Sunday, October 21, 2007

ಆಯುಧಪೂಜೆಯ ಹಳೆಯ ನೆನಪು

“ಎಲ್ಲಿಹೋಗಿದ್ಯೊ ಇಷ್ಟ್‍ಹೊತ್ತು?”
ಅಮ್ಮನ ಒಳಶುಂಠಿ ಬಿಗಿಯಾಗುತ್ತಿತ್ತು. ಅದರ ನೋವು, ಉರಿ ಕಣ್ಣಲ್ಲಿ ನೀರು ಬರಿಸಿತ್ತು. ನಿಧಾನ ವಾಗಿ ಬಾಯಿಬಿಟ್ಟೆ “ಲಾರಿನಲ್ಲಿ ಹೋಗಿದ್ದೆ”
“ಎಲ್ಲಿಗೆ? ಯಾರ್ಜೊತೆ?”
“ಎದುರುಗಡೆ ಮನೆ ಅಣ್ಣಾಜಿ ಅವರ ಲಾರಿಲಿ, ತಣ್ಣೀರ್ಹಳ್ಳ ತಂಕ. ನಾನು ಮಧು ಇಬ್ಬರೂ ಇದ್ವಿ”
“ನಾವೆಲ್ಲಾ ಎಷ್ಟು ಯೋಚಿಸಿದ್ವಿ ಎಲ್ಲಿ ಹೋಗಿದ್ರಿ ಅಂತ, ಅದರ ಬಗ್ಗೆ ಯೇನಾದ್ರು ಇದ್ಯ ನಿಮ್ಗೆ?
ನನಗೆ ಏನೂ ಹೇಳೋಕೆ ಗೊತ್ತಾಗಲಿಲ್ಲ. ಸುಮ್ಮನಿದ್ದೆ. “ಇನ್ನೊಂದುಸಲ ಹೀಗೆ ಮಾಡಲ್ಲಮ್ಮ!” ಅಂತಷ್ಟೇ ಹೊರಗೆ ಬಂದದ್ದು.

ಅವತ್ತು ವಿಜಯದಶಮಿ. ದಸರ ಹಬ್ಬಕ್ಕೆ ಶಾಲೆಗೆ ರಜ ಬಂದಾಗ ನನ್ನ ತಾತನ ಮನೆ ಹಾಸನಕ್ಕೆ ಯಾವಾಗಲೂ ಹೋಗ್ತಿದ್ವಿ. ಆ ವರ್ಷನೂ ಹೋಗಿದ್ವಿ. ನಮ್ಮ ಮನೆಯ ಮುಂದೆ ಅಣ್ಣಾಜಿ ಅನ್ನುವವರು ತುಂಬಾ ಲಾರಿ ಇಟ್ಟುಕೊಂಡಿದ್ದರು. ವಿಜಯದಶಮಿಯ ದಿನ ಬಂತೆಂದ್ರೆ, ನಮ್ಮ ರಸ್ತೆಯ ಉದ್ದಕ್ಕೂ ಲಾರಿಗಳೇ – ಸುಮಾರು ಹದಿನೈದು ಇರಬಹುದು. ನಾನಾಗ ಎರಡನೆ ಅಥವ ಮೂರನೇ ತರಗತಿಯಲ್ಲಿದ್ದಿರಬಹುದು. ಅಷ್ಟೊಂದು ಲಾರಿಗಳನ್ನ ಒಟ್ಟಿಗೆ ನೋಡೋದೇ ಹಬ್ಬ ನನಗೆ. ಲಾರಿಯ ಮುಂಭಾಗ ಪೂರ ಬಣ್ಣ-ಬಣ್ಣದ ಹೂವುಗಳಿಂದ ಅಲಂಕಾರ ಮಾಡುತ್ತಿದ್ದರು. ಜೊತೆಗೆ ಅವತ್ತು ಅದರಲ್ಲಿ ಎಲ್ಲರನ್ನೂ ಸುಮಾರು ದೂರ ಕರೆದುಕೊಂಡು ಹೋಗುತ್ತಿದ್ದರು. ಸುಮಾರು ಜನ ಅದರಲ್ಲಿ ಹತ್ತಿದ್ದರು. ನಾನು ಮತ್ತು ನನ್ನ cousin ಇಬ್ಬರೂ ಚಿಕ್ಕವರು – ಇವೆಲ್ಲಾನೋದು ಖುಷಿಯಿಂದ ಎಲ್ಲಾ ಜನರಜೊತೆ ಹೊರಟೆವು. ನಾವಿದ್ದ ಲಾರಿಗಳು ಊರ ಹೊರಗಿನ ತಣ್ಣೇರ್ ಹಳ್ಳ ಅನ್ನೋಜಾಗಕ್ಕೆ ಕರೆದು ಕೊಂಡು ಬಂತು. ಅಲ್ಲಿ ಯೇನು ಮಾಡಿದರು ಅನ್ನೋದು ನನಗೆ ಜ್ಞ್ನಾಪಕವಿಲ್ಲ. ಅಲ್ಲಿಂದ ಮನೆಗೆ ಬಂದಾಗ ಸಂಜೆ ಕತ್ತ್ಲಾಗಿತ್ತು. ಮನೆಗೆ ಬಂದತಕ್ಷಣ ಮನೆಯವರಿಂದ ಒಂದು ಸುತ್ತು ಚೆನ್ನಾಗಿ ಪೂಜೆ ನಡೀತು.

