Thursday, February 26, 2009

ಪ್ರತಾಪ ಸಿಂಹರ ITಯ ಕುರುಡು ಕಾಂಚಣದ ಬಗ್ಗೆ ...

ಪ್ರೀತಿಯ ಪ್ರತಾಪ ಸಿಂಹರೆ,

ನಾನು ನಿಮ್ಮ ಅನೇಕ ಲೆಖನಗಳನ್ನು ಓದಿದ್ದೇನೆ - ಪ್ರತಿವಾರ ಓದುತ್ತೇನೆ ಅಂದ್ರೆ ತಪ್ಪಾಗುತ್ತೆ. ಹಲವಾರು ವಿಶಯ ನನಗೆ ಗೊತ್ತಿಲ್ಲದ್ದನ್ನು ನಿಮ್ಮ ಲೇಖನಗಳಿಂದ ತಿಳಿದುಕೊಂಡಿದ್ದೇನೆ. ನೀವು ನಮ್ಮವರೆಂದು ಹೆಮ್ಮೆ ಪಡುತ್ತೇನೆ (ನಾನು ಹೆಮ್ಮೆ ಪಡೊದ್ರಿಂದ ಅಥವ ಪಡದಿದ್ರೆ ನಿಮಗೆ ಯಾವ ಹಾನಿಯೂ ಇಲ್ಲ ಅನ್ನೋದು ಗೊತ್ತಿದೆ!). ಇವತ್ತು ನನ್ನ office ನಲ್ಲಿ ನಿಮ್ಮ ಕಳೆದ ಶನಿವಾರದ (February 21, 2009) ಲೇಖನದ ಬಗ್ಗೆ ಮಾತು ಬಂತು. ನಾನು ಓದಿರಲಿಲ್ಲ. ಈಗ ಅದನ್ನು ಓದಿದೆ, office ನಲ್ಲಿ ಸ್ವಲ್ಪ ಮಾತುಕತೆ ನಡೆದದ್ದರಿಂದ. ಓದಿದಮೇಲೆ, ಒಂದು ಉತ್ತರ ಬರೆಯಬೇಕು ಅನ್ನಿಸ್ತು. ಅದರ ಪ್ರಯತ್ನ ಅಷ್ಟೇ ಇದು.



Or look here: Article

ನಿಜವಾಗಿ ನಿಮ್ಮ ಲೇಖನ ನನಗೆ ಪ್ರತಿಕ್ರಿಯಿಸೋಹಾಗೆ ಮಾಡಿದೆ. ನಿಮ್ಮ ಲೆಖನ ಚೆನ್ನಾಗಿದೆ, ಐಟಿ ಜನಗಳನ್ನು ಕೋಪದಿಂದ ನೋಡೋ ಜನಗಳಿಗೆ ಅವರ ಕೋಪವನ್ನು ಇನ್ನಷ್ಟು ಕೇಚರಕ್ಕೇರಿಸುವಷ್ಟು! ಅದರಲ್ಲೊ ಕೆಲವು ಸಾಲುಗಳಂತೂ ಬೇಡವಾಗಿತ್ತು. ನಿಮ್ಮ ಲೇಖನ ಓದಿದ್ರೆ ನನಗೆ ಒಂದು ಗಾದೆ ನೆನಪಿಗೆ ಬಂತು: ’ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ’ ಅಂತ. ಚೆನ್ನಾಗಿದೆ ಸ್ವಾಮಿ! ನೀವು ಬರೆದಿರೋದು ಈಗಿನ ಎಲ್ಲಾ ಸಮಸ್ಯೆಗಳಿಗೂ ಐಟಿ ನೇ ಕಾರಣ ಅಂತ!! ನೀವು ಬಿಡಿಸಿಟ್ಟಿರೋ ಹಲವು ವಿಶಯಗಳು ಈ ಐಟಿ ಬರೋಕ್ಕೂ ಮುಂಚೆನೂ ಇತ್ತು.. ಅಲ್ವ? ರೋಡು ಚೆನ್ನಾಗಿಲ್ಲ, ಕರೆಂಟು ಅಭಾವ ಅನ್ನೋದು ಈಗ ಮಾತ್ರನ? ಅಥವ ಹಾಗೆ ಬೇಜಾರು ಮಾಡಿಕೊಳ್ತಾಇರೋರು ಕೇವಲ ಐಟಿನವರ? ನಮಗಿಂತ ಹೆಚ್ಚು ಈ ವಿಶಯಗಳನ್ನ ಬರೆಯುತ್ತಿರೋರು ಮೀಡಿಯಾದವರು ಸ್ವಾಮಿ. ನೀವೇಹೇಳಿರೋಹಾಗೆ, ಐಟಿಯವರಹತ್ರ ದುಡ್ಡಿದೆ, ಅವರೆಲ್ಲಾ ಇನ್ವರ್ಟರ್ ಹಾಕಿಸಿಕೊಂದಿದ್ದಾರೆ ಮನೆಗೆ; ಕರೆಂಟ್ ಅಭಾವ ಅವರಿಗೆ ಎಲ್ಲಿಗೊತ್ತಾಗತ್ತೆ ಮತ್ತೆ? :)

