭದಲ್ಲಿ ಎಲ್ಲರಿಗೂ ಶಾಂತಿ, ಶಕ್ತಿ, ಸಂಯಮ, ಸಮ್ಮಾನ, ಸರಳತೆ, ಸಫಲತೆ, ಸಮೃದ್ಧಿ, ಸಂಸ್ಕಾರ ಹಾಗೂ ಸ್ವಾಸ್ಥ್ಯ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ (ಇದು ನನ್ನ ಚಿಕ್ಕಪ್ಪನಿಂದ ಇವತ್ತು ಬಳಗ್ಗೆ ಬಂದ ಎಸ್ಸೆಮ್ಮೆಸ್!!).

Monday, October 08, 2007

ಕೋಪ...

ಮೊನ್ನೆ ಮನೆಯಲ್ಲಿ ಯಾವುದೋ ವಿಷಯಕ್ಕೆ ಕೋಪಿಸಿಕೊಂಡು ನನ್ನ ಸ್ನೇಹಿತನಜೊತೆ ಹೊರಗೆ ಹೋಗಿದ್ದೆ. ಅಲ್ಲಿ ಅವನಜೊತೆ ಏನೇನೋ ತಿನ್ನುವಾಗ, ಒಂದೆರಡು ಜೋಡಿಗಳು ಬಂದು ತಿನ್ನುತ್ತಿದ್ದುದು ಕಣ್ಣಿಗೆ ಬಿತ್ತು. ನನ್ನ ಸ್ನೇಹಿತನ ಜೊತೆ ಖುಷಿಯಾಗಿ ತಿನ್ನುತ್ತಿರೋಹಾಗೆ ಸುಳ್ಳು ಸೋಗೆ ಮುಖದಲ್ಲಿ ಹಾಕಿದ್ದರೂ, ಒಳಗಿದ್ದ ನೋವು ನನಗೆ ಮಾತ್ರ ಗೊತ್ತಿತ್ತು. ನಾನಂದುಕೊಂಡೆ - ನಾನೂ ಸಹ ನನ್ನ ಹೆಂಡತಿ ಜೊತೆ ಇಲ್ಲಿ ಅವರಹಾಗೇನೇ ತಿನ್ನುತ್ತಿದ್ದರೆ ಹೇಗಿತ್ತು ಅಂತ. ಖುಷಿಯಾಗಿ ಅವಳಜೊತೆ ತಿನ್ನುವ ಆನಂದವೇ ಬೇರೆ! ಆದ್ರೆ ಇದ್ದ ಕೋಪ?!! ಸರಿ, ಅವನೊಂದಿಗೆ ತಿಂದು ಎಷ್ಟೋ ಆನಂದಿಸಿ ಹೊರಟೆ. ಸ್ವಲ್ಪ ಹೊತ್ತು ಹೊರಗೆ ಸುತ್ತಾಡಿ ನಂತರ ಮನೆ!

ನಾನು ಬಹಳಬಾರಿ ಯೋಚಿಸಿದ್ದೇನೆ. ನಾವೇಕೆ ಕೋಪಿಸಿಕೊಳ್ಳುತ್ತೇವೆ? ಅದರಲ್ಲೂ ನಾವು ಇಷ್ಟಪಡುವವರ ಮೇಲೆಯೇ? ನಾನು ಗಮನಿಸಿರೋ ಹಾಗೆ ಹೆಚ್ಚಾಗಿ ನಾನು ಕೋಪಿಸಿಕೊಳ್ಳೋದು ಅಮ್ಮನಮೇಲೆ. ಯಾಕೇಂದ್ರೆ ಅವರೇ ತಾನೆ ಸುಲಭವಾಗಿ ಮಕ್ಕಳಿಗೆ ಸಿಗೋರು! ಮತ್ತೆ ಅಷ್ಟೇಬೇಗ ಅದು ಹೋಗುತ್ತೆ. ಬೇಜಾರಾಗುತ್ತೆ, ನಂತರ ಪಶ್ಚಾತ್ತಾಪ. ಅದು ಅಮ್ಮಂದಿರಿಗೂ ಗೊತ್ತು ಅನ್ನಿಸುತ್ತೆ. ಅದಕ್ಕೇ ಅವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ಆವರಿಗೂ ಗೊತ್ತು, ನಾನು ಇಷ್ಟವಿಲ್ಲದೆ ಬಯ್ಯುತ್ತಿಲ್ಲ, ಕೇವಲ ಕ್ಷಣಿಕ ಕೋಪ. ಅದೇನೇ ಆಗಲಿ, ಕೋಪ ಕೋಪವೇ ಅಲ್ಲವೇ? ಆದು ಒಳ್ಳೆಯದಲ್ಲ ಅಂತ ನನಗೆ ಗೊತ್ತಿದೆ. ಆದರೂ ಯಾಕೆ ಅದನ್ನ ಸರಿ ಪಡಿಸಿಕೊಂಡಿಲ್ಲ? ಸಂಯಮ ಏಕೆ ಕಂಡು ಬರುತ್ತಿಲ್ಲ? ಅದರಲ್ಲೇ ಗೊತ್ತಾಗುತ್ತೆ ನಾನಿನ್ನೂ ಪಕ್ವವಾಗಿಲ್ಲ ಅಂತ :( ಒಮ್ಮೆ ಕೋಪಿಸಿಕೊಂಡು ಅದರ ಬಗ್ಗೆ ಪಶ್ಚಾತಾಪ ಪಟ್ಟಮೇಲೂ ಅದನ್ನು ಸಂಪೂರ್ಣವಾಗಿ ಬಿಟ್ಟಿಲ್ಲ ಅಂದ್ರೇನರ್ಥ??