ನಮಗೆ ದೊಡ್ಡವರ ಗಾಬರಿ ಹೇಗೆ ಅರ್ಥವಾಗುತ್ತೆ ಹೇಳಿ. ಆದರೆ ತುಂಬಾ ನಿಧಾನವಾದಾಗ ಮನೆಯಲ್ಲಿ ಬೈಗುಳ ನೆನಪಿಸಿಕೊಂಡು ಇಬ್ಬರೂ ಹೆದರಿದ್ದೇನೊ ಹೌದು!

***

ನಮ್ಮ ತಾತ ಸತ್ತ ಮೇಲೆ ನಾನು ನನ್ನ ಮಾವನ ಮನೆಗೆ ದಸರ ರಜೆಯಲ್ಲಿ ಹೋಗೋದು ವಾಡಿಕೆಯಾಯ್ತು. ಪ್ರತೀ ವರ್ಷವೂ ನನ್ನ ಮಾವನಮನೆಗೇ ರಜ ಬಂದ ಒಂದೆರಡು ದಿನದಲ್ಲಿ ಹಾಜರ್! ನನ್ನ ಮಾವನ ಹತ್ರ Bajaj Super ಸ್ಕೂಟರ್ ಇತ್ತು. ಆಯುಧಪೂಜೆಯಂದು ಅದಕ್ಕೆ ಪೂಜೆ! ಅದಾದಮೇಲೆ ನನ್ನ ಮಾವ ಅದರಲ್ಲಿ ಒಂದು round ಕರೆದು ಕೊಂಡು ಹೋಗುತ್ತಿದ್ದರು. ನನ್ನ ಹಳ್ಳಿಯಲ್ಲಿ ಯಾವ ವಾಹನ ಲಾಭವೂ ನನಗಾಗುತ್ತಿರಲಿಲ್ಲ ವಾದ್ದರಿಂದ ಅದಕ್ಕೆ ಕಾಯ್ದು ಕೂತಿರ್ತಿದ್ದೆ. ಸ್ಕೂಟರ್ಗೆ ಮಂಗಳಾರತಿ ಆದತಕ್ಷಣ ಯಾವಾಗ ನನ್ನ ಮಾವ ’ಕೂತ್ಕೊ’ ಅಂತ ಹೇಳ್ತಾರೋ ಅಂತ ಒಂಟಿಕಾಲಲ್ಲಿ ಕಾಯ್ತಿರ್ತಿದ್ದೆ. ಅವರು ಕರೆದು ಕೊಂಡು ಹೊರತಾಗ ನಾನೇ ರಾಜ ಅನ್ನೋಥರ ಅನುಭವ! ಕಾದದ್ದಕ್ಕೊ ಒಳ್ಳೆ ಫಲಿತಾಂಶ! ಆದ್ರೆ ಒಂದುಬಾರಿ ಮಾತ್ರ ಪೂಜೆ ಯಾದ ತಕ್ಷಣ ಮಾವ ಸ್ಕೂಟರ್ ಹೊರಗೆ ತೆಗೆಯಲಿಲ್ಲ. ಆದ್ರೆ ಕೇಳೋ ಧೈಯನೂ ಇಲ್ಲ. ಒಳಗೊಳಗೇ ’ಯಾಕೆ ನಮ್ಮನ್ನ ಕರೆದುಕೊಂಡು ಹೋಗ್ತಿಲ್ಲ. ಕರೆದುಕೊಂಡು ಯೋಗಕ್ಕೇನು?’ ಅನ್ನಿಸಿತ್ತು. ಮತ್ತೆ ಹೋಗಿ ಅಮ್ಮನಹತ್ರ ಪಿಸಿಮಾತಲ್ಲಿ ’ಮಾವಂಗೆ ಸ್ಕೂಟರ್ನಲ್ಲಿ ಕರೆದುಕೊಂಡು ಹೋಗಕ್ಕೇಳಮ್ಮ’ ಅಂತ ಬೇರೆ ಶಿಫಾರಸ್ ಮಾಡೋಕೂ ಪ್ರಯತ್ನ ಮಾಡಿದ್ದೆ. ಆದರೆ ಅದು ಸಂಜೆ ವರೆಗೂ ನಡೆದಿರಲಿಲ್ಲ! ಕೊನೆಗೆ ಸಂಜೆ ದೊಡ್ಡ round ಸಿಕ್ಕಿತ್ತು. ಅದರ ಖುಷಿ ಈಗ ನನ್ನ ಲಕ್ಷಗಟ್ಟಲೆ ಕೊಟ್ಟು ತಗೊಂಡಿರೋ carನಲ್ಲಿ ಹೋದಾಗ್ಲೂ ಇಲ್ಲರಿ!!