ದುರಹಂಕಾರ ಯಾರಿಗಿಲ್ಲ? ನಮ್ಮಪ್ಪ ಒಂದು ಹಳೇ ಮಾತಿಗೆ - ’ಅನ್ನ ಇದ್ರೆ ಪ್ರಾಣ, ಪ್ರಾಣ ಇದ್ರೆ ಪರಾಕ್ರಮ’ ಅನ್ನೋದಕ್ಕೆ ಒಂದು ಹೊಸ ಸಾಲು ಸೇರಿಸಿ ಹೇಳೋರು - ’ಪರಾಕ್ರಮ ಇದ್ರೆ ಗಾಂಚಾಲಿ’ ಅಂತ. Basic needs ಗಳಿಂದ ತ್ರುಪ್ತನಾದ ಯಾವನೇ ಮನುಷ್ಯ ಜಂಭ ತೋರಿಸೋದ್ರಲ್ಲಿ ಹೊಸತೇನಿಲ್ಲ. ನೀವು ಹೇಳಿದಹಾಗೆ ಪ್ರತಿ ಶ್ರೀಮಂತ-/ಹಣವಂತ-ನಿಗೂ ಇದೆ, ಹಾಗೆ ಅವರ ಲಾಡ್ಲಾಗಳಿಗೂ ಕೂಡ. ಈ ಐಟಿ ಬರೋಕೆ ಮುಂಚೆ ತುಂಬಾ ಸಂಬಳ ತಗೋತಿದ್ದದ್ದು ಬ್ಯಾಂಕ್-ನವರು. ಅವರೇನು ಯದ್ವಾತದ್ವಾ ಖರ್ಚು ಮಾಡ್ಲಿಲ್ಲ ಅಂತೀರ? ಬೆಂಗಳೂರಲ್ಲಿ ಅರ್ಧಕ್ಕರ್ಧ ಬ್ಯಾಂಕ್ ಲೇಔಟ್ ಗಳೇ ಇದೆ. ಅವೆಲ್ಲಾ ಹೆಂಗೆ ಆದ್ವು ಸರ್? ಹಾಗಂತ ಎಷ್ಟು ಐಟಿ ಲೇಔಟ್ಗಳಿವೆ? ಬ್ಯಾಂಕ್ ಉದ್ಯೋಗಿಗಳ ಖರ್ಚು ಯಾರಿಗೂ ಹೀಗೆ ಕಾಣಲಿಲ್ಲ ಯಾಕಂದ್ರೆ, ಅದು ಐಟಿನಷ್ಟು ಉದ್ಯೋಗ ಸೃಷ್ಟಿ ಮಾಡಲಿಲ್ಲ! ಜೊತೆಗೆ, ಪದವಿ ಮಾಡಿಕೊಂದ ತಕ್ಷಣ ಎಲ್ಲಾರಿಗೂ, ನೀವುಹೇಳಿದಂತೆನೇ, ಹಣ ಸಿಗಲಿಲ್ಲ. ಆಷ್ಟೆ! ಅಪ್ಪ ರೆಟೈರ್ ಆಗೊ ಹೊತ್ತಿನ ಸಂಬಳ ಮಗ ಶುರುನಲ್ಲೇ ಸಂಪಾದಿಸಿ ಸಂಪೂರ್ಣ ಮನೆ ನಿಭಾಯಿಸುತ್ತಾನೆ ಈಗ. ಇದಕ್ಕೆ ನಾನು ಬಹಳ ನಿದರ್ಶನ ಕೊಡಬಲ್ಲೆ. ಕಷ್ಟ ಪಡುತ್ತಿದ್ದ ಎಷ್ಟೋ ಸಂಸಾರಗಳು ಸ್ವಲ್ಪ ಉಸಿರಾಡುವ ಹಾಗೆ ಆಗಿದೆ ಈಗಿನ ಆರ್ಥಿಕಪರಿಸ್ಥಿತಿಯಿಂದ. ಆದನ್ನ ಬಿಟ್ಟು ಬರೇ ಋಣಾತ್ಮಕವಾಗಿ ಯೋಚಿಸ್ತಿದ್ದೀರಲ್ಲ? ಕೇವಲ basic needಗಳನ್ನೇ ಪೂರೈಸಿಕೊಂದು ಜೀವಿಸುತ್ತಿದ್ದ ಹಲವು ಕುಟುಂಬಗಳಿಗೆ ನಮಗೂ ಒಂದು ತಲೆಮೇಲೆ ನಮ್ಮದನ್ನೊ ಸೂರು ಬೇಕು ಅಂತ ಆಸೆಪಡೊದಷ್ಟೇಅಲ್ಲ, ಈಗ ಅವರು ಸೂರಿನಬಗ್ಗೆ ಯೋಚಿಸೋಹಾಗಿದೆ. ಅದು ನಿಮಗೆ ಕೆಟ್ಟದ್ದಾಗಿ ಕಾಣುತ್ತಿದ್ಯ?

ಬಜಾಜ್, ನೆಹರುಗಳ ಉದಾಹರಣೆ ಕೊಟ್ಟಿದ್ದೆರ ಈಗ, ಸ್ವಾಮಿ, ನೀವೇ ಹೆಳಿದಂತೆ, ಐಟಿ ಮುಂಚಾಣಿಗೆ ಬಂದು ಕೇವಲ ೧೭ ವರ್ಷ ಆಗಿದೆ. ೧೫ ವರ್ಷಗಳ ಹಿಂದೆ ನೀವು ಉದಾಹರಿಸಿರೋ ಶ್ರೀಮಂತರ ರೀತಿಯಿದ್ದ ಜನಗಳ ಹೆಸರು ಕೊಡಿ ಸ್ವಾಮಿ. ಯಾಕೆ? ಐವತ್ತು ವರ್ಷಗಳ ಹಿಂದೆ ಹೋದ್ರಿ?? ಹಾಗಂತ, ಈಗ ಯಾರೂ ಫಿಲಾಂಥ್ರಫಿ ಮಾಡ್ತಿಲ್ವ? ಅವರಲ್ಲಿ ಯಾರೂ ಐಟಿನವರಿಲ್ವ? ಅಥವ ನಿಮಗೆ ಉದಾಹರಿಸಕ್ಕೆ ಮನಸ್ಸಿಲ್ವ?

ಕೂಲಿಯವನು ಮೊಬೈಲ್ ತಗೊಂಡ್ರೆ ಐಟಿನವರೇನು ಮಾಡ್ತಾರೆ? ಐಟಿನವರು ಸಿಕ್ಕಸಿಕ್ಕ ಜನಗಳಿಗೆ ’ಮೊಬೈಲ್ ತಗೊಳಿ’ ಅಂತ ಹೇಳ್ಕೊಂಡು ಓಡಾಡ್ತಿದ್ರ? ನಿಜಕ್ಕೂ ಟೆಕ್ನೋಲಜಿ ಇವತ್ತು ಎಲ್ಲರಿಗೂ ಸಿಗೋಕೆ ಒಂಥರ ಐಟಿ ಕಾರಣವಾಗಿದೆ. ನನಗೆ ಈಗ್ಲೂ ಜ್ಞಾಪಕವಿದೆ, ಮೊದಲು ಮೊಬೈಲ್ ಶುರುವಾದಾಗ, ಇನ್ಕಮಿಂಗ್ ಕೂಡ ಆರು ರುಪಾಯಿ ಇತ್ತು! ಈಗ ಭಾರತದಲ್ಲಿ ಮಾತ್ರ ಇನ್ಕಮಿಂಗ್-ಗೆ ದುಡ್ಡಿಲ್ಲ! ಬೇರೆ ದೇಶಗಳಿಗೆ ಹೋಗಿ ನೋಡಿ..

ಇವತ್ತು ’ಈ ಐಟಿ ನವರಿಗೆ ಅನುಕಂಪ ತೋರಿಸೋರು ಯಾರೂ ಇಲ್ಲ’ ಅಂತ ಬರೆದಿದ್ದೀರ. ಅವರ ಹಣೇಬರಹ ಅಂತ ಬಿಡಿ. ನಿಮಗೇನು? ಅವರಿಂದ ಯಾರಿಗೂ ಯಾವ ಸಹಾಯವೂ ಆಗದಿದ್ದಲ್ಲಿ ಅವರ ಪರಿಸ್ಥಿತಿ ಬಗ್ಗೆ ನಿಮಗೇಕೆ ಇಷ್ಟು ಕಳಕಳಿ? ಜನಕ್ಕೆ ನಿಮ್ಮ ಮನೆ ನಮಗೆ ಬಿಡಿ ಅಂತ ಯಾರು ಕೇಳಿದ್ದು? ಜನಗಳೇ ದುಡ್ಡು ಮಾಡೋ ಎಲ್ಲಾವಿಧಾನಗಳನ್ನೂ ಹುಡುಕಿಕೊಂಡು ಐಟಿಜನಗಳನ್ನ ದೋಚುತ್ತಿರೋದು. ದುಡ್ಡು ಯಾರಿಗೆ ಬೇಡ? ಖರ್ಚು ಮಾಡದಿದ್ರೆ ಐಟಿಯವರು ಇನ್ನಷ್ಟು ಉಳಿಸಬಹುದಲ್ವ?