ನನ್ನನ್ನ ಬಹಳವರ್ಷ ನೋಡಿದ ನನ್ನ ಸ್ನೇಹಿತ ಒಮ್ಮೆ ನನ್ನ ಕೋಪ ನೋಡಿ ಹೇಳಿದ - ’ನೀನು ಇಷ್ಟು ಕೋಪ ಮಾಡಿಕೊಂಡಿದು ನಾನು ನೋಡಿಲ್ಲ. controlಮಾಡಿರ್ತಿಯ ಆದ್ರೆ ಈಗೀಗ ಯಾಕೆ ಹೇಗಾಗಿದ್ದೀಯ?’ ಅಂತ. ಅದಕ್ಕೆ ಉತ್ತರ ನನ್ನಲ್ಲಿರಲಿಲ್ಲ. ನಾನು ಕಂಡಂತೆ ನಾನು ಕಿಂಚಿತ್ತು ಸಂಯಮ ಗಳಿಸಿದ್ದೇನೆ (ಪ್ರಯತ್ನಿಸಿದ್ದೇನೆ ಅನೋದು ಸರಿಯಿರಬಹುದು). ಬೇಗ ಕೋಪಿಸಿಕೊಳ್ಳೋದಿಲ್ಲ. ತಕ್ಷಣ ಬಂದ ಕೋಪನ ತಡೆಯುತ್ತೀನಿ. ಕೋಪ ಬಂದಾಗ ಮೂಲ ಯೋಚನೆಗೆ ತದ್ವಿರುದ್ಧವಾಗಿ ಯೋಚಿಸಲು ಪ್ರಾರಂಭಿಸಿತ್ತೀನಿ. ಆಗ ನನಗೆ ಹಿಂದಿನ ಅನಿಸಿಕೆ ತಪ್ಪು ಅನ್ನಿಸೋಕೆ ಶುರುವಾಗತ್ತೆ. ಆಗ ಅಂದುಕೋತಿನಿ - ನಾನು ಯಾರು ತಪ್ಪು ಅಂತ ತಿಳ್ಕೊಂಡು ಕೋಪಮಾಡಿಕೊಂಡಿದ್ದೆ ಅದು ಅವರಕಡೆಯಿಂದ ತಪ್ಪಲ್ಲ. ಹಾಗೇ ಒಂದುವೇಳೆ ಅಲ್ಲದಿದ್ದರೆ, ನನಗನ್ನಿಸಿದುದನ್ನು ಸರಿಯಾದ ರೀತಿಯಲ್ಲಿ ಹೇಳಬೇಕು (ನಾನು ಹಾಗೆ ಅಂದುಕೊಂಡು ಮತ್ತೆ ನನ್ನ ಸೌಮ್ಯಕ್ಕೇಏಟುಬಿದ್ದು ಕೋಪಿಸಿಕೊಂಡ ಸಮಯಗಳಿವೆ). ನನಗೆ ಕೋಪಬಂದಾಗ ಬೇರೇ ರೀತಿಯಲಿ ಯೋಚಿಸಕ್ಕೆ ಪ್ರಯತ್ನ ಪಾಡುತ್ತೇನೆ. ಏನೇಆದ್ರೂ ನಾವು ನಮ್ಮ ಕೋಪ ತಡಿಯದೆ ಏನೇನೋ ಮಾತಾಡಿ ನಂತರ ಪಶ್ಚಾತಾಪಪಟ್ಟರೆ ಅದು ಎಷ್ಟು ಸಮ? ಅದು ಯಾವರೀತಿಯಲ್ಲೂ ಸಹಾಯ ಮಾಡುವುದಿಲ್ಲ. ’ಕೋಪದಲ್ಲಿ ಕುಯ್ದ ಮೂಗು ಮತ್ತೆ ಶಾಂತವಾದಾಗ ಬರುವುದಿಲ್ಲ’ ಅನ್ನೋ ಮಾತು ನಿಜ! ಕೋಪದಲ್ಲಿ ನಾವಾಡುವ ಮಾತು ತುಂಬಾ ನೋವುಂಟುಮಾಡುತ್ತದೆ. ಅದಕ್ಕೇ ಏನೇ ಮಾತಾಡುವಾಗಲೂ ಅದು ಬೇರೆಯವರಿಗೆ ಎಂಥಹ ಪರಿಣಾಮಬೀರಬಹುದು ಅಂತ ಸ್ವಲ್ಪ ಯೋಚಿಸಿದರೆ ಉತ್ತಮ. ಹೀಗೇ ಯೋಚಿಸಲು ಪ್ರಾರಂಭಿಸಿದರೆ, ಆ ಸಮಯದಲ್ಲೀ ಬಹಳಷ್ಟು ವೇಳೆ ನಮ್ಮ ಕೋಪ ತಣ್ಣಾಗಾಗಬಹುದು. ಮುಂದಾಗುವ ಹಾನಿಯನ್ನು ತಡೆಯಬಹುದು. ಇಲ್ಲಾ, ’ಮೌನೇ ಕಲಹಂ ನಾಸ್ತಿ’ ಅನ್ನೋ ಸಂಸ್ಕೃತದ ನುಡಿಯನ್ನ ಪಾಲಿಸಬೇಕು.