***

ಪ್ರತೀ ವಿಜಯದಶಮಿಯಂದು ನನಗೆ ರಾಮ-ರಾವಣ, ಮಹಿಷಾಸುರ-ಚಾಮುಂಡೇಶ್ವರಿ, ಪಾಂಡವರು-ಕೌರವರು ನೆನಪಿಗೆ ಬರುತ್ತಾರೋ ಇಲ್ಲವೊ, ಈ ಎರಡೂ ಘಟನೆಗಳು ನೆನಪಿಗೆ ಬರುತ್ತೆ. ನೆನಪಿಸಿಕೊಳ್ಳದ ವರ್ಷವೇ ಇಲ್ಲ! ಮುಂಚೆ ಕಾರಣ ಯಾವುದೇ ಇರಲಿ, ಇರುತ್ತಿದ್ದ ಆಸೆ, ಆ ಸಂಭ್ರಮ ಈಗ ಇಲ್ಲ. ಪೂಜೆ ಮಾಡಬೇಕು ಅಂತ ದೊಡ್ಡವರು ಹೇಳಿದ್ದಾರೆ. ನವಮಿಯಲ್ಲಿ ಆಯುಧಪೂಜೆ ಮಾಡಬೇಕು, ಮಾಡುತ್ತೇವೆ. ಆದ್ರೆ, ನನಗೇಕೋ ಹಿಂದಿದ್ದ ಖುಶಿ ಕಾಣುತ್ತಿಲ್ಲ. :(

ಏನೇ ಆಗಲಿ, ವಾಹನಗಳ ಪೂಜೆ, ಕಡ್ಲೆಪುರಿ, ಅದಾದಮೇಲೆ ಹೊರಗೆ ಹೋಗೋದು ಇವೆಲ್ಲಾ ಈಗಿನ ಚಿಕ್ಕಮಕ್ಕಳಿಗೂ ಅದೇ ಸಂಭ್ರಮ ತರುತ್ತೆ ಅಂತ ಅಂದ್ಕೊತೀನಿ.
ಬನ್ನಿ, ಈ ನವರಾತ್ರಿಯ ಸಂದರ್ಭದಲ್ಲಿ ಎಲ್ಲರಿಗೂ ಶಾಂತಿ, ಶಕ್ತಿ, ಸಂಯಮ, ಸಮ್ಮಾನ, ಸರಳತೆ, ಸಫಲತೆ, ಸಮೃದ್ಧಿ, ಸಂಸ್ಕಾರ ಹಾಗೂ ಸ್ವಾಸ್ಥ್ಯ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ (ಇದು ನನ್ನ ಚಿಕ್ಕಪ್ಪನಿಂದ ಇವತ್ತು ಬಳಗ್ಗೆ ಬಂದ ಎಸ್ಸೆಮ್ಮೆಸ್!!).

3 comments:

veena said...

ನಾನಂತೂ ಇದೇ ಮೊದಲ ಬಾರಿ ಆಯುಧ ಪೂಜೆಯನ್ನು ಆಚರಿಸಿದ್ದು

Anonymous said...

ಆದರೆ ಅದು ಸಂಜೆ ವರೆಗೂ ನಡೆದಿರಲಿಲ್ಲ! ಕೊನೆಗೆ ಸಂಜೆ ದೊಡ್ಡ round ಸಿಕ್ಕಿತ್ತು. ಅದರ ಖುಷಿ ಈಗ ನನ್ನ ಲಕ್ಷಗಟ್ಟಲೆ ಕೊಟ್ಟು ತಗೊಂಡಿರೋ carನಲ್ಲಿ ಹೋದಾಗ್ಲೂ ಇಲ್ಲರಿ!!

satyavaada maatu.

ಶ್ರೀ said...

ಧನ್ಯವಾದಗಳು ವೀಣ ಮತ್ತು ’anonymous'.

Vee ಅವರು ಈ ಬಾರಿ ಪೂಜೆ ಮಾಡಿದ್ದು ಕೇಳಿ ಸಂತೋಷವಾಯ್ತು. ಕ್ರಿಶ್ಚಿಯನ್ನರಾಗಿಯೂ ನಮ್ಮ ಪೂಜೆ ಮಾಡಿದ್ದು ನಿಜಕ್ಕೂ ಖುಶಿ ಕೊಡುವಂಥಾದ್ದು.

anonymous: ನಿಮಗೂ ಇಂಥಾ ಅನುಭವವಿದೆಯೆ?? :)