ಐಟಿಯವರ ಕೆಲಸದಿಂದ ಭಾರತಕ್ಕೆ ಯಾವುದೇ ಪೇಟೆಂಟ್ ಬಂದಿಲ್ಲ ನಿಜ. ಆದ್ರೆ ಹರಗಿನವರು ಈನೇನು ಮಾಡಿದ್ದಾರೆ? ನಮ್ಮ ಪುರಾತನ ಶಾಸ್ತ್ರಗಳನ್ನೆಲ್ಲ ಹೊರಗಿನವರಿಗೆ ಬಿಟ್ಟುಕೊಡಲು ಸಿದ್ಧರಿದ್ದಾರೆ. ಸ್ವಲ್ಪ ವರ್ಷಗಳ ಹಿನ್ದೆ ಓದಿದ ನೆನಪು, ವಾಸ್ತುಶಾಸ್ತ್ರನ ಜರ್ಮನಿಯವರು ನಮ್ಮದು ಅಂತ ರಿಜಿಸ್ಟರ್ ಮಾಡ್ಕೊಂಡ್ರಂತೆ. ಈಗ ’ಯೋಗ’ದ ಮಾತು ಕೇಳಿಬರುತ್ತಿದೆ. ಬೇರೆಯವರು ಅದರ ಮಹತ್ವ ಕಂಡುಕೊಂಡಮೇಲೆ ನಮ್ಮವರು ಎಚ್ಚೆತ್ತುಕೊಳ್ಳುತ್ತಿದ್ದರೆ. ಬೇರೆಯವರು ನಮ್ಮದು ಅಂತ ಹೇಳಿಕೊಳ್ಳೋತನಕ ಇವರೆಲ್ಲಿದ್ರು? :)

ಈಗಿನ ’ರೆಸೆಷನ್’ ಅನ್ನೋದು ಐಟಿಯದ್ದಲ್ಲ. ಬೇರೆ ಕ್ಷೇತ್ರದವರ ಅತಿಯಾಸೆಯಿಂದಾದದ್ದು. ಅಮೆರಿಕದ ಬ್ಯಾಂಕ್‍ಗಳನ್ನ ಬಯ್ಯಿರಿ. ಲೀಮನ್ ಬ್ರದರ್ಸ್ ದಿವಾಳಿಗೂ ಐಟಿನೇ ಕಾರಣನ? GM, Ford.. ಎಲ್ಲಾ ದುಡ್ಡಿಲ್ಲದಿರೋಕೂ ಐಟಿನೇ ಕಾರಣನ? ಎಲ್ಲಾವುದಕ್ಕೂ ಐಟಿ ಕಾರಣವಲ್ಲ.

ಜನಗಳಿಗೆ ಐಟಿನವರು ಏನು ಮಾಡುತ್ತಿದ್ದಾರೆ ಅಂತ ಗೊತ್ತಿಲ್ಲ ಅಂದ್ರಿ. ಇರಬಹುದು. ಯಾಕಂದ್ರೆ, ಐಟಿ ಅಂದ್ರೆ ಏನು? ಅದರಿಂದ ಆಗೋ ಪ್ರಯೋಜನಗಳೇನು ಅಂತ ಯಾರು ಹೇಳ್ತಿದ್ದಾರೆ? ಏಳನೇ ತರಗತಿವರೆಗೆ ಇಂಗ್ಲೀಷ್ ಓದೋದೇ ಬೇಡ ಅಂತ ಧರಣಿ ಕೂರ್ತಿರೊ ರಾಜಕಾರಣಿಗಳಿರೋವಾಗ, ಇನ್ನು ಸ್ಕೂಲ್ನಲ್ಲಿ ಕಂಪ್ಯುತರ್ ಮತ್ತೆ ಅದರ ಫಲಾಫಲಗಳನ್ನ ಯಾರು ಹೇಳ್ಕೊಡ್ತಾರೆ? ಐಟಿನವರು ಏನು ಮಾಡ್ತಿದ್ದಾರೆ ಅಂತನೇ ಗೊತ್ತಿಲ್ಲದಿರೋರು, ಅವರಿಂದ ಕೆಟದ್ದಾಗ್ತಿದೆ ಅಂತ ಹೇಗೆ ಹೇಳ್ತರೆ? ನಿಮ್ಮ ಲೇಖನ ಓದಿದ್ಮೇಲೆ ನನಗೆ ಅನ್ನಿಸ್ತಿದೆ ನಿಮಗೂ ಕೂಡ ಅದರ ಗಂಧವಿಲ್ಲ ಅಂತ! ನೀವು ಐಟಿಯವರನ್ನ ನಿಮ್ಮ ಈ ಲೇಖನದಲ್ಲಿ ಕೇವಲ ಹಣದಿಂದ ಅಳೆದಿದ್ದೀರಿ. ಅದನ್ನ ಬಿಟ್ಟು ಬೇರೆ ಯೋಚಿಸಿ ನೋಡಿ. ಜೊತೆಗೆ ನಿಮ್ಮ ಮನಸ್ಸಿನಲ್ಲಿ ಐಟಿಯವರ ಬಗ್ಗೆ ಕೇವಲ ಕೋಪವಷ್ಟೇ ಕಾಣುತ್ತಿದೆ. ಲೇಖನ ಐಟಿ ಅಂದ್ರೇನು ಅಂತ ಗೊತ್ತಿಲ್ಲ ದಿರೋರ್ಗೆ ಐಟಿಜವಗಳ ಬಗ್ಗೆ ಇನ್ನಷ್ಟು ವ್ಯರ್ಥ ಕೋಪಬರಿಸೋದ್ರಲ್ಲಿ ಯಶಸ್ವಿಯಾಗಬಹುದು. ನಿಮ್ಮ ಉದ್ದೇಶ ಕೂಡ ಅದೇ ಇರಬೇಕು ಅನ್ನಿಸ್ತಿದೆ. ಐಟಿ ಕ್ಷೇತ್ರದಲ್ಲಿರುವವರು ದುಂದುವೆಚ್ಚ ಮಾಡಿಲ್ಲ ಅಂತ ನಾನು ಹೇಳ್ತಿಲ್ಲ. ಆದ್ರೆ ಕೆಲವೇ ಅಂತ ಜನಗಳಿಂದ generalizeಮಾಡಿದ್ರೆ ತಪ್ಪಗುತ್ತಲ್ವ? ಎಷ್ಟೋ ಪತ್ರಿಕೆಗಳು, ಪತ್ರಕರ್ತರೇ ಇಲ್ಲ ಸಲ್ಲದ್ದನ್ನು ಬರೆದು ಜನಗಳನ್ನ ತಪ್ಪು ದಾರಿಗೆಳಿತಿದ್ದಾರೆ ಅಂತ ಕೂಡ ನಾನು ಪತ್ರಿಕೆಗಳಲ್ಲೆ ಓದಿದ್ದೇನೆ. ಹಾಗಂತ, ನೀನು ಕೂಡ ಅವರಲ್ಲಿ ಒಬ್ಬರು ಅಂತ ಹೇಲೋಕಾಗತ್ತ, ಕೇವಲ ನೀವೂ ಕೂಡ ಪತ್ರಿಕೆಗಳಲ್ಲಿ ಬರಿತೀರ ಅಂತ?