ನಾನು ಗಮನಿಸಿರೋ ಮತ್ತೊಂದು ವಿಷಯ ಅಂದ್ರೆ, ಮನೆಯವರ ಮೇಲೆ ಬೇಗ ಕೋಪಿಸಿಕೊಳ್ಳುವ ಎಷ್ಟೋಮಂದಿ ಮನೆಯ ಹೊರಗಿನವರ ಮೇಲೆ ಮಾಡೊದಿಲ್ಲ. ಅಲ್ಲಿ ಬಹಳಷ್ಟು ಸಮಾಧಾನವಾಗಿ ಮಾತಾಡುತ್ತಾರೆ. ಒಂದು t-shirtನ ಮೇಲೆ ಓದಿದ ನೆನಪು: "you always hurt the ones you love" ಅಂತ! :) ಹಾಂ! ಬೇರೆಯವರ ಬಗ್ಗೆ ತಲೆಯಾಕೆ ಕೆಡಿಸಿಕೊಳ್ಳೊಡು ಉಅಂತಿರ್ಬೇಕು ಅಲ್ವೆ? ಅವರು ಏನು ಮಾಡಿದರೆ ನನಗೇನು, ಸರಿಯಾದ್ರೂ ಆಗ್ಲಿ, ತಪ್ಪಾದ್ರು ಆಗ್ಲಿ.. ಅದೇ ಮನೆಯವರಲ್ಲಿ/ಗೊತ್ತಿರುವವರಲ್ಲಿ??? ಇನ್ನೊಂದು ಸಾಲು ನೆನಪಿಗೆ ಬರುತ್ತಿದೆ ’ಪ್ರೀತಿಯಿದ್ದಲ್ಲಿ ಕೋಪವಿರುತ್ತೆ’ ಅಂತ!! ಅಥವ ಇದೊಂದು ಕೇವಲ ಕೋಪಮಾಡಿಕೊಳ್ಳೋದಕ್ಕೆ ಕೊಡೊ excuseಏ?

ನಾವೆಷ್ಟೇ ಓದಿರಲಿ, ಏನೆಲ್ಲಾ ಸಾಧಿಸಿರಬಹುದು, ಆದ್ರೆ ಕೋಪ ನಿಗ್ರಹಮಾಡಿರದೆದ್ದಲ್ಲಿ ಏನು ಪ್ರಯೋಜನ. ಯಾವುದಾದರೊಮ್ಮೆ, ಬಂದ ಕೋಪ ಅದೆಲ್ಲವನ್ನೂ ನೀರಿನ ಮೇಲೆ ಹೋಮ ಮಾಡಿದಂತೆ ಮಾಡುತ್ತದೆ. ನೀವು ಯಾರಿಗೇ ಎಷ್ಟೇ ಸಹಾಯ ಮಾಡಿರಿ, ಒಂದು ಕೋಪದ ಮಾತು ಅದೆಲ್ಲವನ್ನೂ ಬೆಲೆಯಿಲ್ಲದಂತೆ ಮಾಡುತ್ತದೆ. ನಮ್ಮ ಸಮಾಧಾನ ಎಲ್ಲರಲ್ಲಿ ಒಳ್ಳೆಯ ಅಭಿಪ್ರಾಯ ತರುತ್ತೆ.