ಪ್ರತಾಪ ಸಿಂಹ ಅವರೆ, ನೀವು ಪ್ರಸಿದ್ಧ ಕೇಖನಕಾರು. ಪ್ರಭಾವಶಾಲಿಗಳೂ ಹೌದು. ನಿಮ್ಮ ಲೇಖನಕ್ಕೆ ಎಷ್ಟೋಮಂದಿ ಕಾಯ್ತಿರ್ತಾರೆ. ಅವರಿಗೆಲ್ಲ ನೀವು ಬರೆದದ್ದೇ ನಿಜ. ಅವರು ಮುಂದೆ ಯೋಚಿಸುವುದೇ ಇಲ್ಲ. ಹೀಗಿರುವಾಗ, ನೀವು ಹಿಂದೆ ಮುಂದೆ ಯೋಚಿಸದೆ ಐಟಿ ಜನಗಳ ಬಗ್ಗೆ ಹೇಗೆ ಹೀಗೆಲ್ಲಾ ಬರೆಯಬಹುದೆ? ಅದರಿಂದ ಜನಗಳ ಹುಚ್ಚು ಕಲ್ಪನೆಗಳಿಗೆ ದಾರಿಯಾಗಿ, ಅಮಾಯಕರಿಗೆ ತೊಂದರೆಯಾಗುತ್ತಲ್ವ? ನಿಮಗೆ ಸಾಧ್ಯವಾದರೆ ಐಟಿ ಅಂದರೆ ಏನು ಅಂತ ಲೇಖನ ಬರೆಯಿರಿ. ಅದರಬಗ್ಗೆ ಜನರಿಗೆ ತಿಳಿಹೇಳಿ ಆದ್ರೆ ’ಐಟಿಯವರೆಲ್ಲಾ ದುರಹಂಕಾರಿಗಳು’ ಅನ್ನೊ ಧೋರಣೆಯ ಮಾತು ಯಾಕೆ ಸರ್? ನೇವು ತುಂಬಾ ವಿಶಯ ತಿಳಿದಿದ್ದೇರಿ, ಜನಗಳಿಗೆ ಯೋಚಿಸುವಂಥಾ ಲೇಖನಗಳನ್ನ ಬರೀತೀರಿ ಅಂತೆಲ್ಲಾ ಅಂದುಕೊಂಡಿದ್ದ ನನಗೆ, ಈ ಲೇಖನ ಓದಿ ಎಲ್ಲಾ ತಪ್ಪು ಅನ್ನಿಸತೊಡಗಿದೆ. ನಿಮ್ಮಂಥಾ ಪ್ರಭಾವಿ ಲೇಖಕರು ಹೀಗೆ ಯಾರನ್ನೇಆಗಲಿ ಅನ್ನಬಹುದೆ? ಇಂಥಾ ಲೇಖನಗಳಿಂದ ಐಟಿಯವರ ಬಗ್ಗೆ ಕೆಲವು ಜನಗಳಿಗಿರೋ ಕೋಪಕ್ಕೆ ಇನ್ನಷ್ಟು ತುಪ್ಪ ಸುರಿದಂತಾಗುತ್ತಾಲ್ವ?

ನನಗನ್ನಿಸಿದ್ದನ್ನು ಹೇಳಬಯಸಿದೆ. ಅದನ್ನೇ ಇಲ್ಲಿ ಬರೆದಿದ್ದೇನೆ. ನಿಮಗೆ ಬೇಜಾರು ಪಡಿಸುವುದಕ್ಕಲ್ಲ. ನನ್ನ ಮಾತುಗಳು ನಿಮಗೆ ಬೇಜಾರುಮಾಡಿದ್ದರೆ, ದಯವಿಟ್ಟು ಕ್ಷಮಿಸಿ - ನಾನು ನಿಮ್ಮಷ್ಟು ದೊಡ್ಡವನಲ್ಲ. ಹಾಗೂ ನಿಮ್ಮಷ್ಟು ಜ್ಞಾನವೂ ಇಲ್ಲ ಅಥವ ನಿಮ್ಮೊಂದಿಗೆ ಜಗಳವಾಡೋ ಮನಸ್ಸೂ ಇಲ್ಲ. ಯಾವುದೇ ಒಂದು ಹೊಸದು ಬಂದಾಗ, ಅದರಿಂದ ಉಪಯೋಗಗಳು ಎಷ್ಟೇ ಇದ್ದರೂ, ಕೆಲವುಬಾರಿ ಋಣಾತ್ಮಕವಾಗಿಯೂ ಅದು ಕೆಲಸ ಮಾಡಿರಬಹುದು. ಆದರೆ, ಅದನ್ನು ಹೀಯಾಳಿಸದೆ, ಎಲ್ಲಾ ಋಣಾತ್ಮಕಗಳನ್ನ ಧನಾತ್ಮಕವಾಗಿ ಮಾಡೋಕೆ ಪ್ರಯತ್ನ ಮಾಡಬೇಕು ಅಲ್ವ, ಸರ್?

ನಿಜವಾಗಿ ಇದು ನಿಮ್ಮ article ಅಲ್ಲ!!

ಇಂತಿ,
ಶ್ರೀ

8 comments:

ವಿ.ರಾ.ಹೆ. said...

IT ಯವರಿಗೆ ಬೈದಾಗ ಅವಲೋಕನ activate ಆಯ್ತಲ್ಲ ಸಾರ್! ;-) ಇದಕ್ಕಾದ್ರೂ ಪ್ರತಾಪ್ ಗೆ ಥ್ಯಾಂಕ್ಸ್ ಹೇಳಲೇ ಬೇಕು.


ಇನ್ನೊಂದು ವಿಷಯ ಏನಂದ್ರೆ ಏಳನೇ ಕ್ಲಾಸಿನವರೆಗೆ ಇಂಗ್ಲೀಷ್ ಬೇಡ ಅಂತ ಯಾರೂ ಧರಣಿ ಕೂತಿಲ್ಲ ಸಾರ್, ಇಂಗ್ಲೀಷ್ ಮಾಧ್ಯಮ ಬೇಡ ಅಂತ ಕೂತಿದ್ರು. ಅಷ್ಟಕ್ಕೂ ಐ.ಟಿ. ಬಗ್ಗೆ ತಿಳ್ಕಳಕ್ಕೆ ಇಂಗ್ಲೀಷ್ ಮಾಧ್ಯಮದವ್ರಿಗೆ ಮಾತ್ರ ಆಗದು ಅಂತ ಏನಿಲ್ಲ, ನಮ್ಮಂತವರೂ ಚೆನ್ನಾಗಿಯೇ ತಿಳ್ಕಂಡಿದ್ದೀವಿ. ಇನ್ನು ಒಳಗಿನ ತಂತ್ರಜ್ಞಾನದ ಬಗ್ಗೆ ತಿಳ್ಕಳಕ್ಕೆ ಮಾಧ್ಯಮ ಅನ್ನೋದು ಸಹಾಯಕ್ಕೆ ಬರಲ್ಲ. ಅದು ಅವನ ಬುದ್ಧಿವಂತಿಕೆಗೆ ಸಂಬಂಧಿಸಿದ್ದು.

ಶ್ರೀ said...

ವಿಕಾಸ್,

:) ನಿಜ.. ನಾನು ಇದನ್ನ ಬರೆಯಲು ಶುರು ಮಾಡಿದಾಗ ಜ್ಞಾಪಕಕ್ಕೆ ಬಂದಿದ್ದೇ ನೀವು, ಯಾಕಂದ್ರೆ ನಾನು ಬ್ಲಾಗ್ ಬೆರೆಯೋಕೆ ಪ್ರಾರಂಭಿಸಿದ್ದೇ ನಿಮ್ಮ ಬ್ಲಾಗಿಗೆ ಉತ್ತರ ಕೊಡೋಕೆ!!

ಸರಿ, ನಾನೂ ಕೂಡ ಸ್ವಲ್ಪ ಉತ್ಪ್ರೇಕ್ಷೆಯಾಗೇ ’ರಾಜಕಾರಣಿಗಳು ಧರಣಿ ಕೂತಿದ್ರು’ ಅಂತ ಬರೆದೆ.. ನನಗೂ ಗೊತ್ತು.. ಆದ್ರೆ, ತುಂಬಾ ಪುಸ್ತಕಗಳು ಇನ್ನೂ ಸಿಗೋದು ಇಂಗ್ಲೀಷ್‍ನಲ್ಲೇ ಅದನ್ನೂ ನಾವು ಒಪ್ಪಲೇಬೇಕಲ್ವ? ನಿಮ್ಮಂಥವರು ಕೇವಲ ಇಂಗ್ಲಿಷ್‍ನಲ್ಲಿರೋ ವಿಶಯಗಳನ್ನೆಲ್ಲಾ ಕನ್ನಡಕ್ಕೆ ತರ್ಜಿಮೆ ಮಾಡಬೇಕು!

ಕುಕೂಊ.. said...

ಶ್ರೀಯವರೆ,
ಇದೇ ಪ್ರತಾಪಸಿಂಹ ಹಿಂದೊಮ್ಮೆ ಐಟಿ ಭಾರತದ ಭಾಗ್ಯದ ಬಾಗಿಲು. ಅಮೇರಿಕನೇ ಸ್ವರ್ಗ. ಐಟಿಯಿಂದನೇ ಭಾರತದ ಜನಗಳಿಗೆ ತುತ್ತು ಕೂಳು ಸಿಗುತ್ತಿರುವುದು ಅನ್ನುವ ಬಗೆಯಲ್ಲಿ ಬರೆದಿದ್ದರು. ನೆಹರು ಭಾರತದ ಶತ್ರು ಅನ್ನೋ ಬಗೆ ಬರೆದಿದ್ದೂ ಇನ್ನೂ ಹಸಿ ಹಸಿ ನೆನಪು, ಗಾಂಧಿಜಿಯಂತೂ ಪುಕ್ಕಟೆ ಸಿಕ್ಕಿದ್ದಾರೆ ಇಂತವರ ಬರಹದಲ್ಲಿ ಬಾಯಿಗೆ ಬಂತಂದಂತೆ ಬೈದು ಬರೆಯೋಕೆ. ಆದರೆ ಇಂದು ತನ್ನ ಬರಹದಲ್ಲಿ ಗಾಂಧೀಜಿಯಬಗ್ಗೆ ಹೊಗಳಿ ಬರೆದಿದ್ದಾರೆ ತಮ್ಮ ಬೇಳೆ ಬೇಯಸಿಕೊಳ್ಳಲು. ಇದೇ ಪ್ರತಾಪ ತನ್ನ ಒಂದು ಬರಹದಲ್ಲಿ "ಗಾಂಧಿ ಎಂಬ ಮಹಾತ್ಮನಿಂದ ದೇಶ ಹಾಳಾಗಿ ಅರೆಬಿತ್ತೋಯ್ತು" ಅಂತನೂ ಗಾಂಧಿಜಿಯವರ ಬಗ್ಗೆ ಕೀಳು ಕೀಳಾಗಿ ಬರೆದಿದ್ದರು ಈ ಪ್ರತಾಪಸಿಂಹರು. ನಾನು ಅವರ ಹತ್ತು ಹಲವಾರು ಬರಹಗಳನ್ನು ಹಲವಾರು ದಿನಗಳಿಂದ ಓದಿದಮೇಲೆ ಗೊತ್ತಾಗಿದ್ದು ಏನಂದ್ರೆ ಪ್ರತಾಪ ಸಿಂಹರು ಬಣ್ಣ ಬದಲಾಯಿಸೋ ಗೋಸುಂಬೆ ಅಂತ. ಅವರೊಬ್ಬ ಜವಬ್ದಾರಿಯುತ ಬರಹಗಾರ ಅಲ್ಲ. ಗಾಳಿಬಂದಾಗ ತೂರಿಕೊಳ್ಳೋದು ಅವರ ನಡವಳಿಕೆ. ತರ ತರವಾಗಿ ಸೊಗಸಾಗಿ ಬರೆದ ಜನಗಳನ್ನು ಮೆಚ್ಚಿಸುವ ಕೆಲಸಮಾತ್ರ ಮಾಡುವುದು ಅವರ ಬರಹ. ಸಮಾಜ ಕಟ್ಟುವಂತ ಬರಹ ಇವರದು ಅಂತ ನನಗೆ ಅನ್ನಿಸುವುದೇ ಇಲ್ಲ. ಜನಗಳ ಭಾವನಾತ್ಕ ತುಡಿತವನ್ನು ದಿಗಿಲೆಬ್ಬಿಸುವಂತೆ ಬರೆಯುವುದು ಇವರ ಚಾಳಿ. ಇವತ್ತು ಇಂಗೇಳಿ ನಾಳೆ ಅಂಗೆ ಹೇಳೋದು ಅವರ ಹುಟ್ಟುಗುಣ. ಇವತ್ತು ಸೈ ಸೈ ಹೇಳಿ ನಾಳೆ ಚಿ ತೂ ಎನ್ನವುದು ಇವರ ನಡವಳಿಕೆ. ಬೇಕಾದರೆ ಅವರ ಎಲ್ಲಾ ಬರಹಗಳ ಮೇಲೆ ಒಮ್ಮೆ ಕಣ್ಣಾಡಿಸಿ ನೋಡಿ. ಹಳೆಯ ಬರಹದಲ್ಲಿ ಹತ್ತಾರು ಕಡೆ ಗಾಂಧೀಜಿಯ ಬಗ್ಗೆ ಕೀಳಾಗಿ ಬರೆದು ತಾನೊಬ್ಬ ದೊಡ್ಡ ಪೋತಪ್ಪನಂತೆ ತೋರಿದ್ದಾನೆ. ಅದೂ ಅಕ್ಟೋಬರ್ ತಿಂಗಳ ಮೊದಮೊದಲೇ ಬರೆದು ತನ್ನ ಬರಹದ ಬಗ್ಗೆ ಎಲ್ಲರಿಂದ ಸೈ ಸೈ ಎನ್ನಿಸಿಕೊಳ್ಳೋ ಹುನ್ನಾರ ಮಾಡಿದ್ದರು ಸಹೇಬರು. ಹಾಗೆನೇ ಎಲ್ಲಾ ಜನಗಳ ಬಗ್ಗೆ ಜನಗಳ ಭಾವನೆಗಳಿಗೆ ಹೊಂದಿಕೊಳ್ಳುವಂತೆ ಬರೆದು ಸೈ ಸೈ ಅನ್ನಿಸಿಕೊಳ್ಳುವುದು ಈಯಪ್ಪನ ವರಸೆ. ಇಂತವರ ಮಾತಿಗೆ ಬರಹಗಳಿಗೆ ಮಹತ್ವಕೊಡಬೇಡಿ. ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಸಾಡಿ.