ತುಂಬಾಜನ ’ನಾನು ಅವನನ್ನು ನೋಡಿಲ್ಲ, ಮಾತಾಡಿಸಿಲ್ಲ, ಆದ್ರೂ ಯಾಕೋ ಅವನ್ನ ಕಂಡ್ರೆ ನಂಗೆ ಕೋಪಬರುತ್ತೆ’ ಅಂತ ಹೇಳೋದು ಕೇಳಿದ್ದೀನಿ. ಯಾರೋ ಯಾಕೆ, ನಾನೇ ಹಾಗೆ ಹೇಳಿರೋದು (ಹಲವು ಹರ್ಷಗಳ ಹಿಂದೆ) ನೆನಪಿದೆ. ಅದಕ್ಕೆ ಕಾರಣ, ನಾವು ಅವರ ಬಗ್ಗೆ ನಮಗಿಷ್ಟವಿಲ್ಲದ, ಕೋಪಬರಿಸುವ ಗುಣಹೋದಿರೋರು ಅಂತಷ್ಟೇ ನಮ್ಮ ಮನಸ್ಸಿನಲ್ಲಿ ಯೋಚಿಸಿ ನಮ್ಮದೇ ಆದ ಕಲ್ಪನೆಯಲ್ಲಿ ಅವರನ್ನು ಕೆಟ್ಟವರನ್ನಾಗಿ ಮಾಡಿ ಕೋಪಿಸಿಕೊಳ್ಳುತ್ತೇವೆ. ಅಲ್ರೀ, ಅವರು ಗೊತ್ತೇಇಲ್ಲ ಅಂದಮೇಲೆ ಅವರು ಕೆಟ್ಟವರು ಹೇಗೆ ಆಗ್ತಾರೆ ಸ್ವಾಮಿ? ವಿಚಿತ್ರ ಅಲ್ವೆ? ಯಾರೇ ಆಗಲಿ, ಅವರಲ್ಲಿ ಒಳ್ಳೆಯದನ್ನು ಹುಡುಕಬೇಕು. ಅವರಲ್ಲಿ ಓಳ್ಳೆಯ ಗುಣಗಳನ್ನಷ್ಟೇ ಗಮನಿಸಬೇಕು. ಆಗಷ್ಟೇ ನಾವು ಎಲ್ಲರಲ್ಲೂ ಚೆನ್ನಾಗಿರಲು ಸಾಧ್ಯ. ಬೇರೆಯವರನ್ನು ಹೊಗಳೋದು ಬೇಡ, ತೆಗಳೋದುಕೂಡ ಯಾಕೆ? ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಒಳ್ಳೆಯ ಗುಣ ಇದ್ದೇ ಇರುತ್ತೆ, ಅದು ಎಲ್ಲರಿಗೂ ಗೊತ್ತಿರಲೇಬೇಕಿಲ್ಲ. ಹಾಗಾಗಿ, ನನಗಿಷ್ಟವಿಲ್ಲದಿದ್ದರೆ ನಾನು ಸುಮ್ಮನಿರಬೇಕೇ ಹೊರತು ಅವರಬಗ್ಗೆ ಕೋಪದಲ್ಲಿ ಏನೋ ಹೇಳುವುದು ಎಷ್ಟು ಸರಿ?

ಸರಿ. ಮತ್ತೆ ಏನೇನೋ ಬರಿಯುತ್ತಿದ್ದೆನಿ ಅನ್ನಿಸ್ತಿದೆ... ನಾನು ಈಥದ ಮಾತಾಡೋವಾಗೆಲ್ಲಾ ನನ್ನ ಹೆಂಡತಿ ’ನೀವು ತೊಂಬತ್ತು ವರ್ಷದವರಂತೆ ಮಾತಾಡ್ತಿರ ಈಗ್ಲೆ, ಮುಂದೆ ನನ್ನ ಗತಿಯೇನು’ ಅಂತ ಅವಳ ಮುದ್ದಾದ ಮುಖದಲ್ಲಿ ಆತಂಕತುಂಬಿ ಹೇಳೋದು ನೋಡಿ ತುಂಬಾಸಲ (ಒಳಗೊಳಗೇ) ನಕ್ಕಿದ್ದೇನೆ. ನಿಜವಾಗ್ಲೂ ನಂಗೆ ತೊಂಬತ್ತು ಅಲ್ಲಾರಿ... :(