"""ನನಗನ್ನಿಸಿದ್ದನ್ನು ಹೇಳಬಯಸಿದೆ. ಅದನ್ನೇ ಇಲ್ಲಿ ಬರೆದಿದ್ದೇನೆ. ನಿಮಗೆ ಬೇಜಾರು ಪಡಿಸುವುದಕ್ಕಲ್ಲ. ನನ್ನ ಮಾತುಗಳು ನಿಮಗೆ ಬೇಜಾರುಮಾಡಿದ್ದರೆ, ದಯವಿಟ್ಟು ಕ್ಷಮಿಸಿ - ನಾನು ನಿಮ್ಮಷ್ಟು ದೊಡ್ಡವನಲ್ಲ. ಹಾಗೂ ನಿಮ್ಮಷ್ಟು ಜ್ಞಾನವೂ ಇಲ್ಲ ಅಥವ ನಿಮ್ಮೊಂದಿಗೆ ಜಗಳವಾಡೋ ಮನಸ್ಸೂ ಇಲ್ಲ. ಯಾವುದೇ ಒಂದು ಹೊಸದು ಬಂದಾಗ, ಅದರಿಂದ ಉಪಯೋಗಗಳು ಎಷ್ಟೇ ಇದ್ದರೂ, ಕೆಲವುಬಾರಿ ಋಣಾತ್ಮಕವಾಗಿಯೂ ಅದು ಕೆಲಸ ಮಾಡಿರಬಹುದು. ಆದರೆ, ಅದನ್ನು ಹೀಯಾಳಿಸದೆ, ಎಲ್ಲಾ ಋಣಾತ್ಮಕಗಳನ್ನ ಧನಾತ್ಮಕವಾಗಿ ಮಾಡೋಕೆ ಪ್ರಯತ್ನ ಮಾಡಬೇಕು ಅಲ್ವ, ಸರ್?"""

ಕಂಡ ಸತ್ಯವನ್ನು ಹೇಳಿಕೊಳ್ಳುವಾಗ ಯಾಕಿಶ್ಟು ಕೀಳರಿಮೆಯೋ ನಿಮಗೆ ತಿಳಿಯದು??? ಎಂತಹ ಅರಿವುಳ್ಳವರಾದರೇರು, ತಿಳುವಳಿಕೆಯ ಮಂದಿಯಾದರೇನು, ಪಂಡಿತರಾದರೇನು?? ಸಮಾಜದ ಹಾದಿ ತಪ್ಪಿಸುವ ಕೆಲಸಮಾಡುವವರಿಗೆ ಚೀಮಾರಿಹಾಕಿ ಅಂತವರಿಗೆ ತಡೆಯಾಕುವುದು ಒಬ್ಬ ಜವಾಬ್ದಾರಿ ಮನುಶ್ಯನ ಕೆಲಸ. ಪ್ರಾತಾಪ ಸಿಂಹರ ಬರಹ ಓದುಗರನ್ನು ಸೆಳೆಯುತ್ತದೆ, ಆಗಂದ ಮಾತ್ರಕ್ಕೆ ಅವರು ತುಂಬಾ ಬಲ್ಲವರೆಂದೇನು ಅಲ್ಲ, ಅವರೇಳಿದ್ದೆನ್ನೆಲ್ಲವನ್ನೂ ಒಪ್ಪಿಕೊಳ್ಳಬೇಕೆಂದೇನಿಲ್ಲ ಅದು ಅವರಿಗೆ ಕೈಗೂಡಿದ ಬರಹದ ಕಲೆ ಅಶ್ಟೆ.

ಇಂಗ್ಲೀಶ್ ಬಗ್ಗೆ ನಿಮ್ಮಲ್ಲಿರುವ ಹೆಚ್ಚುಗಾರಿಕೆ ಯಾಕೋ ಹೆಚ್ಚಾಯಿತು ಅನಿಸುತ್ತಿದೆ. ಇಂಗ್ಲೀಶ್ ನಿಂದಲೇ ಗ್ನಾನ ಬೆಳೆಯೋದು ಇಂಗ್ಲೀಶ್ನಲ್ಲೇ ಹೊತ್ತಿಗೆ ಇರೋದು ಅನ್ನವುದು ಅಪ್ಪಟ ಸುಳ್ಳು. ನಾನು ಜಪಾನ್,ಜರ್ಮನಿ ಹಾಗು ಪ್ರಾನ್ಸ ಜನಗಳ ಜೊತೆ ಕೆಲಸಮಾಡಿದ್ದೇನೆ ಅವರ Technical Standareds ನ್ನೂ ಬಳಸಿದ್ದೇನೆ. ಅವರ ಯಾವ Standareds ಇಂಗ್ಲೀಶ್ ನಲ್ಲಿಲ್ಲ. ಅವರೆಂದೂ ಇಂಗ್ಲೀಶ್ ಗೆ ಜೋತು ಬಿದ್ದಿಲ್ಲ ಅನ್ನುವುದು ನನಗೆ ತಿಳಿದು ಬಂತು. ಇಂಗ್ಲೀಶ್ ಬಳಸದೇ ಅವರು ಸೈನ್ಸ್ ನಲ್ಲಿ, ಟೆಕ್ನಾಲಾಜಿಯಲ್ಲಿ ಎಲ್ಲರಿಗಿಂತ ಮುಂದಿದ್ದಾರೆ ಅನ್ನುವುದಂತೂ ದಿಟ. ಅವರೆಂದೂ ಇಂಗ್ಲೀಶ್ ಅಂತರಾಶ್ಟ್ರಿಯ ಭಾಶೆ ಎಂದು ಒಪ್ಪಿಕೊಳ್ಳಲಾರರು. ಇಂಗ್ಲೀಶ್ ನಿಂದ ನಮ್ಮ ಉದ್ದಾರವಾಗಿರೋದು, ಆಗುತ್ತಿರುವುದು ಅನ್ನುವುದು ನಮ್ಮ ತಲೆಯೊಳಗೆ ಕೂತಿರುವ ಗುಲಾಮಿತನದ ಬೂತವಶ್ಟೆ. ಇಂಗ್ಲೀಶ್ ಇಲ್ಲದೆ ಎಲ್ಲರೂ ಬೆಳೆಯಬಹುದು.

ನಿಮ್ಮವ
ಕುಮಾರಸ್ವಾಮಿ.ಕಡಾಕೊಳ್ಳ
ಪುಣೆ

ಶ್ರೀ said...

ಕುಮಾರಸ್ವಾಮಿಯವರೆ,

ಮೊದಲಿಗೆ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ನಾನು ಇಂಗ್ಲೀಶ್ ಮೇಲು ಕನ್ನಡ ಕಡಿಮೆ ಅಂತ ಹೇಳಳು ಪ್ರಯತ್ನಿಸಿಲ್ಲ. ಹಾಗೊಮ್ಮೆ ನಿಮಗೆ ಅನ್ನಿಸಿದರೆ, ಕ್ಷಮಿಸಿ. ನಾನು ಕೂಡ ಕನ್ನಡ ಪ್ರೇಮಿ. ಆದ್ದರಿಂದಲೇ ಕನ್ನಡದಲ್ಲಿ ಬ್ಲಾಗಿಸಲು ಶುರುಮಾಡಿದ್ದು. ಆದರೆ ಐಟಿ ಮತ್ತು ಕಂಪ್ಯುಟರ್‌ಗಳ ಬಗ್ಗೆ ಈಗಲೂ ಇಂಗ್ಲೀಶ್‍ನಲ್ಲೇ ಹೆಚ್ಚಿನ ಪುಸ್ತಕಗಳಿರುವುದು. ಕನ್ನಡದಲ್ಲಿ ಕಡಿಮೆ, ಇಲ್ಲ ಅಂದರೂ ತಪ್ಪಿಲ್ಲವೇನೊ. ಆದ್ದರಿಂದ ನಾನು ಕೇವಲ ಕನ್ನಡವಲ್ಲ ಇಂಗ್ಲೀಶ್ ಕೂಡ ಗೊತ್ತಿರಬೇಕು ಅಂತ ಅಭಿಪ್ರಾಯ ನನ್ನದು. ಆದರೆ, ನನಗೂ ನನಗೆಲ್ಲಾ ಗೊತ್ತಿರುವುದನ್ನು ಕನ್ನಡಲ್ಲಿ ಬರೆಯಬೇಕು ಅಂತ ಮಹತ್ವಾಕಾಂಕ್ಷೆ ಇದೆ. ನೋದೋಣ, ನಿಮ್ಮಂಥವರೆಲ್ಲಾ ಮುಂದುವರಿದರೆ ಅದು ನಿಜವಾಗಲೂ ಸಾಧ್ಯ! ಅದನ್ನೆ ನಾನು ವಿಕಾಸ್‍ಗೆ ಕೂಡ ನಾನು ಮೇಲೆ ಹೇಳಿದ್ದು.

ಇನ್ನು ಪ್ರತಾಪರಬಗೆಗಿನ ನಿಮ್ಮ ಅಭಿಪ್ರಾಯ.. ನಾನು ಅವರ ಲೇಖನಗಳನ್ನ ಯಾವಾಗಲೂ ಓದೋದಿಲ್ಲ. ಯಾರಾದರೂ ಯಾವುದಾದರೂ ಚೆನ್ನಾಗಿ ಬರೆದಿದ್ದಾರೆ ಅಂದ್ರೆ ಮಾತ್ರ ಓದೋದು. ಈ ಲೇಖನ ಕೂಡ ಹಾಗೇ ಓದಿದ್ದು. ಅದನ್ನ ಓದಿದ ತಕ್ಷಣ ಉತ್ತರಿಸಬೇಕು ಅನ್ನಿಸಿತು. ಬ್ಲಾಗಿಸಿದೆ.

ಚೀಮಾರಿಹಾಕೋಕೆ ನಿಜವಾಗಿ ಭಯವಿಲ್ಲ ಸರ್. ಆದ್ರೂ ಅವರು ಅವರ ಕ್ಷೇತ್ರದಲ್ಲಿ ಸಾಧನೆಮಾಡಿರುವುದಕ್ಕೆ ನಾನು ಬೆಲೆಇಟ್ಟು ಬರೆಯಬೇಕು ಅನ್ನಿಸ್ತು ಅಷ್ಟೆ. ಪ್ರತಾಪರ ಹಿಂಬಾಲಕರಿಗೆ ನಿಜವಾಗಿ ಕೋಪಬಂದಿರಬಹುದು ಅನ್ನಿಸುತ್ತೆ!!

ಎಲ್ಲಾ ದೇಶಗಳೂ ಇಂಗ್ಲೀಶನ್ನೇ ಅವಲಂಬಿಸಿಲ್ಲ, ಟೆಕ್ನಾಲಜಿಯಲ್ಲಿ ತುಂಬಾ ಮುಂದಿದ್ದಾರೆ ನೀವು ಹೇಳಿರೋ ದೇಶಗಳು.. ಒಪ್ಪುವ ಮಾತೇ. ಆದರೂ, ಆರ್ಕಿಟೆಕ್ಟ್‍ಗಳು ಇಂಗ್ಲೀಶ್ ಬಾರದಿದ್ದವರಲ್ಲ ಅನ್ನುವುದು ನನ್ನ ಭಾವನೆ (ನಿಜವೂ ಇರಬಹುದು ಅಲ್ಲವೆ?).. ನಾವೂ ಹಾಗೇ ಆಗಬೇಕೆನ್ನುವುದೇ ನನ್ನ ಆಸೆ ಕೂಡ.. ಅದಕ್ಕೆಲ್ಲಾ ಮುಂಚೆ ಕನ್ನಡದಲ್ಲಿ ಎಲ್ಲಾ ವಿಶಯಗಳೂ ಎಲ್ಲಾರಿಗೂ ಸಿಗುವಹಾಗೆ ಮಾಡಬೇಕು.

ನಿಮ್ಮ ಕಾಮೆಂಟ್ ನೋಡಿ ಖುಷಿಯಾಯಿತು. ಮತ್ತೆ, ಧನ್ಯವಾದಗಳು!

- ಶ್ರೀ

ಕುಕೂಊ.. said...

ಹೌದು ಶ್ರೀ,
ಮೊದಲು ನಾವು ಮಾಡಬೇಕಾದ ಕೆಲಸವೇನೆಂದರೆ ಅಗತ್ಯವಿರುವ ಎಲ್ಲಾ ಸಾಯಿತ್ಯವನ್ನು ಕನ್ನಡದಲ್ಲಿ ಸಿಗುವಂತೆ ಮಾಡಬೇಕು. (ಎಚ್ಚರಿಕೆ: ಸಂಸ್ಕೃತಿಕರಣವಲ್ಲ: ಡಿ.ಎನ್. ಶಂಕರ ಬಟ್ಟರ "ಕನ್ನಡಕ್ಕೆ ಬೇಕು ಕನ್ನಡದೇ ಬರಹ" ಹೊತ್ತಿಗೆಯನ್ನು ಓದಿರದಿದ್ದರೆ ಒಮ್ಮೆ ಓದಿ) ಈ ನಿಟ್ಟಿನಲ್ಲಿ ನಮ್ಮ ನಿಮ್ಮಂತವರೆಲ್ಲ ಕೂಡಿ ಕೆಲಸ ಮಾಡಬೇಕು. ಎಲ್ಲರಿಗು ಸುಲಬವಾಗಿ ತಿಳಿಯುವ ಬಗೆಯಲ್ಲಿ ಬರೆಯಬೇಕು. ಆದರೆ ದುರಂತ ಏನೆಂದರೆ ಇವತ್ತಿರುವ ಕನ್ನಡ ಟೆಕ್ನಾಲಾಜಿ ಸಾಯಿತ್ಯ ಸಂಸ್ಕೃತ ಮಯವಾಗಿದೆ. ಯಾರಿಗೂ ತಿಳಿಯದ ಹಾಗೆ ಇದೆ. ಆ ಬರಹವನ್ನು ಓದುವುದು ಕನ್ನಡಿಗರಿಗೆ ಕಬ್ಬಿಣದ ಕಡಲೆಯಾಗಿದೆ. ಆ ತಪ್ಪು ಮತ್ತೇ ಆಗದಂತೆ ಎಲ್ಲರಿಗೂ ತಿಳಿಯುವ ಬಗೆಯಲ್ಲಿ ಅಪ್ಪಟ ಕನ್ನಡದಲ್ಲಿ ಬರೆಯಲು ಮುಂದಾಗಬೇಕು. ಇದು ಇವತ್ತು ನಾವೆಲ್ಲ ತುಸು ತಡಮಾಡನೆ ನೆರವೇರಿಸಬೇಕಾದ ಕೆಲಸ.

"ಚೀಮಾರಿಹಾಕೋಕೆ ನಿಜವಾಗಿ ಭಯವಿಲ್ಲ ಸರ್. ಆದ್ರೂ ಅವರು ಅವರ ಕ್ಷೇತ್ರದಲ್ಲಿ ಸಾಧನೆಮಾಡಿರುವುದಕ್ಕೆ ನಾನು ಬೆಲೆಇಟ್ಟು ಬರೆಯಬೇಕು ಅನ್ನಿಸ್ತು ಅಷ್ಟೆ"
ನಿಮ್ಮ ಈ ಮಾತು ನನಗೆ ತುಂಬಾ ಹಿಡಿಸಿತು.
ಆದರೆ ಅದೇ ಬೆಲೆಕೊಡುವ ನಮ್ಮ ಒಳ್ಳೆತನ ತಿಳಿದವರು ಮಾಡುವ ತಪ್ಪನ್ನು ತಪ್ಪೆಂದು ಹೇಳಲು ಅಡ್ಡಿಯಾಗಬಾರದು ಅಶ್ಟೆ. ದಿಟ್ಟತನದಿಂದ ಮಾತನಾಡಬೇಕು.

ಕುಮಾರಸ್ವಾಮಿ.ಕಡಾಕೊಳ್ಳ
ಪುಣೆ

ಶ್ರೀ said...

ಕುಮಾರ್,

Computer technologyಮತ್ತೆ ಐಟಿ ಬಗ್ಗೆ ಕನ್ನಡಲ್ಲಿ ಬರೆಯಲು ನಿಮಗೂ ಆಸಕ್ತಿಯಿರುವುದು ನನಗೆ ಸಂತೋಷ. ಎಲ್ಲಾರೂ ಒಮ್ಮೆ ಇದರಬಗ್ಗೆ ಸಮಾಲೋಚಿಸೋಣ. ಮುಂದುವರಿದಲ್ಲಿ the so called, under privileged ಅವರಿಗೆಲ್ಲಾ ಅರ್ಥಮಾಡಿಸಬಹುದು. ಹಳ್ಳಿ-ಹಳ್ಳಿಯಲ್ಲೂ ಸಧ್ಯದಲ್ಲಿ ಏನೆಲ್ಲಾ ಮುಂದಿವರೆದಿದ್ದೇವೆ ಅಂತ ಮಾತಾಡಲು ಸಾಧ್ಯ.

-ಶ್ರೀ

ravikumar.a said...

ನಮಸ್ತೆ ,

''ಒಂದೂರಲ್ಲಿ ಒಬ್ಬ ಅಪರಿಚಿತ ಮನುಷ್ಯ ಕಣ್ಮುಚ್ಚಿ ಕೂತಿದ್ದ
ಅವನನ್ನ ನೋಡಿ ನೋಡಿ"

ಒಬ್ಬ ;- ಸ್ವಾಮಿಯೆಂದು ನಮಸ್ಕರಿಸಿದ.
ಮತ್ತೊಬ್ಬ; - ಹುಚ್ಚನೆಂದು ಭಾವಿಸಿದ .
ಮಗದೊಬ್ಬ ;- ಒಬ್ಬ + ಮತ್ತೊಬ್ಬ ,
ಮುಂದೆ Enendu ಗಮನಿಸತೊಡಗಿದ. "


ಐ.ಟಿ. ಉದ್ಯಮವಾಗಲಿ ,ಬೇರೆ ಯಾವ ವೃತ್ತಿಯಾಗಲಿ
ಅದಕ್ಕೆ , ಹಲವು ಮುಖಗಳಿರುತ್ತವೆ .
ಆದರೆ
ನೀವು ಎಲ್ಲಿ ನಿಂತು ಹೇಳುತ್ತಿರುವಿರೆಂದು
ಹೇಗೆ ,
ನೀವು ಅಥವಾ ಅವರು
ನಿಮ್ಮ ಅಥವ ಅವರ ಮಾತನ್ನು ಪ್ರತಿಪಾದಿಸುತ್ತಿರುವೆರೆಂದು ,
ಸಹಜವಾಗಿ labha ಅಥವಾ ನಷ್ಟ aaguttiruttade.
ಅದನ್ನ ಅಥವಾ innavudannagali bavoodvegadinda
adellavu
ತಪ್ಪು ಅಥವಾ ಸರಿ ಎಂದು nirnayisabaaradu.
Samachitta bhava
nammadaagirali.


sahrudayi
ಎ. ravikumaar

Chaithrika said...

ಚೆನ್ನಾಗಿದೆ. ನಿಜ. ಪ್ರಭಾವಶಾಲಿ ಲೇಖಕರ ಬರಹಗಳಿಗೆ ಅನೇಕರು ಕಾಯುತ್ತಾರೆ. ಅಂಥವರು ಬರೆದುದನ್ನು ವಿವೇಚಿಸದೆ ನಂಬುವವರೂ ಹಲವರಿದ್ದಾರೆ. ಹೀಗಿರುವ ಸಂದರ್ಭಗಳಲ್ಲಿ ಲೇಖಕರು ತಾವು ಬರೆಯುವುದರ ಬಗ್ಗೆ ಜಾಗರೂಕತೆ ವಹಿಸಬೇಕು. ಅದು ಪ್ರಭಾವಶಾಲಿ ಲೇಖಕರಾದುದರ ಪರಿಣಾಮ. ಎಲ್ಲ ರೀತಿಯ ಪ್ರಸಿದ್ಧಿಗಳಿಗೂ ಅಂಟಿಕೊಂಡ ಒಳ್ಳೆ ಹಾಗೂ ಕೆಟ್ಟ ಪರಿಣಾಮಗಳಂತೆ. ಪ್ರಸಿದ್ಧಿ ಜೊತೆಗೆ ಜವಾಬ್ದಾರಿಗಳೂ ಬರುತ್ತವೆ. ಹಾಗಾಗಿ ತೋಚಿದ್ದು ಗೀಚಲು ಆಲೋಚಿಸಬೇಕಾಗುತ್ತದೆ.
ನಿಮ್ಮ ಬರಹವನ್ನು ಅನುಮೋದಿಸುತ್ತೇನೆ. ನಾನು ಹಿಂದೆ ಬರೆದ ಬ್ಲಾಗೊಂದು ಇದೇ ಅರ್ಥ ಕೊಡುತ್ತದೆ ಅನಿಸಿದೆ. ಇಲ್ಲಿದೆ: http://chaithrika.blogspot.com/2009/03/it.html